ಅಭದ್ರತೆ ಚರ್ಚೆ ಬಿಡಿ, ಕೆಲಸ ಮಾಡಿ ಜಿಲ್ಲಾಧಿಕಾರಿ, ಸಿಇಒ ಸಭೆ : ಅಧಿಕಾರಿ ವಲಯಕ್ಕೆ ಡಿಸಿಎಂ ಪರಮೇಶ್ವರ್ ಖಡಕ್ ಎಚ್ಚರಿಕೆ

ಬೆಂಗಳೂರು:ಜೂ-13: ಮೈತ್ರಿ ಸರ್ಕಾರ ಅಭದ್ರತೆಯಲ್ಲಿ ಇದೆ ಎಂಬ ಕೂಗಿನ ಬೆನ್ನಲ್ಲೇ ಅಧಿಕಾರಿಗಳ ಸಭೆ ನಡೆಸಿದ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಡಿಸಿಎಂ ಜಿ.ಪರಮೇಶ್ವರ್, ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದರು. ಅಲ್ಲದೆ, ಜನಪರ ಯೋಜನೆಗಳ ಅನುಷ್ಠಾನ ವಿಳಂಬಕ್ಕೆ ಆಕ್ರೋಶ ವ್ಯಕ್ತಪಡಿಸಿ, ತ್ವರಿತ ಕ್ರಮಕ್ಕೆ ಸೂಚಿಸಿದರು.

ವಿಧಾನಸೌಧದಲ್ಲಿ ಬುಧವಾರ ಆರಂಭವಾದ ಎರಡು ದಿನಗಳ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಮ್ಮೇಳನದಲ್ಲಿ ಮಾತನಾಡಿದ ಡಿಸಿಎಂ ಪರಮೇಶ್ವರ್, ‘ರಾಜ್ಯ ಸರ್ಕಾರ ಅಭದ್ರವಾಗಿದೆ ಎಂದು ಅಧಿಕಾರಿಗಳು ತಮಾಷೆಯಾಗಿಯೂ ಚರ್ಚೆ ಮಾಡಬಾರದು. ಸರ್ಕಾರವನ್ನು ಭದ್ರವಾಗಿ ಇಟ್ಟುಕೊಳ್ಳುವ ಕೆಲಸ ನಾವು ನೋಡಿಕೊಳ್ಳುತ್ತೇವೆ. ಆ ವಿಷಯ ಅಧಿಕಾರಿಗಳಿಗೆ ಬೇಕಿಲ್ಲ’ ಎಂದು ಗಡಸು ದನಿ ಯಲ್ಲಿ ಎಚ್ಚರಿಕೆ ನೀಡಿದರು.

ಮೈತ್ರಿ ಸರ್ಕಾರದ ಭದ್ರತೆ ನಿಮಗೆ (ಅಧಿಕಾರಿಗಳಿಗೆ) ಸಂಬಂಧ ಇಲ್ಲದ ವಿಚಾರ. ಸರ್ಕಾರ ಸುಭದ್ರವಾಗಿಲ್ಲ ಎಂಬ ಭಾವನೆ ಅನೇಕರಲ್ಲಿದೆ. ಕೆಲವು ಅಧಿಕಾರಿಗಳಲ್ಲೂ ಇದೇ ಅಭಿಪ್ರಾಯವಿದೆ. ಇಂದು, ನಾಳೆ ಬಿದ್ದುಹೋಗುತ್ತದೆ ಎಂದು ಕೆಲ ಅಧಿಕಾರಿಗಳು ಮಾತನಾಡಿಕೊಂಡಿದ್ದಾರೆ. ಯಾರು ಮಾತನಾಡಿದ್ದಾರೆಂಬ ಹೆಸರೂ ಇದೆ. ಈಗ ಹೇಳಲ್ಲ ಎಂದು ಸಭೆಯಲ್ಲಿದ್ದವರಿಗೆ ಡಿಸಿಎಂ ಶಾಕ್ ನೀಡಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ರೈತರ ಸಾಲಮನ್ನಾ ಯೋಜನೆಯನ್ನು ಅಧಿಕಾರಿಗಳು ಸಮರ್ಪಕವಾಗಿ ನಿಭಾಯಿಸುತ್ತಿದ್ದಾರೆ. ಆದರೆ, ಸುಮ್ಮನೆ ರಾಜ್ಯ ಸರ್ಕಾರದ ವಿರುದ್ಧ ಅಪಪ್ರಚಾರ ನಡೆಯುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್​ಗಳು ಮಾಡಿಕೊಂಡ ಸಮಸ್ಯೆಯಿಂದ ನಮಗೆ ಕೆಟ್ಟ ಹೆಸರು ಬರುತ್ತಿದೆ. ಸಾಲಮನ್ನಾ ಫಲಾನುಭವಿಗಳನ್ನು ಗುರುತಿಸಿ ಪಾರದರ್ಶಕ ಕೆಲಸ ಮಾಡಿದ್ದೀರಿ, ನಿಮಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಅಧಿಕಾರಿಗಳನ್ನುದ್ದೇಶಿಸಿ ಹೇಳಿದರು.

