ಅ.19ರಿಂದ 22ರವರೆಗೆ ಡಾ.ಎಸ್.ಎಲ್. ಭೈರಪ್ಪ ಅವರ ‘ಪರ್ವ’ ಇಂಗ್ಲಿಷ್ ಅವತರಣಿಕೆ ರಂಗ ಪ್ರಯೋಗ: ಅ.1ರಂದು ಸಂವಾದ ಕಾರ್ಯಕ್ರಮ

ಬೆಂಗಳೂರು, ಸೆಪ್ಟೆಂಬರ್ 25, 2023 (www.justkannada.in): ನಟ ಮತ್ತು ನಿರ್ದೇಶಕ ಪ್ರಕಾಶ್ ಬೆಳವಾಡಿ ಅವರು ಹಿರಿಯ ಸಾಹಿತಿ ಡಾ.ಎಸ್‌.ಎಲ್. ಭೈರಪ್ಪ ಅವರ ಕೃತಿ ‘ಪರ್ವ’ ಇಂಗ್ಲಿಷ್‌ ಅವತರಣಿಕೆ ರಂಗಪ್ರಯೋಗಕ್ಕೆ ಸಜ್ಜುಗೊಳಿಸಿದ್ದಾರೆ. 8 ಗಂಟೆಗಳ ಪ್ರದರ್ಶನ ಅಕ್ಟೋಬರ್ 19 ರಿಂದ 22ರವರೆಗೆ ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ನಡೆಯಲಿದೆ.

ಇದಕ್ಕೂ ಮುನ್ನ ಅ.01ರಂದು ಸೆಂಟರ್ ಫಾರ್ ಫಿಲ್ಮ್ ಅಂಡ್ ಡ್ರಾಮಾದ, ಎಸ್.ಎಲ್.ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಹಾಗೂ ಬುಕ್ ಬ್ರಹ್ಮ ಸಹಯೋಗದಲ್ಲಿ ಬೆಂಗಳೂರಿನಲ್ಲಿ ಡಾ.ಎಸ್‌.ಎಲ್. ಭೈರಪ್ಪ ಅವರೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಬೆಳಗ್ಗೆ 10ಗಂಟೆಯಿಂದ ಸಂವಾದ ಕಾರ್ಯಕ್ರಮ ನಡೆಯಲಿದೆ.

ಅಕಾಡೆಮಿ ಆಫ್ ಮ್ಯೂಜಿಕ್ ನ ಅಧ್ಯಕ್ಷ ಸ್ವಾಗತ ಭಾಷಣ ಮಾಡಲಿದ್ದಾರೆ. ಪ್ರಕಾಶ್ ಬೆಳವಾಡಿ ಅವರು ಪರ್ವವನ್ನು ಆಂಗ್ಲ ಅವತರಣಿಕೆಯಲ್ಲಿ ರಂಗಕ್ಕೆ ತಂದ ಬಗ್ಗೆ ಮಾತನಾಡಲಿದ್ದಾರೆ. ಕಾದಂಬರಿಕಾರರಾದ ಸಹನ ವಿಜಯ್ ಕುಮಾರ್ ಅವರು ಅವಲೋಕ, ಭೈರಪ್ಪನವರ ಕಾದಂಬರಿ ಶ್ರೇಣಿಯಲ್ಲಿ ಪರ್ವದ ಸಂದರ್ಭದ ಕುರಿತು ವಿಷಯ ಮಂಡಿಸಲಿದ್ದಾರೆ. ಇದರ ಜತೆಗೆ ಡಾ.ಎಸ್‌.ಎಲ್. ಭೈರಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.