ಉದ್ಯಮಿ ಸಿದ್ಧಾರ್ಥ್ ಸಾವಿಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಡಿ.ಕೆ ಶಿವಕುಮಾರ್ ಸೇರಿ ಹಲವು ಗಣ್ಯರಿಂದ ಸಂತಾಪ….

ಬೆಂಗಳೂರು,ಜು,31,2019(www.justkannada.in): ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರ ಅಳಿಯ, ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರ ಸಾವಿಗೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

ಸಿದ್ಧಾರ್ಥ್ ಅವರ ಸಾವಿಗೆ ಟ್ವಿಟ್ಟರ್ ನಲ್ಲಿ ಸಂತಾಪ್ ಸೂಚಿಸಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಉದ್ಯಮಿ ಮತ್ತು ಆತ್ಮೀಯ ಗೆಳೆಯನ ಸಾವಿನ ಸುದ್ದಿ ಆಘಾತ ತಂದಿದೆ. ಕಳೆದ 25 ವರ್ಷಗಳಲ್ಲಿ ಸಿದ್ಧಾರ್ಥ್ ಅವರು ಕರ್ನಾಟಕ ಕಾಫಿ ಉದ್ಯಮವನ್ನ ವಿಶ್ವಕ್ಕೆ ಪರಿಚಯಿಸಿದವರು. ಸಾವಿರಾರು ನೌಕರರಿಗೆ ಕೆಲಸ ನೀಡಿದವರು. ಅವರ ಸಾವಿನಿಂದ ಕರ್ನಾಟಕ ಶ್ರೇಷ್ಠ ಉದ್ಯಮಿಯೊಬ್ಬರನ್ನ ಕಳೆದುಕೊಂಡಂತಾಗಿದೆ ಎಂದು ಹೇಳಿದ್ದಾರೆ.

ಹಾಗೆಯೇ ಮಾಜಿ ಸಚಿವ ಡಿ.ಕೆ ಶಿವಕುಮಾರ್  ಮಾತನಾಡಿ, ಸಿದ್ಧಾರ್ಥ್ ಈ ರಾಜ್ಯದ ಆಸ್ತಿ. ಅವರ ಸಾವಿನ ನೋವನ್ನ ತಡೆದುಕೊಳ್ಳುವ ಶಕ್ತಿಯನ್ನ   ಅವರ ಕುಟುಂಬಸ್ಥರಿಗೆ ಅನುಯಾಯಿಗಳಿಗೆ  ಭಗವಂತ ನೀಡಲಿ ಎಂದು ಹೇಳಿದರು. ಹಾಗೆಯೇ ಸಿದ್ಧಾರ್ಥ್ ಸಾವಿಗೆ ಐಟಿ ಕುರುಕುಳವೆಂಬ ಶಂಕೆ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್,  ಐಟಿಯವರು ಏನು ಬೇಕು ಹೇಳುತ್ತಿದ್ದಾರೆ ಹೇಳಿಕೊಳ್ಳಲಿ.  ಆ ದೇವರೇ ಎಲ್ಲವನ್ನ ನೋಡಿಕೊಳ್ಳುತ್ತಾನೆ ಎಂದರು.

ಇನ್ನು ಸಿದ್ಧಾರ್ಥ್ ಅವರ ಸಾವು ದೇಶದ ಉದ್ಯಮ ಲೋಕಕ್ಕೆ ತುಂಬಲಾರದ ನಷ್ಟ ಎಂದು ಹೆಚ್.ಡಿ ದೇವೇಗೌಡರು ಸಂತಾಪ ಸೂಚಿಸಿದ್ದಾರೆ. ಹಾಗೆಯೇ ಬಿಜೆಪಿ ಶಾಸಕ ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಡಿ.ವಿ ಸದಾನಂದಗೌಡ, ಮಾಜಿ ಸಚಿವ ಆರ್. ವಿ ದೇಶಪಾಂಡೆ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

Key words: Former CM- HD Kumaraswamy- DK Sivakumar -many other- condole -death – businessman -Siddharth.