ಸರ್ಕಾರ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿದ್ದು, ಈ ಬಗ್ಗೆ ಮಾಧ್ಯಮಗಳು ಮುಕ್ತವಾಗಿ ಚರ್ಚೆ ಮಾಡಬೇಕು. ಬರ ನಿರ್ವಹಣೆ ಬಗ್ಗೆ ಪ್ರತಿಪಕ್ಷದವರ ಟೀಕೆ-ಟಿಪ್ಪಣಿ ನೋಡಿದ್ದೇನೆ. ಹೊರ ನೋಟಕ್ಕೆ ಪ್ರತಿಪಕ್ಷಗಳು ಟೀಕೆ ಮಾಡುತ್ತಿವೆಯಷ್ಟೇ. ಅಧಿಕಾರಿಗಳು ರೈತರಿಗೆ ನೆರವಾಗಬೇಕೆಂದು ಸಿಎಂ ಸೂಚಿಸಿದರು.

ನೀರಿನ ಟ್ಯಾಂಕ್​ಗೆ ನಾನು ಹೊಣೆಯೇ?

ಜನರ ನಡುವೆ ಸಿಎಂ ಇರಬೇಕೆಂಬ ಕಾರಣಕ್ಕೆ ಗ್ರಾಮ ವಾಸ್ತವ್ಯ ಮಾಡುತ್ತಿದ್ದೇನೆ. ಪ್ರಚಾರಕ್ಕಾಗಿ, ಗಿಮಿಕ್​ಗಾಗಿ ಅಲ್ಲ. ಬೆಳಗ್ಗೆ 10 ಗಂಟೆಗೆ ಗ್ರಾಮಕ್ಕೆ ಭೇಟಿ ಕೊಟ್ಟು ಸ್ಥಳದಲ್ಲೇ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಹೊಸ ರೂಪದಲ್ಲಿ ವಾಸ್ತವ್ಯ ಮಾಡುತ್ತಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು. ಜೂ.22ರಂದು ನಾನು ಭೇಟಿ ಕೊಡುತ್ತಿರುವ ಗ್ರಾಮದಲ್ಲಿ ಕುಡಿಯುವ ನೀರಿನ ಟ್ಯಾಂಕ್ ಎಂಟು ವರ್ಷದಿಂದ ರಿಪೇರಿ ಆಗಿಲ್ಲ. ಇದಕ್ಕೆ ನಾನು ಹೊಣೆಯೇ, ಈ ಸರ್ಕಾರ ಹೊಣೆಯೇ ಎಂದು ಮಾಧ್ಯಮ ವರದಿಗೆ ಆಕ್ಷೇಪಿಸಿದರು. ನಾನು ಗ್ರಾಮ ವಾಸ್ತವ್ಯ ಆರಂಭಿಸುತ್ತಿದ್ದಂತೆ ಅನೇಕ ಹುಳುಕು ಹೊರಬರುತ್ತಿವೆ ಎಂದ ಉದ್ಘರಿಸಿದರು.

