ಮೈಸೂರು ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ: ಅಂತಿಮ ಸಿದ್ದತೆ ವೀಕ್ಷಿಸಿದ ಡಿಸಿ ಡಾ.ಕೆ.ವಿ ರಾಜೇಂದ್ರ.

ಮೈಸೂರು,ಡಿಸೆಂಬರ್,22,2023(www.justkannada.in): ಮೈಸೂರು ಅರಮನೆ ಆವರಣದಲ್ಲಿ ಇಂದಿನಿಂದ ಡಿ.31 ರವರೆಗೆ ಫಲಪುಷ್ಪ ಪ್ರದರ್ಶನ ಆಯೋಜನೆ ಮಾಡಲಾಗಿದ್ದು  ಅಂತಿಮ ಹಂತದ ಸಿದ್ದತೆಯನ್ನ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ವೀಕ್ಷಿಸಿದರು.

ಕ್ರಿಸ್ಮಸ್, ಹೊಸ ವರ್ಷದ ಸಂಭ್ರಮಾಚರಣೆ ಹಿನ್ನಲೆ ಅರಮನೆ ಆವರಣದಲ್ಲಿ ಫಲ ಪುಷ್ಪ ಪ್ರದರ್ಶನ ಆಯೋಜನೆ ಮಾಡಲಾಗಿದೆ. ಇಂದು ಸಂಜೆ ಸಿಎಂ ಸಿದ್ದರಾಮಯ್ಯ ರಿಂದ ಉದ್ಘಾಟನೆಯಾಗಲಿದ್ದು, ಫಲಪುಷ್ಪ ಪ್ರದರ್ಶನಕ್ಕೆ ಭರದಿಂದ ಸಿದ್ದತೆ  ಕಾರ್ಯ ನೆರವೇರುತ್ತಿದೆ.

ಈ ವೇಳೆ ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ ಅವರು, ಪೋಲಿಸ್ ಆಯುಕ್ತ ಬಿ ರಮೇಶ್ ಅರಮೆನ ಆಡಳಿತ ಮಂಡಳಿ ನಿರ್ದೇಶಕ ಸುಬ್ರಮಣ್ಯ ಮತ್ತು ಇತರೆ ಸಿಬ್ಬಂದಿಗಳ ಸಮ್ಮುಖದಲ್ಲಿ ವೀಕ್ಷಣೆ ಮಾಡಿದರು. ಕಲ್ಲಂಗಡಿ ಹಣ್ಣಿನಲ್ಲಿ ಮೂಡಿಸಿದ ಹಲವು ಗಣ್ಯ ವ್ಯಕ್ತಿಗಳ ಸಾಲಿನಲ್ಲಿ ಡಿ.ಸಿ ರಾಜೇಂದ್ರ ಭಾವಚಿತ್ರ ಕಂಡು ಅದನ್ನು ತೆಗೆಯಿರಿ ಎಂದು ಸಿಬ್ಬಂದಿಗಳಿಗೆ ಸೂಚನೆ ನೀಡಿದರು.  ನನ್ನನ್ನೇಕೆ ಹಾಕಿದ್ದೀರ ಅದನ್ನ ತೆಗೆಯಿರಿ ಎಂದು ಭಾವಚಿತ್ರವನ್ನ  ಜಿಲ್ಲಾಧಿಕಾರಿ ರಾಜೇಂದ್ರ ತೆಗೆಸಿದರು.

ಯುನೆಸ್ಕೋ ಪಟ್ಟಿ ಸೇರಿದ ಬಗೆ ಬಗೆ ಹೂವುಗಳಿಂದ ಮೂಡಿರುವ  ಸೋಮನಾಥಪುರದ ದೇವಾಲಯ, ಹಂಪಿ ಕಲ್ಲಿನ ರಥ, ಹಂಪಿ ವಿರೂಪಾಕ್ಷ ಮೂರ್ತಿ, ಸುವರ್ಣ ಕರ್ನಾಟಕ ಮಾದರಿಯ ಕಲಾಕೃತಿ ನಿರ್ಮಾಣ ಮಾಡಲಾಗಿದೆ.

ಫಲಪುಷ್ಪ ಪ್ರದರ್ಶನ ಸುಮಾರು 25 ಸಾವಿರಕ್ಕೂ ಹೆಚ್ಚು ಹೂ ಕುಂಡಳಿಂದ ಅಲಂಕೃತಗೊಂಡಿದ್ದು, ಹಲವೆಡೆ  ಸೆಲ್ಫೀ ಸ್ಟಾಟ್ ನಿರ್ಮಾಣವಾಗಿದೆ. ಇತ್ತೀಚೆಗೆ ಸಾವನ್ನಪ್ಪಿದ ಅರ್ಜುನ ಆನೆ ಕಲಾಕೃತಿ ಸೇರಿ ಹಲವಾರು ಕಲಾಕೃತಿಗಳನ್ನ ನಿರ್ಮಾಣ ಮಾಡಲಾಗಿದೆ.

ಇನ್ನು ಆರಮನೆಯ ಆವರಣದಲ್ಲಿ ಹತ್ತು ದಿನಗಳ ಕಾಲ ನಡೆಯುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಸಕಲ ಸಿದ್ದತೆ ನಡೆಸಲಾಗಿದೆ.

Key words: Flower show – Mysore Palace –  final-preparations.