ಎಲ್ಲಾ ಕೊರೋನಾ ಸೋಂಕಿತರಿಗೂ ಉಚಿತ ಚಿಕಿತ್ಸೆ ನೀಡಿ-  ಸರಕಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಗ್ರಹ

ಬೆಂಗಳೂರು,ಜೂ, 25,2020(www.justkannada.in): ಕೊರೋನಾ ವಿಚಾರದಲ್ಲಿ ಬಡವರು, ಶ್ರೀಮಂತರು, ಅಧಿಕಾರಿಗಳು, ಸಾಮಾನ್ಯ ಜನರು ಎಂದು ಭೇದ-ಭಾವ ಮಾಡದೇ ಎಲ್ಲರಿಗೂ ಸಮಾನವಾಗಿ ಉಚಿತ ಚಿಕಿತ್ಸೆ ನೀಡಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಸರಕಾರಕ್ಕೆ ಆಗ್ರಹಿಸಿದ್ದಾರೆ.

ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಶಿವಕುಮಾರ್, ಕೊರೋನಾ ಪರಿಸ್ಥಿತಿ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯಗಳ ವಿರುದ್ಧ ಕಿಡಿ ಕಾರಿದರು. ಈ ವೇಳೆ ಅವರು ಹೇಳಿದ್ದಿಷ್ಟು…

ರಾಜ್ಯದಲ್ಲಿ ಎಲ್ಲರಿಗೂ ಆರೋಗ್ಯ ಸೇವೆ ಸಿಗಬೇಕು ಎಂಬ ದೃಷ್ಟಿಯಿಂದ ‘ಆರೋಗ್ಯ ಕರ್ನಾಟಕ’ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿತ್ತು. ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ ಯೋಜನೆ ತಂದಿದೆ. ಇವೆಲ್ಲ ಇದ್ದರೂ ಸರ್ಕಾರ  ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆಗೆ ದರ ನಿಗದಿ ಮಾಡಿದೆ. ಸರ್ಕಾರ ಶಿಫಾರಸ್ಸು ಮಾಡುವ ಸೋಂಕಿತರಿಗೆ ವೆಂಟಿಲೇಟರ್ ರಹಿತ ಐಸಿಯು ವಾರ್ಡ್ ಗೆ 8500, ವೆಂಟಿಲೇಟರ್ ಇರುವ ವಾರ್ಡ್ ಗೆ 10 ಸಾವಿರ ಜತೆಗೆ ವೈಯಕ್ತಿಕ ವಾರ್ಡ್ ಗೆ ಶೇ.25 ರಷ್ಟು ಹೆಚ್ಚುವರಿ ಶುಲ್ಕ ನಿಗದಿಪಡಿಸಿದೆ. ಇನ್ನು ಖಾಸಗಿ ಆಸ್ಪತ್ರೆಗೆ ನೇರ ದಾಖಲಾಗುವ ರೋಗಿಗಳಿಗೆ 25 ಸಾವಿರ ನಿಗದಿ ಮಾಡಿದೆ. ಮೊದಲೇ ಆರ್ಥಿಕ ಸಂಕಷ್ಟದಿಂದ ನರಳುತ್ತಿರುವ ಜನ ಈ ಹಣವನ್ನು ಎಲ್ಲಿಂದ ತರಬೇಕು? ಸರಕಾರ ಅವರ ಪ್ರಾಣದ ಜತೆ ಚೆಲ್ಲಾಟ ಆಡುತ್ತಿದೆ. free treatment - corona -KPCC president -DK Sivakumar -demands -government