ರೈಲು ಪ್ರಯಾಣ?: ಗ್ರಾಮ ವಾಸ್ತವ್ಯದಲ್ಲಿ ಆಡಂಬರ ತೋರದೆ ಸರಳ ರೀತಿಯಲ್ಲಿ ತೆರಳಿ ಪರಿಣಾಮಕಾರಿಯಾಗಿಸಲು ಸಿಎಂ ಯೋಜನೆ ರೂಪಿಸಿದ್ದಾರೆಂದು ಗೊತ್ತಾಗಿದೆ. ಬೆಂಗಳೂರಿನಿಂದ ಹೆಲಿಕ್ಯಾಪ್ಟರ್ ಬದಲು ರೈಲಲ್ಲೇ ಪ್ರಯಾಣಿಸುವ ಬಗ್ಗೆ ರ್ಚಚಿಸಿದ್ದಾರೆ.

ಬಿಪಿಎಲ್ ಕಾರ್ಡ್ ಪ್ಯಾರಾಮೀಟರ್ ಮರುಪರಿಶೀಲನೆಗೆ ಸರ್ಕಾರ ಒಲವು

ಬಿಪಿಎಲ್ ಕಾರ್ಡ್ ಪ್ಯಾರಾಮೀಟರ್ ಮರುಪರಿಶೀಲನೆಯ ತುರ್ತು ಅಗತ್ಯವಿದೆ ಎಂದು ಡಿಸಿಎಂ ಜಿ.ಪರಮೇಶ್ವರ್ ಅಧಿಕಾರಿಗಳ ಸಭೆಯಲ್ಲಿ ಅಭಿಪ್ರಾಯಪಟ್ಟರು. ಈಗಿನ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಶೇ.90 ಜನ ಬಿಪಿಎಲ್ ಪಡಿತರ ಚೀಟಿ ವ್ಯಾಪ್ತಿಗೆ ಬರಲಿದ್ದಾರೆ. ಅಭಿವೃದ್ಧಿಶೀಲ ರಾಜ್ಯವಾದ ಕರ್ನಾಟಕದಲ್ಲಿ ಇಷ್ಟು ಪ್ರಮಾಣದ ಬಡವರು ಇದ್ದಾರೆಯೇ? ಎಂದು ಕಳವಳ ವ್ಯಕ್ತಪಡಿಸಿದರು. ಐಟಿ-ಬಿಟಿ ಸಿಟಿ ಎಂದೇ ರಾಜ್ಯ ಖ್ಯಾತಿ ಹೊಂದುತ್ತಿದೆ. ಹೀಗಿರುವಾಗ ಇಷ್ಟು ಪ್ರಮಾಣದ ಬಡವರು ಇರಲು ಹೇಗೆ ಸಾಧ್ಯ? ಇಲಾಖೆ ಯಾವ ಮಾನದಂಡದಲ್ಲಿ ಬಿಪಿಎಲ್ ಕಾರ್ಡ್ ವಿತರಿಸುತ್ತಿದೆ ಎಂದು ಪ್ರಶ್ನಿಸಿದ ಡಿಸಿಎಂ, ಈ ಬಗ್ಗೆ ಮರುಪರಿಶೀಲನೆಯ ಅಗತ್ಯವಿದೆ ಎಂದರು. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಬಿಪಿಎಲ್ ಕಾರ್ಡ್​ದಾರರ ಸರ್ವೆ ನಡೆದಿತ್ತು. 38 ಲಕ್ಷ ಬಿಪಿಎಲ್ ಕಾರ್ಡ್ ದಾರರು ಇದ್ದಾರೆಂಬ ಕಾರಣಕ್ಕೆ ಆಕ್ಷೇಪಣೆ ಬಂದಿತ್ತು, ಬಳಿಕ ಎರಡು ಬಾರಿ ಸರ್ವೆ ಮಾಡಿಸಿದಾಗ 62 ಲಕ್ಷ ಆಗಿತ್ತು ಎಂದು ವಿವರಿಸಿದರು. ಮನೆ ಬಿಲ್ ಪಾವತಿಗೆ ವರ್ಷ ಗಂಗಾಕಲ್ಯಾಣ ಅನುಷ್ಠಾನಕ್ಕೆ 3 ವರ್ಷ!

