ಬಾರದ ಮುಂಗಾರು, ಅನ್ನದಾತ ಕಂಗಾಲು!

ಬೆಂಗಳೂರು:ಜೂ-12: ಜೂನ್ ಮೊದಲ ವಾರವೇ ರಾಜ್ಯವನ್ನು ಪ್ರವೇಶಿಸಬೇಕಿದ್ದ ಮುಂಗಾರು, 2 ವಾರ ಕಳೆದರೂ ರಾಜ್ಯದತ್ತ ಸುಳಿಯದಿರುವುದು ರೈತಾಪಿ ವರ್ಗವನ್ನು ಕಂಗೆಡಿಸಿದ್ದು, ಏಕದಳ, ದ್ವಿದಳ ಧಾನ್ಯ, ಎಣ್ಣೆಕಾಳುಗಳು ಬಿತ್ತನೆ ಕುಂಠಿತ ಗೊಂಡಿದ್ದು, ಶೇ.42 ಮಾತ್ರ ಬಿತ್ತನೆ ಯಾಗಿದೆ. ಬುಧವಾರವೂ ಮುಂಗಾರು ಪ್ರವೇಶದ ನಿರೀಕ್ಷೆ ಹುಸಿಯಾಗಿದೆ.

ರಾಜ್ಯದ ಈ ವೇಳೆಗೆ 79.69 ಲಕ್ಷ ಹೆಕ್ಟೇರ್​ನಲ್ಲಿ ಬಿತ್ತನೆ ಆಗಬೇಕಿತ್ತು. ಆದರೆ ಈವರೆಗೆ ಕೇವಲ 5.93 ಲಕ್ಷ ಹೆಕ್ಟೇರ್​ನಲ್ಲಿ ಮಾತ್ರವೇ ಬಿತ್ತನೆಯಾಗಿದೆ. ತೀವ್ರ ಬರದಿಂದ ಜಲಾಶಯಗಳು ಬರಿದಾಗಿದ್ದು, ಈ ವೇಳೆಗೆ ಮಳೆ ತೀವ್ರಗೊಂಡು ಜಲಾಶಯಗಳಿಗೆ ಒಳಹರಿವು ಹೆಚ್ಚಬೇಕಿತ್ತು.

ಸಿಗದ ಸ್ಪಷ್ಟ ಚಿತ್ರಣ: ರಾಜ್ಯಕ್ಕೆ ಮುಂಗಾರು ಪ್ರವೇಶ ಈಗಾಗಲೇ 12 ದಿನ ವಿಳಂಬವಾಗಿದ್ದು, ರಾಜ್ಯದ ಕರಾವಳಿ ಹಾಗೂ ಮಲೆನಾಡಿನ ಕೆಲ ಜಿಲ್ಲೆ ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿ ಮಳೆಯಾಗಿಲ್ಲ. ಈ ಪ್ರದೇಶಗಳಲ್ಲೂ ವಾಯು ಚಂಡಮಾರುತದ ಪರಿಣಾಮ ಮಳೆ ಆಗಿದ್ದು, ಮುಂಗಾರು ಕುರಿತು ಸ್ಪಷ್ಟ ಚಿತ್ರಣ ಕಂಡು ಬಂದಿಲ್ಲ.

ಮುಖ್ಯಮಂತ್ರಿಗೆ ವಿವರಣೆ

ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಕೋಶದ ಉಸ್ತುವಾರಿ ಶ್ರೀನಿವಾಸ ರೆಡ್ಡಿ ಮಳೆಯ ಸಮಗ್ರ ಚಿತ್ರಣವನ್ನು ಬುಧವಾರ ಸಿಎಂ ಎಚ್.ಡಿ. ಕುಮಾರಸ್ವಾಮಿಗೆ ವಿವರಿಸಿದ್ದು, ಮುಂಗಾರು ವಿಳಂಬದಿಂದ ಎದುರಾಗಿರುವ ತೊಡಕುಗಳನ್ನು ತಿಳಿಸಿದ್ದಾರೆ.