ಕೋವಿಡ್ ವಿಚಾರದಲ್ಲಿ ಸರ್ಕಾರ ಯಾವ ಕಾರಣಕ್ಕೆ ಬಡವರು, ಶ್ರೀಮಂತರು ಎಂಬ ಬೇಧ ಭಾವ ಮಾಡುತ್ತಿದೆಯೋ ಗೊತ್ತಿಲ್ಲ. ಬಡವರೇನಾದರೂ ಈ ರೋಗ ತಂದಿದ್ದರಾ? ಅವರಿಗೇಕೆ ಶಿಕ್ಷೆ?ಹೊರ ದೇಶಗಳಿಂದ ಬಂದವರನ್ನು ಸರಿಯಾಗಿ ನಿಯಂತ್ರಿಸದೆ, ತನ್ನ ವೈಫಲ್ಯಗಳಿಂದ ಜನರಿಗೆ ಸೋಂಕು ಹರಡಿರುವ ಸರಕಾರವೇ ಈಗ ಪ್ರತಿಯೊಬ್ಬ ಸೋಂಕಿತರಿಗೂ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು.

ದೇಶದ ಜನರು, ಉದ್ಯಮಿಗಳು, ಕೈಗಾರಿಕೆಗಳು, ಸಂಸದರು ಪಿಎಂ ಕೇರ್ ನಿಧಿಗೆ ಹಣ ನೀಡಿದ್ದಾರೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಸರ್ಕಾರದ ಬಳಿ ಹಣ ಇದೆ. ಹೀಗಾಗಿ ಅವರ ತಪ್ಪಿನಿಂದ ಹಬ್ಬಿರುವ ಸೋಂಕಿಗೆ ಅವರೇ ಉಚಿತ ಚಿಕಿತ್ಸೆ ನೀಡಲಿ.

ಕುಮಾರಕೃಪಾ ಅತಿಥಿ ಗೃಹದಲ್ಲಿ ಜನಪ್ರತಿನಿಧಿಗಳು, ಹಿರಿಯವಾಧಿಕಾರಿಗಳಿಗೆ ವಿಶೇಷ ಚಿಕಿತ್ಸೆ ವ್ಯವಸ್ಥೆ ಮಾಡಿರುವುದು ಸರಿಯಲ್ಲ. ಸರಕಾರ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಸಾಮಾನ್ಯ ಜನರಿಗೂ ಅವರಂತೆಯೇ ವ್ಯವಸ್ಥೆ ಕಲ್ಪಿಸಬೇಕು.

ಬೀದಿಗಿಳಿದು ಹೋರಾಟ

ನಮ್ಮ ಜನರ ರಕ್ಷಣೆಗೆ ಈಗ ನಾವು ಬೀದಿಗೆ ಇಳಿದು ಹೋರಾಟ ಮಾಡಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ನಾವು ಸಾಮಾಜಿಕ ಅಂತರ ಕಾಯ್ದುಕೊಂಡು ಬೀದಿಗಿಳಿದು ಪ್ರತಿಭಟಿಸುತ್ತೇವೆ. ಇದೇ 29 ರಂದು  ಹೋರಾಟ ಮಾಡುತ್ತೇವೆ.

ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸರ್ಕಾರ ಘೋಷಿಸಿದ ಪರಿಹಾರ ಇನ್ನು ತಲುಪಿಲ್ಲ. ಸರ್ಕಾರ ಕೇಳಿರುವ ದಾಖಲೆ ಒದಗಿಸಲು ಜನರಿಂದ ಸಾಧ್ಯವಾಗುತ್ತಿಲ್ಲ. ಆಟೋ ಮತ್ತು ಟ್ಯಾಕ್ಸಿ ಚಾಲಕರು ಪರದಾಡುತ್ತಿದ್ದಾರೆ. ಇವರ ಸಂಕಷ್ಟಕ್ಕೆ ಹಾಗೂ ಅವರ ಕುಂದು ಕೊರತೆಗೆ ಧ್ವನಿಯಾಗಲು ಬ್ಲಾಕ್ ಮಟ್ಟದಿಂದ ರಾಜ್ಯ ಮಟ್ಟದವರೆಗೂ ನಮ್ಮ ಪಕ್ಷದಿಂದ ವಿಶೇಷ ಘಟಕ ಆರಂಭಿಸಲು ತೀರ್ಮಾನಿಸಿದ್ದೇವೆ. ವೃತ್ತಿಪರ ಚಾಲಕರ ನೇತೃತ್ವದಲ್ಲಿ ಈ ಘಟಕವನ್ನು ಸ್ಥಾಪಿಸಲಾಗುವುದು.