ಸರ್ಕಾರದ ವಸತಿ ಯೋಜನೆ ಅನುದಾನ ಪಾವತಿಗೆ ವರ್ಷ, ಗಂಗಾ ಕಲ್ಯಾಣ ಅನುಷ್ಠಾನ 2-3 ವರ್ಷವಾದರೂ ಆಗುತ್ತಿಲ್ಲ ಎಂದು ಡಿಸಿಎಂ ಜಿ.ಪರಮೇಶ್ವರ್ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ವಸತಿ ರಹಿತ ಬಡವರಿಗೆ ಮನೆ ನೀಡುವುದು ಸರ್ಕಾರ ಆದ್ಯತೆ ಕಾರ್ಯಕ್ರಮ. ಆದರೆ ಅನೇಕ ಕಡೆ 6 ತಿಂಗಳು, ವರ್ಷವಾದರೂ ಬಿಲ್ ಬಂದಿಲ್ಲ ಎಂಬ ದೂರಿದೆ. ಜಿಲ್ಲೆಗಳಿಗೆ ಹೋದಾಗ ಇಂಥ ಸಂಗತಿ ಗಮನಕ್ಕೆ ಬರುತ್ತಿದೆ ಎಂದರು. ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊಳವೆ ಬಾವಿ ಕೊರೆಸಲು ಸರ್ಕಾರದಲ್ಲಿ ಅನುಮತಿ ನೀಡಿದ ಬಳಿಕ ಜಿಲ್ಲೆ, ತಾಲೂಕುಗಳಲ್ಲಿ ಅನುಷ್ಠಾನವಾಗಲು 1, ಒಂದೂವರೆ ವರ್ಷವಾಗುತ್ತದೆ. ಕೊಳವೆ ಬಾವಿ ತೋಡಿದ ನಂತರ ವಿದ್ಯುತ್ ಸಂಪರ್ಕ ನೀಡಲು ಎಸ್ಕಾಂಗಳು ಮತ್ತೆ ಒಂದು ವರ್ಷ ತೆಗೆದುಕೊಳ್ಳುತ್ತವೆ ಎಂದು ಬೇಸರಿಸಿದರು.

ಕಡತ ವಿಲೇವಾರಿಯಲ್ಲಿ ವಿಳಂಬವಾಗಿಲ್ಲ

ಸರ್ಕಾರದಲ್ಲಿ ಕಡತ ವಿಲೇವಾರಿ ವಿಳಂಬವಾಗಿದೆ ಎಂದು ಕೆಲವೊಂದು ಮಾಧ್ಯಮಗಳು ವರದಿ ಮಾಡಿವೆ. ಆದರೆ ಅಂಥದ್ದು ನಡೆದಿಲ್ಲ ಎಂದು ಸಿಎಂ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಮಾಧ್ಯಮದಲ್ಲಿ ವರದಿ ಬಂದ ಕೂಡಲೇ ಮುಖ್ಯಕಾರ್ಯದರ್ಶಿ ಅವರಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡೆ. ಮಾಧ್ಯಮದಲ್ಲಿ ಬಂದ ರೀತಿ ದೊಡ್ಡ ಮಟ್ಟದಲ್ಲೇನು ಕಡತಗಳು ವಿಲೇವಾರಿ ಆಗದೆ ಬಾಕಿ ಉಳಿದಿಲ್ಲ ಎಂಬುದು ಸ್ಪಷ್ಟವಾಯಿತು. ಹಿಂದಿನ ಸರ್ಕಾರಕ್ಕೆ ಹೋಲಿಸಿದರೆ ಕಡಿಮೆ ಸಮಯದಲ್ಲಿ ವಿಲೇವಾರಿ ಆಗುತ್ತಿದೆ, ಅಧಿಕಾರಿಗಳು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿದ್ದಾರೆ ಎಂದರು.