ಕರಾವಳಿ, ಮಲೆನಾಡಲ್ಲಿ ಮಳೆ ಚುರುಕು

‘ವಾಯು’ ಚಂಡಮಾರುತ ಪರಿಣಾಮ ದಕ್ಷಿಣ ಕನ್ನಡ ಹಾಗೂ ಉಡುಪಿ, ಕೊಡಗು ಹಾಗೂ ಮಲೆನಾಡಿನ ಘಟ್ಟ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ. ಕರಾವಳಿಗೆ ಮುಂಗಾರು ಕಾಲಿಡದಿದ್ದರೂ ಅರಬ್ಬಿ ಸಮುದ್ರದಲ್ಲಿ ಗುಜರಾತ್ ಕಡೆಗೆ ಸಾಗಿದ ಚಂಡಮಾರುತದ ಪ್ರಭಾವದಿಂದಾಗಿ ಅಲ್ಲಲ್ಲಿ ಮಳೆಯಾಗಿದೆ. ಕಡಲು ಪ್ರಕ್ಷ್ಯುಬ್ದಗೊಂಡಿದ್ದು, ಬೃಹತ್ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ.

ಗುಜರಾತ್​ಗೆ ಇಂದು ವಾಯು

ಅಹಮದಾಬಾದ್: ಅರಬ್ಬಿಸಾಗರದಲ್ಲಿ ಹುಟ್ಟಿಕೊಂಡಿರುವ ಚಂಡಮಾರುತ ವಾಯು ಪಶ್ಚಿಮ ಕರಾವಳಿಯತ್ತ ವೇಗವಾಗಿ ನುಗ್ಗುತ್ತಿದ್ದು, ಗುರುವಾರ ಗುಜರಾತ್ ಕರಾವಳಿಯನ್ನು ಅಪ್ಪಳಿಸಲಿದೆ. ವಾಯು ತೀವ್ರತೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದ್ದು, ಗಂಟೆಗೆ 113ರಿಂದ 135 ಕಿಮೀ ವೇಗದಲ್ಲಿ ಗುಜರಾತ್ ಕರಾವಳಿಗೆ ಅಪ್ಪಳಿಸುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿರುವ ಹಿನ್ನೆಲೆಯಲ್ಲಿ ತ್ವರಿತಗತಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದ್ದು, 3 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ಕಚ್, ದೇವಭೂಮಿ, ಪೋರಬಂದರು, ರಾಜ್​ಕೋಟ್, ಜುನಾಗಢ, ದೀವ್, ಗಿರ್, ಸೋಮನಾಥ. ಅಮ್ರೇಲಿ, ಭಾವನಗರ್ ಜಿಲ್ಲೆಗಳಿಗೆ ರಭಸದಿಂದ ಅಪ್ಪಳಿಸಲಿದ್ದು, ಇಲ್ಲಿನ 60 ಲಕ್ಷ ಜನರು ಇದರಿಂದ ಪ್ರಭಾವಿತರಾಗಲಿದ್ದಾರೆ. ಪ್ರವಾಸಿಗರಿಗೂ ಎಚ್ಚರಿಕೆ ನೀಡಲಾಗಿದ್ದು, ದ್ವಾರಕಾ, ಸೋಮನಾಥ ಮತ್ತು ಕಚ್​ಗೆ ಆಗಮಿಸಿರುವ ಪ್ರವಾಸಿಗರು ಜೂ.12ರ ಮಧ್ಯಾಹ್ನದೊಳಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಲಾಗಿತ್ತು. ಕರಾವಳಿ ಭಾಗದ ಗ್ರಾಮಗಳ 39 ಶಾಲೆ, ಕಾಲೇಜುಗಳಿಗೆ ಗುರುವಾರ ರಜೆ ಘೋಷಿಸಲಾಗಿದೆ.
ಕೃಪೆ:ವಿಜಯವಾಣಿ
farmers-are-waiting-for-monsoon