ರೈತರ ಮೇಲಿನ ಪೊಲೀಸ್ ದೌರ್ಜನ್ಯ ಖಂಡನೆ: ಕೂಡಲೇ ಪ್ರಧಾನಿ ಮೋದಿ ಸಮಸ್ಯೆ ಬಗೆಹರಿಸಲಿ- ಕುರುಬೂರು ಶಾಂತಕುಮಾರ್.

ನವದೆಹಲಿ,ಫೆಬ್ರವರಿ,14,2024(www.justkannada.in): ದೆಹಲಿ ರಾಜಸ್ಥಾನ ಗಡಿಯಲ್ಲಿನ  ರೈತರ ಮೇಲೆ ಪೊಲೀಸರು ನಡೆಸಿರುವ ದೌರ್ಜನ್ಯ ಖಂಡಿಸುತ್ತೇನೆ. ,ಕೂಡಲೆ ಪ್ರಧಾನಿ ಮೋದಿಯವರು ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲಿ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ  ಕುರುಬೂರು ಶಾಂತಕುಮಾರ್ ಆಗ್ರಹಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿರುವ ಕುರುಬೂರು ಶಾಂತಕುಮಾರ್, ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲಿನ ಯಾವುದೇ ದಾಳಿಯನ್ನು ರೈತ  ಆಂದೋಲನವು ಪ್ರತಿರೋಧಿಸಲಿದೆ ಎಂದು  ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ. ರೈತರ ಸಂಘಟನೆಗಳ ದೆಹಲಿ ಚಲೋ ಮೆರವಣಿಗೆಯನ್ನು ತಡೆಯಲು ಪ್ರಭುತ್ವ ಅಧಿಕಾರ ದುರ್ಬಳಕೆ ಮಾರ್ಗ ಮಾಡಿಕೊಂಡು, ರೈತರ ಮೇಲೆ ಕೇಂದ್ರ ಸರ್ಕಾರ ನಡೆಸಿರುವ, ಲಾಠಿ ಪ್ರಹಾರ, ರಬ್ಬರ್ ಬುಲೆಟ್, ಅಶ್ರುವಾಯು   ಸಿಡಿತ  ಮತ್ತು ಸಾಮೂಹಿಕ ಬಂಧನವನ್ನ  ಖಂಡಿಸುತೇನೆ.  ರೈತರ ಮೇಲೆ ಅಶ್ರುವಾಯು ಶೆಲ್‌ ಗಳನ್ನು ಎಸೆಯಲು ಡ್ರೋನ್‌ ಗಳನ್ನು ಬಳಸಿರುವುದು ಅತ್ಯಂತ ಅಘಾತಕಾರಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತರ ಮೇಲೆ ನಡೆಸಿರುವ ಈ ಪೈಶಾಚಿಕ ದೌರ್ಜನ್ಯವನ್ನು ಖಂಡಿಸಲು, ದೇಶದಾದ್ಯಂತ ಪ್ರತಿಭಟಿಸಲು ಮತ್ತು  ಗ್ರಾಮೀಣ ಬಂದ್ ವ್ಯಾಪಕ ಮತ್ತು ಯಶಸ್ವಿಯಾಗಿ ನಡೆಸಲು ಎಲ್ಲಾ ಸಂಘಟನೆಗಳು ಸ್ವಯಂ ಪ್ರೇರಿತವಾಗಿ ಮುಂದೆ ಬರಬೇಕು.  ರಾಜ್ಯಾದ್ಯಂತ ಎಲ್ಲ ರೈತ ಸಂಘಟನೆಗಳು  ಫೆ.16 ರಂದು ರಾಜ್ಯಾದ್ಯಂತ ಬೆಳಿಗ್ಗೆ 11 ರಿಂದ 1 ಗಂಟೆ ತನಕ ರಸ್ತೆ ಬಂದ್ ಚಳುವಳಿ ನಡೆಸಲಾಗುತ್ತದೆ.  ಇದು ದೇಶದ ರೈತರ ಅಳಿವು ಉಳಿವಿನ ಪ್ರಶ್ನೆಯಾಗಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯತರ) ಕರೆ ನೀಡಿದೆ.

ರೈತರ ಶಾಂತಿಯುತ ಹೋರಾಟದ ಮೇಲೆ ದಾಳಿ ಮಾಡಲು ಪೊಲೀಸರು ಮತ್ತು ಸಶಸ್ತ್ರ ಭದ್ರತಾ ಪಡೆಗಳನ್ನು ಛೂ ಬಿಟ್ಟಿರುವುದು ಸರ್ಕಾರ ರೈತರ ಆಂದೋಲನ ದಮನ ಮಾಡುವ ಕಾರ್ಯವಾಗಿದೆ.  ಇಂತಹ ಕೆಟ್ಟ ನೀತಿಗಳಿಂದ ಸರ್ಕಾರ ಜನರ ವಿಶ್ವಾಸವನ್ನು ಕಳೆದುಕೊಂಡಿದೆ ಎಂಬುದನ್ನು ತೋರಿಸುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕು ಪ್ರತಿಯೊಬ್ಬ ಪ್ರಜೆಗೂ ಇದೆ. ಪ್ರತಿಯೊಂದು ವರ್ಗದ ಜನರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವ ಮತ್ತು ಅವರ ಜೀವನೋಪಾಯವನ್ನು ರಕ್ಷಿಸುವ ನಿರ್ದಿಷ್ಟ ಬೇಡಿಕೆಗಳನ್ನು ಪರಿಹರಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ರೈತರ ಜ್ವಲಂತ  ಸಮಸ್ಯೆಗಳನ್ನು ಬಗೆಹರಿಸಬೇಕಾದ ಸರ್ಕಾರ ಹೋರಾಟ ನಿರತ ರೈತರನ್ನ ದೇಶದ ಶತ್ರುಗಳಂತೆ ಬಿಂಬಿಸುತ್ತಿರುವುದು ಸರಿಯಲ್ಲ ಎಂದು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯತರ) ಸಂಘಟನೆಯ ದಕ್ಷಿಣ ಭಾರತ ಸಂಚಾಲಕ ಕುರುಬೂರ್ ಶಾಂತಕುಮಾರ್  ಎಚ್ಚರಿಸಿದ್ದಾರೆ.

Key words: Farmer –Protest-PM Modi- solve – problem -immediately- Kuruburu Shanthakumar