ಈದ್ಗಾ ಮೈದಾನದಲ್ಲಿ ಸಂಭ್ರಮ ಸಡಗರದ 75ನೇ ಸ್ವಾತಂತ್ರ್ಯೋತ್ಸವ: ಮೊದಲ ಬಾರಿ ಮೈದಾನದಲ್ಲಿ ಮೊಳಗಿದ ರಾಷ್ಟ್ರಗೀತೆ.

kannada t-shirts

ಬೆಂಗಳೂರು,ಆಗಸ್ಟ್,15,2022(www.justkannada.in):  ಚಾಮರಾಜಪೇಟೆ ಈದ್ಗಾ ಆಟದ ಮೈದಾನದಲ್ಲಿ ಇದೇ ಮೊದಲ ಬಾರಿ ಹಿಂದೆಂದೂ ನಡೆಯದ ರೀತಿಯಲ್ಲಿ ಅತ್ಯಂತ ಸಂಭ್ರಮ ಸಡಗರದಿಂದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಆಚರಿಸಲಾಯಿತು.

ಚಾಮರಾಜಪೇಟೆ ಶಾಸಕರು ಹಾಗೂ ಮಾಜಿ ಸಚಿವ  ಬಿ ಜೆಡ್ ಜಮೀರ್ ಅಹ್ಮದ್ ಖಾನ್, ಸಂಸದ ಪಿ ಸಿ ಮೋಹನ್ ಹಾಗೂ ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಎಂ ಜಿ ಶಿವಣ್ಣ ಅವರು ವೇದಿಕೆಗೆ ಆಗಮಿಸಿ ಮಹಾತ್ಮ ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬಳಿಕ ಎಂ ಜಿ ಶಿವಣ್ಣ ಅವರು ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣ ನೆರವೇರಿಸಿದರು . ಜೋಗುಳ ಸಿದ್ದರಾಜು ತಂಡದಿಂದ ಚಾಮರಾಜಪೇಟೆ ಮೈದಾನದಲ್ಲಿ ಮೊದಲ ಬಾರಿ ರಾಷ್ಟ್ರಗೀತೆ ಹಾಗೂ ನಾಡಗೀತೆ ಮೊಳಗಿದವು.

ಚಾಮರಾಜಪೇಟೆ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯ ಮಕ್ಕಳಿಂದ ಒನಕೆ ಓಬವ್ವ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಕುರಿತು ನಾಟಕ, ‘ಝಂಡಾ ಊಂಚಾ ರಹೇ ಹಮಾರ’ ಸಾಮೂಹಿಕ ದೇಶಭಕ್ತಿ ಗೀತೆ ಪ್ರಸ್ತುತಿ ಪಡಿಸಿದರು. ನಂತರ ನಡೆದ ಬಿಬಿಎಂಪಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ವೀರಗಾಸೆ ಹಾಗೂ ಸರ್ಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಮಕ್ಕಳಿಂದ ದೇಶಭಕ್ತಿ ನೃತ್ಯ ಸೇರಿದಂತೆ ಶಾಲಾ ವಿದ್ಯಾರ್ಥಿಗಳಿಂದ ನಡೆದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದವರ ಮನಸೂರೆಗೊಂಡವು.

ಮೈದಾನದ ಎಡ ಮತ್ತು ಬಲ ಭಾಗದಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ವ್ಯವಸ್ಥೆ ಹಾಗೂ ಕಾರ್ಯಕ್ರಮ ವೀಕ್ಷಿಸಲು 500 ಆಸನಗಳ ವ್ಯವಸ್ಥೆ ಮಾಡಲಾಗಿತ್ತು.

ಇಲಾಖೆ ವತಿಯಿಂದ ಒಟ್ಟು ಒಂದು ಗಂಟೆಯ ಕಾಲ ನಿಗದಿ ಪಡಿಸಿದ್ದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್, ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿಗಳಾದ  ಎಂ ಜಿ  ಶಿವಣ್ಣ, ಸಂಸದರಾದ ಶ್ರೀ ಪಿ ಸಿ ಮೋಹನ್, ಚಾಮರಾಜಪೇಟೆ ಶಾಸಕ ಬಿ ಜೆಡ್ ಜಮೀರ್ ಅಹ್ಮದ್ ಖಾನ್ ಅವರು ವೇದಿಕೆ ಹಂಚಿಕೊಂಡಿದ್ದರು.

ಕಾರ್ಯಕ್ರಮದ ಬಳಿಕ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಶಾಸಕ ಜಮೀರ್ ಅಹ್ಮದ್ ಖಾನ್ ಅವರು, ನಾಡಿನ ಸಮಸ್ತ ಜನತೆಗೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳು. ಇಂದು ನನ್ನ ಪಾಲಿಗೆ ಅತ್ಯಂತ ಸಂತೋಷದ ದಿನ. ಕಾರಣ, ನಾನು 2ತಿಂಗಳ ಹಿಂದೆಯೇ ಘೋಷಿಸಿದ್ದಂತೆ, ಹಿಂದೆಂದೂ ನಡೆಯದ ರೀತಿಯಲ್ಲಿ ಅತ್ಯಂತ ಅದ್ದೂರಿಯಾಗಿ ಚಾಮರಾಜಪೇಟೆ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿರುವುದು ಬಹಳ ಖುಷಿ ತಂದಿದೆ. ಕನ್ನಡ ರಾಜ್ಯೋತ್ಸವ ಹಾಗೂ ಗಣರಾಜ್ಯೋತ್ಸವದಂದೂ ಧ್ವಜಾರೋಹಣ ಮಾಡುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Key words: 75th Independence Day –celebrations- Idga Maidan

website developers in mysore