ಇನ್ನು ಶಿಕ್ಷಣ ವಿಚಾರಕ್ಕೆ ಬಂದರೆ, ಪೋಷಕರು ತಮ್ಮ ಮಕ್ಕಳ ಭವಿಷ್ಯ ವಿಚಾರದಲ್ಲಿ ಬಹಳ ಚಿಂತಿತರಾಗಿದ್ದಾರೆ. ಕೆಲವರಿಗೆ ಆನ್ ಲೈನ್ ತರಗತಿ, ಮತ್ತೆ ಕೆಲವರಿಗೆ ಇಲ್ಲ.  ಸರಕಾರ ಒಂದು ಸಾರಿ ತೆಗೆದುಕೊಂಡ ನಿರ್ಧಾರ ಮರುಕ್ಷಣ ಬದಲಾಗಿ ಹೋಗುತ್ತದೆ. ಯಾವುದೇ ಯೋಜನೆಯಾಗಲಿ, ಚಿಂತನೆಯಾಗಲಿ ಇಲ್ಲವೇ ಇಲ್ಲ.

ಬಡವರು ತಮ್ಮ ಕಷ್ಟಕ್ಕೆ ನಿವೇಶನ ಮಾರಿದರೆ ಅದಕ್ಕೂ ಜಿಎಸ್ ಟಿ ಕಟ್ಟಬೇಕಂತೆ. ಇಂತಹ ಪದ್ಧತಿ  ಎಲ್ಲಾದರೂ ಇದೆಯಾ? ಇನ್ನು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಇನ್ನು ಉದ್ಯೋಗ ಇಲ್ಲದೆ ನಿರುದ್ಯೋಗಿಗಳ ಪ್ರಮಾಣ ಹೆಚ್ಚುತ್ತಿದ್ದು, ಈ ಎಲ್ಲ ವಿಚಾರವಾಗಿ ನಾವು ಹೋರಾಟ ಮಾಡಲಿದ್ದೇವೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು.

ಸೈನಿಕರಿಗೆ ಗೌರವ:

ಚೀನಾ ಜತೆ ಸಂಘರ್ಷ ವಿಚಾರದಲ್ಲೂ ದೇಶದ ಜನರ ದಿಕ್ಕು ತಪ್ಪಿಸಲಾಗುತ್ತಿದೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿ ಹುತಾತ್ಮರಾಗಿರುವ ವೀರ ಯೋಧರಿಗೆ ಗೌರವ ಸಲ್ಲಿಸಲು ನಾಳೆ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಬೆಳಗ್ಗೆ 11 ಗಂಟೆಯಿಂದ 12 ಗಂಟೆವರೆಗೂ ಮೌನಾಚಾರಣೆ ಮಾಡಲಾಗುವುದು. ಅದೇ ರೀತಿ ಜಿಲ್ಲಾ ಕೇಂದ್ರಗಳಲ್ಲೂ ಪ್ರಮುಖ ಸ್ಥಳಗಳಲ್ಲಿ ನಮ್ಮ ಯೋಧರಿಗೆ ಗೌರವ ಸಲ್ಲಿಸಲಾಗುವುದು.

ನಮ್ಮ ಪಕ್ಷದ ಮಾಜಿ ರಾಷ್ಟ್ರೀಯ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರು ನಿನ್ನೆ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಷ್ಟ್ರಾದ್ಯಂತ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಕೆ ಕಾರ್ಯಕ್ರಮ ಆಯೋಜಿಸುವಂತೆ ಸೂಚನೆ ನೀಡಿದ್ದಾರೆ.

Key words: free treatment – corona -KPCC president -DK Sivakumar -demands -government