ಸಾಲಗಾರರ ಕಾಟಕ್ಕೆ ಹೆದರಿ ಇಡೀ ಕುಟುಂಬವೇ ನಾಪತ್ತೆ.

ಮೈಸೂರು,ಜನವರಿ,29,2024(www.justkannada.in):  ಸಾಲಗಾರರ ಕಾಟಕ್ಕೆ ಹೆದರಿ ಇಡೀ ಕುಟುಂಬವೇ ನಾಪತ್ತೆಯಾಗಿರುವ ಘಟನೆ ಮೈಸೂರಿನ ಕೆ.ಜಿ.ಕೊಪ್ಪಲು ಬಡಾವಣೆಯಲ್ಲಿ ನಡೆದಿದೆ.

ಕೆ.ಜಿ.ಕೊಪ್ಪಲಿನ ಮಹೇಶ್ (35) ಮಹೇಶ್ ಪತ್ನಿ ಭವಾನಿ( 28) ಪುತ್ರಿ ಪ್ರೇಕ್ಷಾ (3) ತಂದೆ ಮಹದೇವಪ್ಪ (65) ತಾಯಿ ಸುಮಿತ್ರ (55) ನಾಪತ್ತೆಯಾದವರು. ಈ ಕುಟುಂಬ ಕಳೆದ 8 ದಿನದಿಂದ ಸಂಪರ್ಕಕ್ಕೆ‌ ಸಿಕ್ಕಿಲ್ಲ ಎನ್ನಲಾಗಿದೆ. ಅಲ್ಲದೆ  ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸ್ನೇಹಿತರೊಬ್ಬರ ಮೊಬೈಲ್ ಗೆ ವಾಯ್ಸ್ ಮೆಸೇಜ್ ಕಳುಹಿಸಿ ಕುಟುಂಬ ನಾಪತ್ತೆಯಾಗಿದೆ.

ಈ ಸಂಬಂಧ ಭವಾನಿ ಸಹೋದರ ಜಗದೀಶ್ ಸರಸ್ವತಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಹೇಶ್ ಮಾರ್ಕೆಟಿಂಗ್ ಬಿಸಿನೆಸ್ ನಡೆಸುತ್ತಿದ್ದರು.  ಈ ಮಧ್ಯೆ ವೀರೇಶ್ ಎಂಬುವರು ವ್ಯವಹಾರಕ್ಕೆ ಸಾಥ್ ನೀಡಿದ್ದರು. ಆದರೆ ಮಹೇಶ್ ಪರಿಚಯ ಎಂದು ಹೇಳಿಕೊಂಡು ವೀರೇಶ್ 30 ರಿಂದ 35 ಲಕ್ಷ ಸಾಲ ಪಡೆದು ಪರಾರಿಯಾಗಿದ್ದು, ವೀರೇಶ್ ಗೆ ಸಾಲ ನೀಡಿದವರು ಮಹೇಶ್ ಮೇಲೆ ಒತ್ತಡ  ಹಾಕಿದ್ದಾರೆ.

ಸಾಲಗಾರರ ನಿರಂತರ ಒತ್ತಡಕ್ಕೆ ಹೆದರಿದ ಮಹೇಶ್ ಕುಟುಂಬ,  ಮಧ್ಯಸ್ಥಿಕೆ ವಹಿಸಿ ಸಾಲ ಕೊಡಿಸಿದ್ದೆ. ಸಾಲಗಾರರು ನನಗೆ ತೊಂದರೆ ಕೊಡುತ್ತಿದ್ದಾರೆ. ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ. ಸಾಲಗಾರರು ರಾಕ್ಷಸರಂತೆ ವರ್ತಿಸುತ್ತಿದ್ದಾರೆ. ನಾವು ಕೆರೆ ಅಥವಾ ಬಾವಿಗೆ ಬೀಳುತ್ತೇವೆ. ಒಂದು ವೇಳೆ ಮೃತದೇಹ ದೊರೆತರೇ ಅಂತ್ಯಕ್ರಿಯೆ ಮಾಡಿ. ಅವರನ್ನಂತೂ ಬಿಡಬೇಡಿ ಎಂದು ಮಸೇಜ್ ಸಂದೇಶ ಕಳುಹಿಸಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ರಂಜಿತಾ, ದಿನೇಶ್, ಚಂದ್ರು ಹಾಗೂ ನೇತ್ರ ಎಂಬುವವರ ಹೆಸರು ವಾಯ್ಸ್ ಮೆಸೇಜ್ ನಲ್ಲಿ ಉಲ್ಲೇಖವಾಗಿದೆ.  ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

Key words: entire- family –missing- due – fear – loan