ಮೈಸೂರು,ಸೆಪ್ಟಂಬರ್,8,2026 (www.justkannada.in): ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ (ಚಾವಿಸನಿನಿ) ಎನ್.ಆರ್.ಮೊಹಲ್ಲಾ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಹಾಯಕ ಇಂಜಿನಿಯರ್ ಕಿರಣ್, ಸಹಾಯಕ ಇಂಜಿನಿಯರ್ ನಾಹೀದ ಅಂಜುಮ್, ಕಿರಿಯ ಇಂಜಿನಿಯರ್ ನಾಗೇಂದ್ರ ಹಾಗೂ ಮಾಪಕ ಓದುಗ ಅಪ್ಸರ್ ಪಾಷ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಕೆಸರೆ ಬಡಾವಣೆಯ ವಾಣಿಜ್ಯ ಸ್ಥಾವರದ ವಿದ್ಯುತ್ ಸಂಪರ್ಕದಲ್ಲಿ ಜಕಾತಿ ಬದಲಾವಣೆ ಹಾಗೂ ಅಧಿಕ ಹೊರೆ ಮಂಜೂರಾತಿ ವೇಳೆ ಕಟ್ಟಡದ ವಿಸ್ತೀರ್ಣ ತಪ್ಪಾಗಿ ನಮೂದಿಸಿರುವುದು ಮತ್ತು ಗ್ರಾಹಕರಿಂದ ಮೀಟರ್ ಖರೀದಿಸದೇ ನಿಗಮದ ಮೀಟರ್ ಅಳವಡಿಸಿರುವ ಆರೋಪ ಕೇಳಿಬಂದಿತ್ತು.
ಜಾಗೃತದಳದ ವರದಿ ಆಧರಿಸಿ ನಡೆಸಿದ ಪರಿಶೀಲನೆಯಲ್ಲಿ ನಿಗಮದ ನಿಯಮ ಉಲ್ಲಂಘನೆ ಹಾಗೂ ಆರ್ಥಿಕ ನಷ್ಟ ಉಂಟುಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಶಿಸ್ತು ಕ್ರಮಕ್ಕೆ ಮುಂದಾಗಲಾಗಿದೆ.
ದಾಖಲೆಗಳು ಅಥವಾ ಸಾಕ್ಷ್ಯಗಳನ್ನು ತಿರುಚುವ ಸಾಧ್ಯತೆ ಹಿನ್ನೆಲೆಯಲ್ಲಿ ನಾಲ್ವರನ್ನೂ ತಕ್ಷಣದಿಂದಲೇ ಅಮಾನತುಗೊಳಿಸಿ, ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ. ಅಮಾನತು ಅವಧಿಯಲ್ಲಿ ಜೀವನಾಧಾರ ಭತ್ಯೆ ನೀಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತರಾಗಿರುವ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹಾಗೂ ಬೆಸ್ಕಾಂಗೆ ವರ್ಗಾವಣೆಯಾಗಿರುವ ಸಹಾಯಕ ಇಂಜಿನಿಯರ್ ಕಿರಣ್ ವಿರುದ್ಧವೂ ಕ್ರಮಕ್ಕೆ ಸೂಚನೆ ನೀಡಲಾಗಿದೆ.
Key words: Four employees, suspended, financial loss, CESC, Mysore






