ಅಮೆರಿಕದ ಮರುಭೂಮಿಯಲ್ಲಿ ನೀರೂ ಸಿಗದೆ ಬಿಸಿಲ ಬೇಗೆಗೆ ಪ್ರಾಣ ತೆತ್ತ ಭಾರತದ ಬಾಲಕಿ.

 

ಅರಿಜೋನಾ, ಜೂ.15, 2019 : ಮೆಕ್ಸಿಕೊ ಗಡಿಯಿಂದ ಅಮೆರಿಕಕ್ಕೆ ವಲಸೆ ಹೋಗುತ್ತಿದ್ದ ಭಾರತ ಮೂಲದ ಕುಟುಂಬವೊಂದರ 6 ವರ್ಷದ ಬಾಲಕಿ ಅಮೆರಿಕದ ಅರಿಜೋನಾ ಮರುಭೂಮಿಯಲ್ಲಿ ಬಿಸಿಲ ಬೇಗೆ ತಾಳದೆ ಮೃತಪಟ್ಟಿರುವ ದಾರುಣ ಘಟನೆ ಇತ್ತೀಚೆಗೆ ನಡೆದಿದೆ.

ಮೃತ ಬಾಲಕಿಯನ್ನು ಗುರುಪ್ರೀತ್‌ ಕೌರ್‌ ಎಂದು ಗುರುತಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ತನ್ನ ಏಳನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿದ್ದ ಗುರುಪ್ರೀತ್‌ ಹೈಪರ್‌ಥೇಮಿಯಾ (ದೇಹ ತಡೆದುಕೊಳ್ಳಬಹುದಾದ ಗರಿಷ್ಠ ಉಷ್ಣಾಂಶವನ್ನೂ ಮೀರಿದ ಪರಿಸ್ಥಿತಿ)ದಿಂದ ಅಸುನೀಗಿದ್ದಾಳೆ ಎಂದು ವೈದ್ಯರು ಮತ್ತು ಅಮೆರಿಕಾ ಗಡಿ ಗಸ್ತು ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ಬಾಲಕಿ ಮತ್ತು ಆಕೆಯ ತಾಯಿಯೂ ಸೇರಿದಂತೆ ಭಾರತದ ನಾಲ್ಕು ಕುಟುಂಬಗಳನ್ನು ಮಾನವ ಕಳ್ಳಸಾಗಣೆದಾರರು ಅರಿಜೋನಾ ಮರುಭೂಮಿಯ ಲ್ಯೂಕ್‌ವಿಲ್ಲೆ ಎಂಬಲ್ಲಿ ಇಳಿಸಿ, ನಿಗದಿತ ಸ್ಥಳಕ್ಕೆ ಬಂದು ತಲುಪವಂತೆ ಸೂಚಿಸಿ ಹೋಗಿದ್ದರು. ನಂತರ ಈ ಕುಟುಂಬಗಳು ಅಮೆರಿಕದತ್ತ ಹೆಜ್ಜೆ ಹಾಕಿದ್ದವು. ಸ್ವಲ್ಪ ದೂರ ನಡೆದ ನಂತರ ಗುರುಪ್ರೀತ್‌ ತಾಯಿಯು ಆಕೆಯನ್ನು ಒಬ್ಬ ಮಹಿಳೆ ಬಳಿ ಬಿಟ್ಟು ನೀರು ಹುಡುಕಿ ತರಲೆಂದು ಇತರ ವಲಸಿಗರೊಂದಿಗೆ ತೆರಳಿದ್ದರು.

ತಾಯಿ ಅತ್ತ ನೀರು ಹುಡುಕುತ್ತಿರುವಾಗಲೇ ಗುರುಪ್ರಿತ್‌ ಕೌರ್‌ ಬಿಸಿಲಿನ ಬೇಗೆ ತಾಳಲಾರದೆ ಅಸುನೀಗಿದ್ದಾಳೆ. ಬೇಸಿಗೆಯಲ್ಲಿ ಸಾಮಾನ್ಯವಾಗಿ ಅರಿಜೋನಾ ಮರುಭೂಮಿಯಲ್ಲಿ 42 ಡಿಗ್ರಿ ತಾಪಮಾನವಿರುತ್ತದೆ. ನೀರು ತರಲು ಹೋಗಿದ್ದ ಗುರುಪ್ರಿತ್‌ ತಾಯಿಯೂ ಕೂಡ ಮರುಭೂಮಿಯಲ್ಲಿ ಅಲೆದಾಡಿದ್ದಾರೆ. ಕೊನೆಗೆ ಮಗಳಿಗಾಗಿ ಸತತ 22 ಗಂಟೆಗಳ ಕಾಲ ಹುಡುಕಾಟ ನಡೆಸಿದ್ದಾರೆ. ಈ ಅಲೆದಾಟದ ಹೆಜ್ಜೆಗುರುತುಗಳ ಜಾಡಿ ಹಿಡಿದು ಬಂದ ಅಮೆರಿಕದ ಗಡಿ ಗಸ್ತುಪಡೆಗೆ ಮಹಿಳೆ ಸಿಕ್ಕಿದ್ದಾರೆ. ಮಹಿಳೆ ನೀಡಿದ ಮಾಹಿತಿ ಮೇರೆಗೆ ಬಾಲಕಿಗಾಗಿ ಹುಡುಕಾಟ ನಡೆಸಿದ ಗಡಿ ಗಸ್ತುಪಡೆಗೆ ನಾಲ್ಕು ತಾಸುಗಳ ನಂತರ ಬಾಲಕಿಯ ಮೃತ ದೇಹವೂ ಸಿಕ್ಕಿದೆ. ಬಾಲಕಿಯ ದೇಹವನ್ನು ಅಲ್ಲಿಯೇ ಬಿಟ್ಟು ಹೋಗಿದ್ದ ಮತ್ತೊಬ್ಬ ಮಹಿಳೆ ಮತ್ತು ಆಕೆಯ 8 ವರ್ಷದ ಮಗುವನ್ನು ಅಮೆರಿಕ ಗಡಿ ತಲುಪುವ ಮೊದಲೇ ಗಸ್ತು ಪಡೆ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ನುಳಿದ ವಲಸಿಗರಿಗಾಗಿ ಪತ್ತೆ ಕಾರ್ಯಾಚರಣೆ ಆರಂಭಿಸಿರುವುದಾಗಿ ಗಡಿ ಗಸ್ತು ಪಡೆ ಅಧಿಕಾರಿಗಳು ತಿಳಿಸಿದ್ದಾರೆ. ಕಳ್ಳ ಸಾಗಣೆದಾರರ ದುರುದ್ಧೇಶದ ಕೃತ್ಯಗಳಿಗೆ ಅಮಾಯಕ ವಲಸಿಗರು ಪ್ರಾಣ ತೆರುತ್ತಲೇ ಇದ್ದಾರೆ ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೃಪೆ : ಪ್ರಜಾವಾಣಿ

A deceased child, believed to be a seven-year-old citizen of India, was discovered 17 miles west of Lukeville by U.S. Border Patrol yesterday morning