ಡಾ.ರಾಜಕುಮಾರ್ ಜೀವಿತಾವಧಿಯಲ್ಲಿ ನಾವಿದ್ದೆವು ಅನ್ನುವುದೇ ಬದುಕಿನ ಭಾಗ್ಯ- ಪ್ರೊ.ಕೃಷ್ಣೇಗೌಡ

ಮೈಸೂರು,ಏಪ್ರಿಲ್,12,2023(www.justkannada.in): ಡಾ.ರಾಜಕುಮಾರ್ ಅವರ ಜೀವಿತಾವಧಿಯಲ್ಲಿ ನಾವಿದ್ದೆವು. ಅವರನ್ನ ಹತ್ತಿರದಿಂದ ನೋಡಿದ್ದೆವು. ಮಾತನಾಡಿದ್ದೆವು ಅನ್ನೋದೆ ನಮ್ಮ ಬದುಕಿನ ಭಾಗ್ಯ ಎಂದು ವರನಟ ಡಾ. ರಾಜಕುಮಾರ್ ಕುರಿತು ಖ್ಯಾತ ವಾಗ್ಮಿ ಪ್ರೊ .ಎಂ. ಕೃಷ್ಣೇಗೌಡ ಅಭಿಪ್ರಾಯಪಟ್ಟರು.

ನಗರದ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಮೈಸೂರಿನ ಡಾ.ರಾಜಕುಮಾರ್ ಮ್ಯೂಸಿಕಲ್ ಸಂಸ್ಥೆಯ ಗಾಯಕ ಜಯರಾಂ ಆಯೋಜಿಸಿದ್ದ ‘”ಅಣ್ಣಾ ವ್ರ ಅಭಿಮಾನಿ ಯಾಗಿ- 50 ಸುವರ್ಣ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಜಕುಮಾರ್ ಕನ್ನಡ ಸಂಸ್ಕೃತಿಯ ನೈಜ ಪ್ರತಿನಿಧಿಯಾಗಿದ್ದರು. ಈ ನಾಡಿನ ತಪಸ್ಸಿನ ಫಲವಾಗಿ ಹುಟ್ಟಿದವರು. ಈ ನಾಡನ್ನ ಆಳಿದ ಮಯೂರ ವರ್ಮ, ಕೃಷ್ಣದೇವರಾಯ, ಇಮ್ಮಡಿ ಪುಲಿಕೇಶಿಯಂತಹ ಪಾತ್ರಗಳ  ಅಭಿನಯದ ಮೂಲಕ ನಾಡಿನ ಸಾಂಸ್ಕೃತಿಕ ಪರಂಪರೆಯನ್ನ ಜಾಗೃತಿಗೊಳಿಸಿದರು. ಬುದ್ದ ಬಸವ .ಗಾಂಧಿ ಅಂಬೇಡ್ಕರ್ ಕುವೆಂಪು ಇಂತವರ ಸಾಲಿನಲ್ಲಿ ರಾಜಕುಮಾರ್ ಗಟ್ಟಿ ನೆಲೆಯೂರಿದ್ದಾರೆ. ಕನ್ನಡ ನುಡಿಯ ಸೊಗಡು ಮತ್ತು ಸೌಂದರ್ಯ ವನ್ನ ತಮ್ಮ ಶುದ್ದ ಕನ್ನಡ ಶೈಲಿಯ ಮಾತುಗಳ ಮೂಲಕ ನಮ್ಮೊಳಗೆ ಕನ್ನಡ ಪ್ರೀತಿ ಬೆಳಸಿದ್ದಾರೆ.ಅವರು ಕನ್ನಡದ ಪುರುಷೋತ್ತಮರಾಗಿ ಬದುಕಿದವರು. ಗಾಯಕ ಜಯರಾಂ ಉಸಿರಿರುವತನಕ ಅಣ್ಣಾವ್ರ ಅಭಿಮಾನಿಯಾಗಿಯೇ ಇರುತ್ತೇನೆ ಎನ್ನುವ ಅವರ ಶಪಥವೇ ರಾಜಕುಮಾರ ಬಗ್ಗೆ ಅವರ ಅಭಿಮಾನದ ಆಳ ಗೊತ್ತಾಗುತ್ತದೆ. ಇಂಥವರನ್ನ ಕಂಡೇ ರಾಜಕುಮಾರ್ ಅಭಿಮಾನಿಗಳನ್ನೇ ದೇವರು ಎಂದು ಕರೆದಿರುವುದು ಎಂದು ಅರ್ಥೈಸಿದರು.

ಇಳೈ ಆಳ್ವಾರ್ ಸ್ವಾಮೀಜಿ ಸಾನ್ನಿದ್ಯ ವಹಿಸಿದ್ದರು. ಡಾ ರಾಜಕುಮಾರ್ ಕಲಾ ಸೇವಾ ಟ್ರಸ್ಟ್ ಅಧ್ಯಕ್ಷರಾದ ಡಾ ವೈ. ಡಿ ರಾಜಣ್ಣ ಅಧ್ಯಕ್ಷತೆಯಲ್ಲಿ ಟ್ರಸ್ಟ್ ನಿಂದ ವಿವಿಧ  ಕ್ಷೇತ್ರದ ಸಾದಕರಾದ ರಂಗಕರ್ಮಿ ರಾಜಶೇಖರ ಕದಂಬ. ಕವಿ ಜಯಪ್ಪ ಹೊನ್ನಾಳಿ, ಕಲಾ ಪೋಷಕರಾದ ರವಿಗೌಡ, ಡಿ.ಸಿದ್ದರಾಜು.ಕಲಾವಿದರಾದ ಎಎಸ್ ಗಂಗಾಧರ್,  ವೀಣಾ ಪಂಡಿತ್, ಗೀತಾ ಜಯರಾಂ, ಆರ್ ಶ್ರೀನಿವಾಸ್ ಹಾಗೂ ಗಾಯಕ ರವಿ ಸಂತು ಅವರಿಗೆ “ಡಾ ರಾಜ್ ಕಲಾಸೇವಾ  ರತ್ನ ‘ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ ರಾಜ್ ನೆನಪಿನ ಗೀತೆಗಳ ಗಾಯನ ಕಾರ್ಯಕ್ರಮ ನೆರೆದಿದ್ದ ಡಾ ರಾಜಕುಮಾರ್ ಅಭಿಮಾನಿಗಳ ಮನಸೂರೆಗೊಂಡಿತು

key words: fortune – life – Dr. Rajkumar’s -lifetime – Prof. Krishna Gowda