ಒಂದೇ ವರ್ಷ ಎರಡು ಮೈಲಿಗಲ್ಲು ಬರೆದ ಮಹಿಳಾ ಐಎಫ್‌ಎಸ್ ಅಧಿಕಾರಿ

ಏಪ್ರಿಲ್‌ನಲ್ಲಿ ಅಂಟಾರ್ಟಿಕ ಏರಿದ ಸಾಧನೆ; ಈಗ ಬಿಆರ್‌ಟಿ ಹುಲಿಧಾಮದ ಮೊದಲ ಮಹಿಳಾ ನಿರ್ದೇಶಕಿಯಾದ ಹಿರಿಮೆ

ಮೈಸೂರು, ಆಗಸ್ಟ್ 14, 2022(www.justkannada.in) : ಮೈಸೂರಿನಿಂದ ಚಾಮರಾಜನಗರ ಜಿಲ್ಲೆಗೆ ವರ್ಗಗೊಂಡಿರುವ ಮಹಿಳಾ ಐಎಫ್‌ಎಸ್ ಅಧಿಕಾರಿ ದೀಪ್ ಕಂಟ್ರಾಕ್ಟರ್ ದೀಪ್ ಜೆ ಕಂಟ್ರಾಕ್ಟರ್ ಒಂದೇ ವರ್ಷ ಎರಡು ಹೊಸ ಮೈಲಿಗಲ್ಲು ಬರೆದಿದ್ದಾರೆ. ಅದೂ ನಾಲ್ಕು ತಿಂಗಳ ಅವಧಿಯಲ್ಲಿ !

ಭಾರತೀಯ ಅರಣ್ಯ ಸೇವೆ( ಐಎಫ್‌ಎಸ್)ಕರ್ನಾಟಕ ಕೇಡರ್ ಅಧಿಕಾರಿಯಾಗಿರುವ, ಸದ್ಯ ಚಾಮರಾಜನಗರ ಜಿಲ್ಲೆ ಬಿಳಿಗಿರಿರಂಗ ಹುಲಿಧಾಮದ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿರುವ ದೀಪ್ ಕಂಟ್ರಾಕ್ಟರ್ ಈ ವರ್ಷದ ಏಪ್ರಿಲ್‌ನಲ್ಲಿ ಅಂಟಾರ್ಟಿಕ ಚಾರಣ ಕೈಗೊಂಡ ದೇಶದ ಮೊದಲ ಮಹಿಳಾ ಅಧಿಕಾರಿ ಎನ್ನಿಸಿದ್ದರು. ಈಗ ಬಿಳಿಗಿರಂಗನ ಹುಲಿಧಾಮದ ಮೊದಲ ಮಹಿಳಾ ನಿರ್ದೇಶಕಿ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ.

ಅಂಟಾರ್ಟಿಕ ಏರಿದ ಅಧಿಕಾರಿ

ವಿಶ್ವದ ಅತಿ ದೊಡ್ಡ ೫ನೇ ಖಂಡ ಅಂಟಾರ್ಟಿಕ ಎಂದರೆ ಅದು ಐಸ್ ನಿಂದ ಕೂಡಿದ ಪ್ರದೇಶ. ಅಲ್ಲಿ ಚಾರಣ ಮಾಡಬೇಕೆಂದರೆ ಎಂಟೆದೆ ಬೇಕೇಬೇಕು. ಅಂಥದರಲ್ಲಿ ದೀಪ್ ಕಂಟ್ರಾಕ್ಟರ್ ಈ ವರ್ಷದ ಏಪ್ರಿಲ್‌ನಲ್ಲಿ ಹವಾಮಾನ್ಯ ಬದಲಾವಣೆ ಕುರಿತಾದ ಅಂಟಾರ್ಟಿಕ ಯಾತ್ರೆಯನ್ನು ಕೈಗೊಂಡಿದ್ದರು. ಯಶಸ್ವಿಯಾಗಿ ಪೂರ್ಣಗೊಳಿಸಿದ್ದರು. ಈ ಯಾತ್ರೆ ಪೂರ್ಣಗೊಳಿಸಿದ ಮೂರನೇ ಐಎಫ್‌ಎಸ್ ಹಾಗೂ ಮೊದಲ ಮಹಿಳಾ ಐಎಫ್‌ಎಸ್ ಅಧಿಕಾರಿ ಎನ್ನಿಸಿದ್ದರು.