ಪೇಚಿಗೆ ಸಿಲುಕಿದ ರೇವಣ್ಣ

ಡಿಸಿಎಂ ಪರಮೇಶ್ವರ್ ಅವರನ್ನು ಹಾಸ್ಯ ಮಾಡಲು ಹೋಗಿ ಸಚಿವ ರೇವಣ್ಣ ಪೇಚಿಗೊಳಗಾದ ಪ್ರಸಂಗ ಅಧಿಕಾರಿಗಳ ಸಭೆಯಲ್ಲಿ ನಡೆಯಿತು. ಸಮಾಜ ಕಲ್ಯಾಣ ವ್ಯಾಪ್ತಿಯ ಹಾಸ್ಟೆಲ್ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಚರ್ಚೆ ನಡೆಸುತ್ತಿದ್ದರು. ಮಧ್ಯ ಪ್ರವೇಶಿಸಿದ ರೇವಣ್ಣ, ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಶುರು ಮಾಡ್ತಿದ್ದಾರೆ, ಅದರಂತೆ ಡಿಸಿಎಂ ಸರ್ ನೀವು ಹಾಸ್ಟೆಲ್ ವಾಸ್ತವ್ಯ ಮಾಡಿ ಎಂದು ರೇಗಿಸಿದರು. ರೇವಣ್ಣ ಮಾತಿಗೆ ನಗುತ್ತಲೇ ತಿರುಗೇಟು ನೀಡಿದ ಪರಮೇಶ್ವರ್, ‘ಹೇಗಿದ್ರೂ ನೀವು ಗೆಸ್ಟ್ ಹೌಸ್ ಚೆನ್ನಾಗಿ ಮಾಡಿಕೊಂಡಿದ್ದೀರಲ್ಲ. ಅಲ್ಲಿ ಹೋಗಿ ವಾಸ್ತವ್ಯ ಮಾಡಿ’ ಕಿಚಾಯಿಸಿದರು.

ವಿಧವಾ ವೇತನ ಮಾನದಂಡ ಬದಲು?

ರಾಜ್ಯದಲ್ಲಿ ನೀಡುತ್ತಿರುವ ವಿಧವಾ ವೇತನ ಯೋಜನೆಯ ಮಾನದಂಡ ಬದಲಾವಣೆ ಬಗ್ಗೆ ಸಿಎಂ ನೇತೃತ್ವದ ಸಭೆ ಚರ್ಚೆ ನಡೆಸಿದೆ. ಈಗಿರುವ ಮಾನದಂಡಗಳನ್ನು ಸರಿಪಡಿಸುವಂತೆ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

1.52 ಲಕ್ಷ ಕೇಸ್ ಬಾಕಿ!

ಕಂದಾಯ ಇಲಾಖೆಯಲ್ಲಿ ಇನ್ನೂ 1 ಲಕ್ಷದ 52 ಸಾವಿರ ಕೇಸ್​ಗಳು ಬಾಕಿ ಇವೆ. ಹೀಗಾಗಿ ಇದಕ್ಕೊಂದು ಪರಿಹಾರ ಅಗತ್ಯವಿದೆ ಎಂದು ಸಿಎಂ ನೇತೃತ್ವದ ಅಧಿಕಾರಿಗಳ ಸಭೆಯಲ್ಲಿ ಚರ್ಚೆ ನಡೆದಿದೆ. ತೆಲಂಗಾಣದ ಅದಲಾತ್ ಮಾದರಿಯನ್ನು ರಾಜ್ಯದಲ್ಲೂ ಜಾರಿಗೊಳಿಸಿ ಪ್ರಕರಣ ಇತ್ಯರ್ಥಕ್ಕೆ ಸಿಎಂ ಸೂಚನೆ ನೀಡಿದ್ದಾರೆ.

