ಮಹಾಮಳೆಗೆ ರಾಜ್ಯದ ಗಡಿಭಾಗ ತತ್ತರ: ಆಲಮಟ್ಟಿ ಜಲಾಶಯದ 12 ಗೇಟ್ ತೆರೆದು ಕೃಷ್ಣೆಗೆ ನೀರು, ಕೃಷ್ಣಾ, ಉಪನದಿಗಳ ಹರಿವು ಹೆಚ್ಚಳ

ಬೆಂಗಳೂರು:ಜುಲೈ-29: ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಆಲಮಟ್ಟಿ ಲಾಲಬಹಾದ್ದೂರ್ ಶಾಸ್ತ್ರಿ ಜಲಾಶಯ ಭರ್ತಿಗೆ ಕಲವೇ ಟಿಎಂಸಿ ಬೇಕಿದ್ದು, ಒಳಹರಿವು ಹೆಚ್ಚಿದ ಹಿನ್ನೆಲೆ ಭಾನುವಾರ ಅಣೆಕಟ್ಟೆಯ 12 ಗೇಟ್ ತೆರೆದು ಕೃಷ್ಣಾ ನದಿಗೆ ನೀರು ಬಿಡಲಾಗಿದೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ಕಲ್ಲೋಳ-ಯಡೂರ ಸೇರಿ ಕೆಳಹಂತದ 3 ಸೇತುವೆಗಳು ಮತ್ತೆ ಜಲಾವೃತಗೊಂಡಿವೆ. ಕೃಷ್ಣಾ, ಉಪನದಿಗಳ ಹರಿವು ಹೆಚ್ಚಿದೆ.

ರಾಜ್ಯದಲ್ಲಿ ಸಮರ್ಪಕವಾಗಿ ಮಳೆ ಆಗಿಲ್ಲ. ಆದರೆ, ಕೃಷ್ಣೆಯ ಉಗಮಸ್ಥಾನ ಮಹಾಬಳೇಶ್ವರ ಸೇರಿ ಜಲಾನಯನ ಪ್ರದೇಶ ದಲ್ಲಿ ವ್ಯಾಪಕ ಮಳೆ ಸುರಿಯುತ್ತಿದ್ದು, ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಹೆಚ್ಚಿದೆ. ವಿದ್ಯುತ್ ಉತ್ಪಾದನೆ ಘಟಕದ ಮೂಲಕ 45 ಸಾವಿರ, ಗೇಟ್​ಗಳ ಮೂಲಕ 56 ಸಾವಿರ ಸೇರಿ 1ಲಕ್ಷ 1ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ.

ಭಾನುವಾರ ಬೆಳಗ್ಗೆ ಮಾಹಿತಿಯಂತೆ 519.60ಮೀ.ಗರಿಷ್ಠ ಎತ್ತರದ ಜಲಾಶಯದಲ್ಲಿ 519.35ಮೀ.ಎತ್ತರವರೆಗೆ 118.081ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 80,000 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಇದೇ ದಿನದಂದು ಜಲಾಶಯ 519.03 ಮೀ.ವರೆಗೆ ತುಂಬಿತ್ತು. 92,657 ಕ್ಯೂಸೆಕ್ ಒಳಹರಿವು, 53,708 ಕ್ಯೂಸೆಕ್ ಹೊರಹರಿವು 113.432 ಟಿಎಂಸಿ ನೀರು ಸಂಗ್ರಹವಾಗಿತ್ತು. ಜಲಾಶಯ ಗರಿಷ್ಠ 123.081ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯ ಹೊಂದಿದೆ.

