ಬಿಜೆಪಿಯವರು ರಾಮ‌ನನ್ನು ಬೀದಿಗೆ ತಂದಿದ್ದಾರೆ- ಸಚಿವ ಮಧು ಬಂಗಾರಪ್ಪ ವಾಗ್ದಾಳಿ.

ಶಿವಮೊಗ್ಗ,ಜನವರಿ,29,2024(www.justkannada.in):  ಹನುಮ ಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ಪ್ರತಿಭಟನೆ ನಡೆಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಬಿಜೆಪಿಯವರು ರಾಮ‌ನನ್ನು ಬೀದಿಗೆ ತಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಮಧು ಬಂಗಾರಪ್ಪ,  ಹನುಮನ ಧ್ವಜ ವಿಚಾರದಲ್ಲಿ ಮನಸಿಗೆ ಬಂದಹಾಗೆ ತೀರ್ಮಾನ ಮಾಡುವುದು ಸರಿಯಲ್ಲ. ಬಿಜೆಪಿಯವರು ಇಂತವನ್ನೆಲ್ಲಾ ಹುಡುಕುತ್ತಾರೆ. ಬೇರೆ ಕಡೆ ಇರುವ ರಾಮ‌ನು ರಾಮನಲ್ಲವೇ? ಅಯೋಧ್ಯೆಗೆ ಹೋದವರೆಲ್ಲ ಪವಿತ್ರರು ಎಂದರ್ಥನಾ ಎಂದು ಕಿಡಿಕಾರಿದರು.

ಬಿಜೆಪಿ ಅವರಿಗೆ ಮಾಡಲು ಕೆಲಸವಿಲ್ಲ. ಅವರು ಪ್ರತಿಭಟನೆ ಮಾಡಿಕೊಳ್ಳಲಿ ಬಿಡಿ. ಪ್ರತಿಭಟನೆ ಮಾಡುವವರನ್ನು ನಿಲ್ಲಿಸಲು ಬರುವುದಿಲ್ಲ ಎಂದು ಮಧು ಬಂಗಾರಪ್ಪ ಹೇಳಿದರು.

ಜಾತಿ ಗಣತಿ ಸಮೀಕ್ಷೆ ಸ್ವೀಕರಿಸುತ್ತೇವೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವ ಮಧು ಬಂಗಾರಪ್ಪ,  ಸಿಎಂ ಹೇಳಿಕೆಗೆ ನಾವು ಬದ್ಧ. ಈ ಬಗ್ಗೆ ಪರ ವಿರೋಧ ಇರುವುದು ಚರ್ಚೆಯಾಗಬೇಕು. ಕಾಂಗ್ರೆಸ್ ಪಕ್ಷ ಒಂದು ಒಳ್ಳೆ ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.

ಬಿವೈ ರಾಘವೇಂದ್ರ ಗೆಲ್ಲಿಸಿ ಎನ್ನುವ ಶಾಮನೂರು  ಶಿವಶಂಕರಪ್ಪ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ, ಶಿವಮೊಗ್ಗ ರಾಜಕೀಯದಲ್ಲಿ ಈ ಹೇಳಿಕೆ ಪರಿಣಾಮ ಬೀರುವುದಿಲ್ಲ. ಆ ಹೇಳಿಕೆಯಿಂದ ನಮಗೆ ನಷ್ಟವಾಗುವುದಿಲ್ಲ ಎಂದು ತಿಳಿಸಿದರು.

Key words: BJP – protest- Minister- Madhu Bangarappa