ಹಾಸ್ಟೆಲ್ ಭೇಟಿ ಕಡ್ಡಾಯ ಆಧಾರ್ ಸೀಡಿಂಗ್​ಗೆ ಗಡುವು

ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ರಾಜ್ಯದ 55 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮಂಜೂರು ಮಾಡಲು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಸೀಡಿಂಗ್ ಕಾರ್ಯವನ್ನು ಜೂನ್ ಅಂತ್ಯದೊಳಗೆ ಪೂರ್ಣಗೊಳಿಸಲು ಸಿಎಂ ಸೂಚಿಸಿದ್ದಾರೆ. ಡಿಸಿ, ಸಿಇಒಗಳು ಕಡ್ಡಾಯವಾಗಿ ಹಾಸ್ಟೆಲ್​ಗಳಿಗೆ ಭೇಟಿ ನೀಡಿ ಆಹಾರದ ಗುಣಮಟ್ಟ,

ಸ್ವಚ್ಛತೆ ಹಾಗೂ ಮೂಲಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಬೇಕು. ಕೆಲ ಹಾಸ್ಟೆಲ್​ಗಳಲ್ಲಿ ಅನಧಿಕೃತವಾಗಿ ಕೆಲವರು ಉಳಿದುಕೊಂಡಿರುವುದು ಗಮನಕ್ಕೆ ಬಂದಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ಸೂಚಿಸಿದರು.

ಹಳ್ಳಿಗೆ ನಡೀರಿ

ಜನರ ಜತೆ ಹೆಚ್ಚು ಬೆರೆತು ಅವರ ಸಮಸ್ಯೆಗಳನ್ನು ಅರಿತು ಪರಿಹಾರ ಮಾಡಿಕೊಡಿ ಎಂದು ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒಗಳಿಗೆ ಸಿಎಂ ಕುಮಾರಸ್ವಾಮಿ ಸಲಹೆ ನೀಡಿದರು. ವಾರದಲ್ಲಿ ಒಂದು ದಿನವಾದರೂ ಹಳ್ಳಿಗಳಿಗೆ ಭೇಟಿ ಕೊಡಿ ಅಂತ ಈ ಹಿಂದಿನ ಸಭೆಯಲ್ಲಿ ಹೇಳಿದ್ದೆ, ಕೆಲವರು ಭೇಟಿ ಕೊಟ್ಟಿದ್ದರ ಮಾಹಿತಿ ಇದೆ. ಎಲ್ಲರೂ ಈ ರೀತಿ ನಡೆದು ಕೊಂಡರೆ, ಅನೇಕ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು.

ಡಿಸಿ, ಸಿಇಒಗಳಿಗೆ ಸೂಚನೆ

1. ಸತತವಾಗಿ ಬರ ಹಾಗೂ ಅಂತರ್ಜಲ ಮಟ್ಟ ಕುಸಿಯುತ್ತಿರುವ ಹಿನ್ನೆಲೆ ಜಲ ಸಂರಕ್ಷಣೆ ಹಾಗೂ ಜಾಗೃತಿಯನ್ನು ಆಂದೋಲನದ ಮಾದರಿಯಲ್ಲಿ ರೂಪಿಸಬೇಕು.

2. ಹೆಚ್ಚು ನೀರಿರುವ ಕೊಳವೆಬಾವಿಗಳನ್ನು ಗುರುತಿಸಿ, ಮಾಲೀಕರೊಂದಿಗೆ ಮುಂಚಿತವಾಗಿಯೇ ಒಪ್ಪಂದ ಮಾಡಿಕೊಂಡು ಅಗತ್ಯತೆ ಎದುರಾದಾಗ ಬಳಸಿಕೊಳ್ಳಬೇಕು.