ಮೂರು ಸೇತುವೆಗಳು ಜಲಾವೃತ: ಚಿಕ್ಕೋಡಿ ತಾಲೂಕಿನ ಕಲ್ಲೋಳ-ಯಡೂರ ಸೇತುವೆ ಬಳಿ 93, 254 ಕ್ಯೂಸೆಕ್ ನೀರು ಹರಿಯುತ್ತಿದ್ದು, ಸೇತುವೆಗಳು ಜಲಾವೃತಗೊಂಡಿವೆ. ಕೆಳ ಹಂತದ ಕಾರದಗಾ-ಭೋಜ, ಮಲಿಕವಾಡ-ದತ್ತವಾಡ ಸೇತುವೆ ಮೇಲಿನ ಸಂಚಾರ ಬಂದ್ ಆಗಿವೆ. ಸಂಭವನೀಯ ಪ್ರವಾಹ ಪರಿಸ್ಥಿತಿ ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೋಟ್​ಗಳು, ನುರಿತ ಈಜುಗಾರರು, ಅಗತ್ಯ ಸಾಮಗ್ರಿ, ಆಹಾರ ಪೊಟ್ಟಣಗಳು ಸೇರಿ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಡಾ.ಸಂತೋಷ ಬಿರಾದಾರ ತಿಳಿಸಿದ್ದಾರೆ.

ಖಾನಾಪುರ ತಾಲೂಕಿನಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಮಲಪ್ರಭಾ, ಮಹದಾಯಿ, ಪಾಂಡರಿ ನದಿಗಳಲ್ಲಿ ನೀರಿನ ಮಟ್ಟ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಸಹ್ಯಾದ್ರಿ ಘಟ್ಟ ಪ್ರದೇಶದಲ್ಲಿ 2 ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಕೃಷ್ಣಾ ಮತ್ತು ಉಪನದಿಗಳಾದ ಘಟಪ್ರಭಾ, ದೂಧಗಂಗಾ, ವೇದಗಂಗಾ, ಹಿರಣ್ಯಕೇಶಿ, ಮಾರ್ಕಂಡೇಯ ನದಿ ನೀರಿನ ಹರಿವು ಹೆಚ್ಚಳವಾಗಿದೆ.

ಇಂದು-ನಾಳೆ ರೈಲು ಸಂಚಾರ ರದ್ದು

ಬೆಳಗಾವಿಯಲ್ಲಿ ಅತಿವೃಷ್ಟಿ ಯಿಂದಾಗಿ ಮುನ್ನೆಚ್ಚರಿಕೆ ಕ್ರಮ ವಾಗಿ ತಿರುಪತಿ-ಕೊಲ್ಲಾಪುರ ಮತ್ತು ಎರ್ನಾಕುಲಂ-ಪುಣೆ ಮಾರ್ಗವಾಗಿ ಎರಡು ರೈಲು ಸಂಚಾರ ರದ್ದಾಗಿದೆ. ಜು.28 ರಂದು ತಿರುಪತಿ- ಕೊಲ್ಲಾಪುರ ಎಕ್ಸ್​ಪ್ರೆಸ್(ರೈ.ನಂ.17415), 29ರಂದು ಎರ್ನಾಕುಲಂ-ಪುಣೆ ಎಕ್ಸ್​ಪ್ರೆಸ್(ರೈ.ನಂ.11098) ಸಂಚಾರ ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಮುಂಬೈನ ಬದ್ಲಾಪುರದಲ್ಲಿ ದಾಖಲೆ ಮಳೆ