ರಾಜ್ಯದ ವನ್ಯಧಾಮಗಳಲ್ಲಿ ಐಎಫ್‌ಎಸ್ ಅಧಿಕಾರಿಗಳು ಸೇವೆ ಮಾಡಿದ ಉದಾಹರಣೆಯಿದೆ. ಆದರೆ ಹುಲಿಧಾಮದ ನಿರ್ದೇಶಕರಾಗಿ ಬಹುತೇಕ ಪುರುಷರೇ ಕೆಲಸ ಮಾಡಿದ್ದಾರೆ. ಅದರಲ್ಲೂ ಏಷಿಯಾದಲ್ಲಿಯೇ ಅತಿ ಹೆಚ್ಚು ಹುಲಿ ಹಾಗೂ ಆನೆಗಳ ಸಾಂದ್ರತೆಯಿರುವ ನಾಗರಹೊಳೆ-ಬಂಡೀಪುರ- ಬಿಳಿಗಿರಿರಂಗ ಹುಲಿಧಾಮಗಳಲ್ಲಿ ಮಹಿಳಾ ಐಎಫ್‌ಎಸ್ ಅಧಿಕಾರಿಗಳು ಕಾರ‌್ಯನಿರ್ವಹಿಸಲು ಅವಕಾಶವೇ ಸಿಕ್ಕಿರಲಿಲ್ಲ. ಕೆಲವರಿಗೆ ಆಸಕ್ತಿಯಿದ್ದರೂ ಪುರುಷ ಲಾಬಿ ಹಾಗೂ ಹುಲಿ ಧಾಮಗಳಲ್ಲಿ ಮಹಿಳೆ ಚುಕ್ಕಾಣಿ ಹಿಡಿಯಬಲ್ಲಳೇ ಎನ್ನುವ ಯೋಚನೆಯೂ ಈ ಹುದ್ದೆಯಿಂದ ದೂರ ಇರಲಿ ಕಾರಣವಾಗಿತ್ತು.

ಈ ವರ್ಷದ ಆರಂಭದಲ್ಲೇ ದೀಪ್ ಕಂಟ್ರಾಕ್ಟರ್ ಅವರು ಬಂಡೀಪುರ ಹುಲಿ ಧಾಮದ ನಿರ್ದೇಶಕರಾಗುತ್ತಾರೆ ಎನ್ನುವ ನಿರೀಕ್ಷೆಯಿತ್ತು. ಅಲ್ಲಿಯೂ ಅವಕಾಶ ಸಿಕ್ಕಿರಲಿಲ್ಲ. ಈಗ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗ ಹುಲಿಧಾಮದ ನಿರ್ದೇಶಕರ ಹುದ್ದೆ ಲಭಿಸಿದ್ದು, ಗುರುವಾರವೇ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.

ಈ ಹಿಂದೆ ದಾಂಡೇಲಿ ಅಣಶಿ ವನ್ಯಧಾಮಕ್ಕೆ ರಾಧಾದೇವಿ ನಿರ್ದೇಶಕರಾಗಿದ್ದರು. ಅವರ ನಂತರ ಇದು ಹುಲಿ ಯೋಜನೆಯಾಗಿತ್ತು. ಭದ್ರಾ ಹುಲಿ ಯೋಜನೆಗೆ ಸ್ಮಿತಾ ಬಿಜ್ಜೂರ್ ನಿರ್ದೇಶಕರಾಗಿದ್ದರು. ನಾಗರಹೊಳೆ ಎಸಿಎಫ್ ಹಾಗೂ ಮಲೈಮಹದೇಶ್ವರ ವನ್ಯಧಾಮದ ಡಿಸಿಎಫ್ ಆಗಿ ಮಾಲತಿಪ್ರಿಯ ಕಾರ‌್ಯನಿರ್ವಹಿಸಿದ್ದರು.ಈ ಬೆಳವಣಿಗೆ ಬಗ್ಗೆ ಮಹಿಳಾ ಐಎಫ್‌ಎಸ್ ಅಧಿಕಾರಿಗಳಿಗೂ ಖುಷಿಯಿದೆ.

‘ ಕರ್ನಾಟಕದಲ್ಲಿ ಬಹಳಷ್ಟು ಮಹಿಳಾ ಐಎಫ್‌ಎಸ್ ಅಧಿಕಾರಿಗಳಿದ್ದಾರೆ. ಆದರೆ ಹುಲಿಧಾಮಗಳಲ್ಲಿ, ವಿಶೇಷವಾಗಿ ದಕ್ಷಿಣ ಕರ್ನಾಟಕ ಭಾಗದ ಹುಲಿಧಾಮಗಳ ನಿರ್ದೇಶಕರಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಹುಲಿಧಾಮಗಳಲ್ಲಿ ಕಾರ‌್ಯನಿರ್ವಹಿಸುವುದು ಅದೊಂದು ಅದ್ಭುತವಾದ ಅನುಭವ. ನಿಜವಾಗಿಯೂ ಹುಲಿಧಾಮಗಳಲ್ಲಿ ಕೆಲಸ ಮಾಡುವಾಗ ಸವಾಲುಗಳು ಹೆಚ್ಚು. ಹೆಣ್ಣುಮಕ್ಕಳು ಈ ಸವಾಲು ಹೆಚ್ಚು ಎದುರಿಸಬೇಕಾಗುತ್ತದೆ. ದೀಪ್ ಅವರಿಗೆ ಆಸಕ್ತಿಯಿದೆ. ಸವಾಲುಗಳನ್ನು ಎದುರಿಸುವ ಸಾಮರ್ಥ್ಯವೂ ಇದೆ. ಮುಂದೆ ಬರುವ ಅಧಿಕಾರಿಗಳಿಗೆ ಅವರು ಮಾದರಿಯಾಗುವ ಕೆಲಸ ಮಾಡುವ ವಿಶ್ವಾಸವಿದೆ ’ ಎನ್ನುತ್ತಾರೆ ಕರ್ನಾಟಕದ ಹಿರಿಯ ಐಎಫ್‌ಎಸ್ ಅಧಿಕಾರಿಯಾಗಿರುವ ಶಾಶ್ವತಿ ಮಿಶ್ರ.