ನಾಲ್ವರಿಗೆ ಒಲಿದ ‘ಲಾಸ್ಯ ಸಾಧಕಿ’ ಪ್ರಶಸ್ತಿ.

ಬೆಂಗಳೂರು, ಮಾರ್ಚ್,27,2024 (www.justkannada.in): 2024ರ ಪ್ರತಿಷ್ಠಿತ ಲಾಸ್ಯ ಸಾಧಕಿ ಪ್ರಶಸ್ತಿಗೆ ನಾಲ್ವರು ಸಾಧಕಿಯರು ಆಯ್ಕೆಯಾಗಿದ್ದು ಮಾರ್ಚ್ 29 ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಈ ಕುರಿತು ಮಾತನಾಡಿ ಮಾಹಿತಿ ನೀಡಿರುವ ಲಾಸ್ಯ ಅಕಾಡೆಮಿ ಆಫ್ ಡಾನ್ಸ್ ಸಂಸ್ಥೆ ಸ್ಥಾಪಕ ನಿರ್ದೇಶಕಿ ಡಾ. ಲಕ್ಷ್ಮಿರೇಖಾ ಅರುಣ್ , ಸಂಜಯನಗರದಲ್ಲಿ ಕಳೆದ 15 ವರ್ಷಗಳಿಂದ ಕಲೆಗಾಗಿ ಶ್ರಮಿಸುತ್ತಿರುವ ಲಾಸ್ಯ ಅಕಾಡೆಮಿ ಆಫ್ ಡಾನ್ಸ್ ಸಂಸ್ಥೆ, ವಿವಿಧ ವಿಭಾಗಗಳಲ್ಲಿ ಸದ್ದಿಲ್ಲದೇ ಸಾಧನೆಗೈದು ಸಮಾಜದ ಏಳಿಗೆಗೆ ಶ್ರಮಿಸುತ್ತಿರುವ ಮಹಿಳೆಯರನ್ನು ಗುರುತಿಸಿ, ಲಾಸ್ಯ ಸಾಧಕಿ ಪ್ರಶಸ್ತಿ ಮೂಲಕ ಗೌರವಿಸುತ್ತಿದೆ.  ವೈದ್ಯೆಯರು, ಸಮಾಜ ಸುಧಾರಕಿಯರು, ಕಲಾವಿದೆಯರು, ಹಸಿರು ಯೋಧೆಯರು, ಯೋಗ ಪಟುಗಳು ಹೀಗೆ ಹತ್ತು ಹಲವಾರು ವಿಭಾಗದಲ್ಲಿ ನುರಿತವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2024ರ ಪ್ರತಿಷ್ಠಿತ ಈ ಪ್ರಶಸ್ತಿಗೆ ನಾಲ್ವರು ಸಾಧಕಿಯರು ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆ ಸ್ಥಾಪಕ ನಿರ್ದೇಶಕಿ ಡಾ. ಲಕ್ಷ್ಮಿರೇಖಾ ಅರುಣ್ ತಿಳಿಸಿದ್ದಾರೆ.

ಸಾಧಕಿಯರಾದ ಖ್ಯಾತ ಮನೋವೈದ್ಯ ಹಾಗೂ ಲೇಖಕಿ, ವೈದ್ಯ ಕಲಾರಂಗ ಮತ್ತು ಓಂ ಸಂಸ್ಥೆ ಸ್ಥಾಪಕ ನಿರ್ದೇಶಕಿ ಡಾ. ಪ್ರಮೀಳಾದೇವಿ, ಖ್ಯಾತ ಭರತನಾಟ್ಯ ಯಕ್ಷಗಾನ ಕಲಾವಿದೆ, ತಾಳಮದ್ದಳೆ ಅರ್ಥದಾರಿ ಲೇಖಕಿ ಕವಯತ್ರಿ ಹಾಗೂ ನಾಟ್ಯಾರಾಧನಾ ಮತ್ತು ಯಕ್ಷಾರಾಧನಾ ಕಲಾಕೇಂದ್ರ ಸಂಸ್ಥಾಪಕಿ ಸುಮಂಗಳ ರತ್ನಾಕರ ರಾವ್, ಅಂತಾರಾಷ್ಟ್ರೀಯ ಒಡಿಸ್ಸಿ ನೃತ್ಯಪಟು ಲೇಖಕಿ ಮತ್ತು ಒಡಿಸ್ಸಾದ ಬನ್ನಿ ಬಿಲಾಸ್ ಸಂಸ್ಥೆ ನಿರ್ದೇಶಕಿ ವಿದುಷಿ ಲೀನಾ ಮೊಹಾಂತಿ ಹಾಗೂ ಸಂಶೋಧಕಿ ಲೇಖಕಿ, ಸಮಾಜ ಸುಧಾರಕಿ, ಯೋಗಪಟು ಹಾಗೂ ಲೇಪಾಕ್ಷಿಯ ಆಶ್ರಯ ಸೇವಾಸಂಸ್ಥೆ ಸಹಸಂಸ್ಥಾಪಕಿ ನಳಿನಾಕ್ಷಿ ಶಿವಕುಮಾರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಡಾ. ಲಕ್ಷ್ಮಿರೇಖಾ ತಿಳಿಸಿದ್ದಾರೆ.

ಪ್ರಶಸ್ತಿ 15 ಸಾವಿರ ರೂ. ನಗದು ಮತ್ತು ಸನ್ಮಾನ ಒಳಗೊಂಡಿದೆ. ಮಾರ್ಚ್ 29ರಂದು ಮಲ್ಲೇಶ್ವರಂ 15ನೇ ಅಡ್ಡರಸ್ತೆ, ಎಂಎಲ್‌ಎ ಶಾಲೆ ಎದುರಿನ ಸೇವಾ ಸದನ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12ರ ವರೆಗೆ ಒಡಿಸ್ಸಿ ನೃತ್ಯ ಪ್ರದರ್ಶನ ಹಾಗೂ ಯಕ್ಷಗಾನ ನಡೆಯಲಿದ್ದು, ಬಳಿಕ ಪ್ರಶಸ್ತಿ ಪ್ರದಾನ ನಡೆಯಲಿದೆ. ಈಗಾಗಲೇ ಡಾ. ವಸುಂಧರಾ ದೊರೈಸ್ವಾಮಿ, ಹಸಿರು ಯೋಧೆ ವಾಣಿ ಮೂರ್ತಿ, 1000ಕ್ಕೂ ಹೆಚ್ಚು ಹೆರಿಗೆ ಮಾಡಿಸಿರುವ ಪ್ರಸೂತಿ ತಜ್ಞ ಡಾ. ಉಮಾದೇವಿ ಮುಂತಾದವರು ಲಾಸ್ಯ ಸಾಧಕಿ ಪ್ರಶಸ್ತಿ ಸ್ವೀಕರಿಸಿದವರಲ್ಲಿ ಪ್ರಮುಖರಾಗಿದ್ದಾರೆ ಎಂದು ಡಾ. ಲಕ್ಷ್ಮಿರೇಖಾ ಅರುಣ್ ಮಾಹಿತಿ ನೀಡಿದರು.

Key words: Four people,Lasya Sadhaki,award