ಹಲಾಲ್ ವಿವಾದ: ಸಿಎಂ ಬೊಮ್ಮಾಯಿಗೆ ಗಂಡಸ್ತನದ ಸವಾಲೆಸೆದ ಹೆಚ್.ಡಿ ಕುಮಾರಸ್ವಾಮಿ.

ರಾಮನಗರ,ಮಾರ್ಚ್,31,2022(www.justkannada.in):  ಹಲಾಲ್ ವಿವಾದಕ್ಕೆ ಸಂಬಂಧಿಸಿದಂತೆ ಹಿಂದೂಪರ  ಸಂಘಟನೆಗಳ ವಿರುದ್ಧ ಕೆಂಡಾಮಂಡಲರಾಗಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಗಂಡಸ್ತನದ ಸವಾಲು ಹಾಕಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ಅವರೇ ನಿಮಗೆ ಗಂಡಸ್ತನ ಇದ್ದರೇ ಹಲಾಲ್ ವಿವಾದ ತಡೆಯಿರಿ.  ನಾನು ಈ ಪದ ಬಳಸಬಾರದು, ಆದ್ರೂ ತಡೆಯಲಾರದೇ ಬಳಸುತ್ತಿದ್ದೇನೆಎಂದು ಹೆಚ್.ಡಿ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ರಾಮನಗರ ಜಿಲ್ಲೆ ಚಕ್ಕೆರೆ ಗ್ರಾಮದಲ್ಲಿ ಈ ಕುರಿತು ಮಾತನಾಡಿದ  ಹೆಚ್.ಡಿ ಕುಮಾರಸ್ವಾಮಿ, ನನಗೆ ವೋಟ್ ಮುಖ್ಯವಲ್ಲ. ಈ ನಾಡಿನ ಜನರ ನೆಮ್ಮದಿ, ಸಂತೋಷದಿಂದ ಬದುಕಬೇಕು.  ಕೇಸರಿ ಬಟ್ಟೆ ಹಾಕಿಕೊಂಡು ಜನರ ಕೋಮು ಸೌಹಾರ್ದವನ್ನು ಕದಡೋರ ಬಗ್ಗೆ ನಾನಂತೂ ಸುಮ್ಮನೇ ಇರೋದಿಲ್ಲ. ಜನರ ಬದುಕು ಹಾಳು ಮಾಡುತ್ತಿರುವವರ ಬಗ್ಗೆ ಮೌನವಾಗಿರೋದಿಲ್ಲ. ಕೊರೋನಾ ಕಾಲದಲ್ಲಿ ಜನರು ಆಕ್ಸಿಜನ್, ಬೆಡ್, ವೈದ್ಯರ ಕೊರತೆ ಸೇರಿದಂತೆ ವಿವಿಧ ಸಮಸ್ಯೆಗಳಿಂದ ಸರಣಿ  ಸಾವನ್ನಪ್ಪಿದರು. ಆಗ ಎಲ್ಲೋಗಿದ್ರೂ ಹೀಗೆ ಕೇಸರಿ ಶಾಲು ಹಾಕಿಕೊಂಡು, ಮನೆ ಮನೆಗೆ ಕರಪತ್ರ ಹಂಚುತ್ತಿರೋ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಮುಂಖಡರು ಎಂದು ಕಿಡಿಕಾರಿದರು.

ಹಿಂದಿನಿಂದಲೂ ಹಲಾಲ್ ಮಾಂಸ ತಿನ್ನುತ್ತಿದ್ದೇವೆ. ಏನು ಆಗಿಲ್ಲ. ಈತ ತಿಂದರೇ ತೊಂದರೆ ಆಗಿಬಿಡುತ್ತದಾ..? ಎಂದು ಪ್ರಶ್ನಿಸಿದ ಹೆಚ್.ಡಿಕೆ, ನಮ್ಮ ಹಬ್ಬಗಳಲ್ಲಿ ಬಂದು ಮಾಂಸ ಕತ್ತರಿಸಿಕೊಡುವವರು ಅವರೇ.  ರೈತರು ರೇಷ್ಮೆ ಬೆಳೆದು ಪ್ರತಿನಿತ್ಯ ಮಾರಾಟ ಮಾಡಬೇಕು.  ಬೆಳೆಯನ್ನ ಅವರೇ ಮಾರಾಟ ಮಾಡಬೇಕು. ಹಿಂದೂ ಸಂಘಟನೆಗಳು ರೈತರಿಗೆ ಜೀವನ ಕಟ್ಟಿಕೊಡುತ್ತಾರಾ ಎಂದು ಹೆಚ್.ಡಿಕೆ ಹರಿಹಾಯ್ದರು.

ಹೊಟ್ಟೆ ಪಾಡಿಗಾಗಿ ಸಂಘಟನೆಗಳು ಸಮಾಜ ಒಡೆಯುತ್ತಿವೆ.  ಕಾಂಗ್ರೆಸ್ ನವರಿಗೆ ಇದರ ಬಗ್ಗೆ ಮಾತನಾಡಲು ತಾಕತ್ತಿಲ್ಲ. ಮಾತನಾಡಿದ್ರೆ ಹಿಂದೂಗಳು ವೋಟ್ ಹಾಕಲ್ಲ ಎನ್ನುವ ಭಯ. ನಮಗೆ ಮತಬ್ಯಾಂಕ್ ಮುಖ್ಯವಲ್ಲ ಈ ನಾಡು ಶಾಂತಿಯಿಂದಿರಬೇಕು ಎಂದರು.

Key words: Former CM-HD kumaraswamy-CM-Basavaraj bommai-halal