ಇದೇ ಮೊದಲ ಬಾರಿಗೆ ಮೈಸೂರು ಜಿಲ್ಲೆ ಎಲ್ಲಾ ತಾಲ್ಲೂಕುಗಳಿಗೆ ದಸರಾ ಕ್ರೀಡಾ ಜ್ಯೋತಿ ಪ್ರಯಾಣ

ಮೈಸೂರು,ಸೆ,26,2019(www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇದ್ದು ಈ ನಡುವೆ ಇದೇ ಮೊದಲ ಬಾರಿಗೆ  ದಸರಾ ಕ್ರೀಡಾ ಜ್ಯೋತಿ ಮೈಸೂರು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಪ್ರಯಾಣ ಮಾಡಲಿದೆ.

ದಿನಾಂಕ 29.09.2019 ರಂದು ಭಾನುವಾರ ಬೆಳಿಗ್ಗೆ 10.20 ಕ್ಕೆ ಚಾಮುಂಡಿದೇವಿಯ ಸನ್ನಿಧಿಯಲ್ಲಿ ಬೆಳಗಿ, ಮುಖ್ಯಮಂತ್ರಿ  ಬಿ.ಎಸ್ ಯಡಿಯೂರಪ್ಪ , ದಸರಾ ಉದ್ಘಾಟಕರು ಹಾಗೂ ಇನ್ನಿತರ ಗಣ್ಯರಿಂದ ಚಾಲನೆಗೊಳ್ಳುವ ದಸರಾ ಕ್ರೀಡಾಜ್ಯೋತಿಯನ್ನು  ಮೊಟ್ಟಮೊದಲ ಬಾರಿಗೆ ಮೈಸೂರು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ಕೊಂಡೊಯ್ಯಲಾಗುತ್ತಿದೆ.

ಡಾ.ಎಂ.ಪಿ.ವರ್ಷ ರವರ ನೇತೃತ್ವದಲ್ಲಿ ಪ್ರಯಾಣ ಬೆಳೆಸುವ ದಸರಾ ಜ್ಯೋತಿಯು ಮೈಸೂರು ದಸರಾದ ಇತಿಹಾಸದಲ್ಲಿಯೇ ಅತ್ಯಂತ ದೂರ (330 ಕಿ.ಮೀ) ಪ್ರಯಾಣ ಮಾಡುವ ಜ್ಯೋತಿಯಾಗಿ ದಾಖಲಾಗಲಿದೆ . ಮೊದಲನೆಯ ದಿನ ಅಂದರೆ 29.09.2019 ರಂದು ಮೈಸೂರಿನಿಂದ ಪ್ರಯಾಣ ಬೆಳೆಸಿ ಟಿ.ನರಸೀಪುರ, ನಂಜನಗೂಡು ಹಾಗೂ ಸರಗೂರು ತಾಲ್ಲೂಕುಗಳಲ್ಲಿ ಸಂಚರಿಸಿ ಹೆಗ್ಗಡದೇವನಕೋಟೆಯಲ್ಲಿ ತಂಗಲಿದೆ ..

ಮರುದಿನ ಅಂದರೆ 30.09.2019 ರಂದು ಹೆಗ್ಗಡದೇವನಕೋಟೆಯಿಂದ ಪ್ರಯಾಣ ಬೆಳೆಸಿ ಹುಣಸೂರು, ಪಿರಿಯಾಪಟ್ಟಣ, ಕೆ.ಆರ್.ನಗರ ತಾಲ್ಲೂಕುಗಳಲ್ಲಿ ಸಂಚರಿಸಿ ರಾತ್ರಿ ಮೈಸೂರು ತಲುಪಲಿದೆ ..

ಮರುದಿನ ಅಂದರೆ 01.10.2019 ರಂದು ಬೆಳಿಗ್ಗೆ ಕೋಟೆ ಆಂಜನೇಯ ದೇವಸ್ಥಾನದಿಂದ ಪ್ರಾರಂಭಿಸಿ ಮೈಸೂರಿನ ವಿವಿಧ ಬಡಾವಣೆಗಳಲ್ಲಿ ಸುಮಾರು 30 ಕಿ.ಮೀ ಸಂಚರಿಸಿ ನಿಂಬುಜಾದೇವಿಯ ದೇವಸ್ಥಾನದಲ್ಲಿ ತಂಗಲಿದ್ದು, ಸಂಜೆ 4.30 ಕ್ಕೆ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಆರಂಭವಾಗುವ ದಸರಾ ಕ್ರೀಡಾಕೂಟದ ಸಮಯದಲ್ಲಿ ದೇಶದ ಹೆಮ್ಮೆಯ ಕ್ರೀಡಾಪಟು ಹಾಗೂ ವಿಶ್ವಚಾಂಪಿಯನ್ ಪಿ.ವಿ.ಸಿಂಧುರವರ ಕೈಸೇರುವ ಮೂಲಕ ದಸರಾ ಕ್ರೀಡಾಕೂಟ ಉದ್ಘಾಟನೆಯಾಗಲಿದೆ.

Key words: first time -Dasara sports –jyothi -travel -Mysore – all taluks