ಮುಂಬೈ: ಶನಿವಾರ ಭಾರಿ ಮಳೆಯಿಂದಾಗಿ ಥಾಣೆ ಬಳಿ ಮಹಾಲಕ್ಷ್ಮೀ ಎಕ್ಸ್​ಪ್ರೆಸ್ ರೈಲು ಪ್ರವಾಹದಲ್ಲಿ ಸಿಲುಕಿಕೊಂಡ ಪ್ರಕರಣ ಬಳಿಕ ಮಹಾರಾಷ್ಟ್ರದ ವಿವಿಧ ಭಾಗದಲ್ಲಿ ಶನಿವಾರ ದಾಖಲೆ ಪ್ರಮಾಣದಲ್ಲಿ ಭಾರಿ ಮಳೆ ಸುರಿದಿದೆ. ಥಾಣೆ, ಬದ್ಲಾಪುರ್, ಕಲ್ಯಾಣ್​ನಲ್ಲಿ 200 ಮಿ.ಮೀ.ಗೂ ಅಧಿಕ ಮಳೆಯಾಗಿದ್ದು, ಹಲವು ಜನವಸತಿ ಪ್ರದೇಶಗಳು ಜಲಾವೃತವಾಗಿವೆ. ಥಾಣೆಯಲ್ಲಿ 236 ಎಂಎಂ, ಕಲ್ಯಾಣ್ 231, ಅಂಬರ್​ನಾಥ್ 280 ಹಾಗೂ ಬದ್ಲಾಪುರ್​ದಲ್ಲಿ ಬರೋಬ್ಬರಿ 447 ಎಂಎಂ ಮಳೆ ಸುರಿದಿದೆ. 2015ರ ನಂತರ ಮುಂಬೈನ ಬದ್ಲಾಪುರ್​ದಲ್ಲಿ ಮೊದಲ ಬಾರಿ ದಾಖಲೆ ಪ್ರಮಾಣದಲ್ಲಿ ಮಳೆ ಸುರಿದಿದೆ. ಮುಂದಿನ 48 ಗಂಟೆಗಳಲ್ಲೂ ಭಾರಿ ಮಳೆ ಸುರಿಯುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ನವಮುಂಬೈನಲ್ಲೂ ಮಳೆಯಾಗಿದ್ದು, ನೆರುಲ್​ನಲ್ಲಿ 240, ಬೆಲಾಪುರ್ 221, ಐರೋಲಿ 212 ಹಾಗೂ ವಾಷಿಯಲ್ಲಿ 211 ಮಿಲಿ ಮೀಟರ್ ಮಳೆ ಸುರಿದಿದೆ.

ಘಟ್ಟ ಪ್ರದೇಶ- ಮಲೆನಾಡಲ್ಲಿ ಸಾಧಾರಣ ಮಳೆ

ತುಂಗಾ, ಭದ್ರಾ, ಶರಾವತಿ ನದಿ ಪಾತ್ರಗಳಲ್ಲಿ ಮಳೆಯಾಗುತ್ತಿರು ವುದರಿಂದ ನದಿಗಳು ಮೈದುಂಬಿಕೊಂಡಿವೆ. ಶಿವಮೊಗ್ಗದ ಕೆಲವೆಡೆ ಸಾಧಾರಣ ಮಳೆಯಾಗಿದೆ. ಲಿಂಗನಮಕ್ಕಿ ಜಲಾಶಯಕ್ಕೆ 12,494 ಕ್ಯೂಸೆಕ್, ಭದ್ರಾಗೆ 5,006 ಕ್ಯೂ., ತುಂಗಾ ಡ್ಯಾಂಗೆ 11,304 ಕ್ಯೂ. ನೀರು ಬರುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಹಾಗೂ ಘಟ್ಟ ಪ್ರದೇಶ, ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುತ್ತಿದೆ. ಅಘನಾಶಿನಿ, ಗಂಗಾವಳಿ ನದಿಗಳು ಕೆಂಬಣ್ಣದಲ್ಲಿ ತುಂಬಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದರೂ ಒಂದು ದಿನ ಬಿಡುವು ಕೊಟ್ಟು ಮತ್ತೆ ಮಳೆ ಬೀಳುತ್ತಿರುವುದರಿಂದ ಪ್ರವಾಹ ಭೀತಿ ಇಲ್ಲ. ಶಿರಸಿ, ಸಿದ್ದಾಪುರ, ಕುಮಟಾ, ಹೊನ್ನಾವರದಲ್ಲೂ ಮಳೆ ಸುರಿಯುತ್ತಿದೆ. ಹುಬ್ಬಳ್ಳಿ-ಧಾರವಾಡ, ಗದಗದಲ್ಲಿ ಅಲ್ಪ ಮಳೆಯಾಗಿದೆ.
ಕೃಪೆ;ವಿಜಯವಾಣಿ

ಮಹಾಮಳೆಗೆ ರಾಜ್ಯದ ಗಡಿಭಾಗ ತತ್ತರ: ಆಲಮಟ್ಟಿ ಜಲಾಶಯದ 12 ಗೇಟ್ ತೆರೆದು ಕೃಷ್ಣೆಗೆ ನೀರು, ಕೃಷ್ಣಾ, ಉಪನದಿಗಳ ಹರಿವು ಹೆಚ್ಚಳ

monsoon-mayhem-death-toll-in-rajasthan-mounts-to-22-more-rainfall-awaits-maharashtra-tomorrow