ಪಾಕ್ ಪರ ಘೋಷಣೆ ಕೂಗಿದ್ದು ಸರಿಯಲ್ಲ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

ಹಾಸನ, ಫೆಬ್ರವರಿ 22, 2020 (www.justkannada.in): ಪಾಕಿಸ್ತಾನ್ ಜಿಂದಾಬಾದ್ ಅನ್ನೋದು ಸರಿಯಲ್ಲ. ಪೊಲೀಸರು ಈಗಾಗಲೇ ಕ್ರಮ ಕೈಗೊಳ್ಳುತ್ತಿದ್ದಾರೆ. ಯಾವ ಕಾರಣದಿಂದ ಆ ಹೆಣ್ಣು ಮಗು ಈ ರೀತಿ ಹೇಳಿತು ಅನ್ನೋದು ಗೊತ್ತಿಲ್ಲ ಎಂದು ಮಾಜಿ ಪ್ರಧಾನಿ ಹೆಚ್ ದೇವೇಗೌಡ ಹೇಳಿದರು.

ಶಿವರಾತ್ರಿಯ ಜಾಗರಣೆಯ ಸಲುವಾಗಿ ಬೆಂಗಳೂರಿನಿಂದ ಹುಟ್ಟೂರು ಹರದನಹಳ್ಳಿಗೆ ತೆರಳುವ ಸಂದರ್ಭದಲ್ಲಿ ವಿಶ್ರಾಂತಿಗೆಂದು ಹಾಸನದಲ್ಲಿರುವ ಅವರ ನಿವಾಸಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನಾ ವಿಚಾರದ ಬಗ್ಗೆ ಪೊಲೀಸರು ಏನು ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಗಮನಿಸುತ್ತಿದ್ದೇನೆ. ಆಕೆ ಘೋಷಣೆ ಸರಿಯಲ್ಲ ಎಂದು ಹೇಳಿದರು.

ಈಗಾಗಲೇ ವಿಚಾರಣೆ ನಡೆಯುತ್ತಿದೆ. ಇದರ ಜೊತೆಗೆ ಮತ್ತೋರ್ವ ಯುವತಿ ಕಾಶ್ಮೀರ್ ಮುಕ್ತ ಎಂಬ ಫಲಕ ಹಿಡಿದಿರುವ ಬಗ್ಗೆಯೂ ಗಮನಿಸಿದ್ದೇನೆ. ಇದರ ಹಿನ್ನೆಲೆ ಕೂಡ ಏನ್ ಇರುತ್ತೋ ಗೊತ್ತಿಲ್ಲ ಎಂದು ಬೇಸರದಿಂದಲೇ ದೇವೇಗೌಡರು ಪ್ರತಿಕ್ರಿಯಿಸಿದರು.