3. ನೀರಿನ ಸಮಸ್ಯೆ ಪರಿಹಾರಕ್ಕೆ ಕೊಳವೆ ಬಾವಿ ಕೊರೆಯುವುದು ಕಟ್ಟ ಕಡೆಯ ಆಯ್ಕೆಯಾಗಿರಬೇಕು.

4. ಟ್ಯಾಂಕರ್ ನೀರು ಪೂರೈಕೆ ಬಿಲ್ಲುಗಳನ್ನು 15 ದಿನದೊಳಗಾಗಿ ಪಾವತಿಸಬೇಕು. ಟ್ಯಾಂಕರ್​ಗಳಿಗೆ ಜಿಪಿಎಸ್ ಅಳವಡಿಕೆ ಕಡ್ಡಾಯವಾಗಬೇಕು.

5. ರಾಜ್ಯ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಳ್ಳಿಗಳಿಗೆ ಭೇಟಿ ನೀಡಿ ಅಭಿವೃದ್ಧಿ ಹಾಗೂ ಬರ ಪರಿಹಾರ ಕಾಮಗಾರಿಗಳನ್ನು ಪರಿಶೀಲಿಸಬೇಕು. ಜನರ ಕುಂದುಕೊರತೆ ಪರಿಹರಿಸಬೇಕು.

6. ಇನ್ನು 4-5 ದಿನಗಳೊಳಗೆ ಬಾಕಿ ಇನ್​ಪುಟ್ ಸಬ್ಸಿಡಿ ಪಾವತಿಗೆ ಕ್ರಮ ವಹಿಸಬೇಕು.

7. ಹೋಬಳಿ ಮಟ್ಟದಲ್ಲಿ ಕಡ್ಡಾಯವಾಗಿ ಕಂದಾಯ ಅದಾಲತ್, ಪಿಂಚಣಿ ಅದಾಲತ್ ನಡೆಸಬೇಕು.

8. ಉತ್ತರ ಕನ್ನಡ ಮಾದರಿಯಲ್ಲಿ ಹಿರಿಯ ನಾಗರಿಕರಿಗೆ ಮನೆ ಮನೆ ಸಮೀಕ್ಷೆ ನಡೆಸಿ, ವೃದ್ಧಾಪ್ಯ ವೇತನ ನೀಡುವ ಕಾರ್ಯ ಮಾಡಬೇಕು.

9. ಕೈಗಾರಿಕೆಗಳಿಗೆ ಭೂ ಪರಿವರ್ತನೆ ಮಾಡಿಕೊಡುವ ವಿಚಾರದಲ್ಲಿ ಅರ್ಜಿದಾರರಿಗೆ ಕಿರುಕುಳ ನೀಡಬೇಡಿ. ಅವರ ಅರ್ಜಿಗಳನ್ನು ತ್ವರಿತ ವಿಲೇವಾರಿ ಮಾಡಿ.

10. ಘನತಾಜ್ಯ ವಿಲೇವಾರಿಯನ್ನು ಅಕ್ಟೋಬರ್ ಒಳಗೆ ಅನುಷ್ಠಾನಕ್ಕೆ ತನ್ನಿ.

11. ಜೂ.20ರೊಳಗೆ ಗ್ರಾಮ ಪಂಚಾಯಿತಿ ಕ್ರಿಯಾಯೋಜನೆಗಳನ್ನು ಸಲ್ಲಿಸಿ.
ಕೃಪೆ:ವಿಜಯವಾಣಿ

ಅಭದ್ರತೆ ಚರ್ಚೆ ಬಿಡಿ, ಕೆಲಸ ಮಾಡಿ ಜಿಲ್ಲಾಧಿಕಾರಿ, ಸಿಇಒ ಸಭೆ : ಅಧಿಕಾರಿ ವಲಯಕ್ಕೆ ಡಿಸಿಎಂ ಪರಮೇಶ್ವರ್ ಖಡಕ್ ಎಚ್ಚರಿಕೆ
coalition government,DCM ParamEshwar,CEO,officers,Meeting