ಅದ್ದೂರಿ ಜಂಬೂಸವಾರಿ ಮುಗಿದ ಬೆನ್ನಿಗೆ ಬಿಡುಗಡೆಯಾಯ್ತು ಪತ್ರಕರ್ತ ನಾಗರಾಜ್ ನವೀಮನೆ ಅವರ ‘ ಆನೆ ಕಥೆ’ ಪುಸ್ತಕ..

 

ಮೈಸೂರು, ಅ.17, 2019 :(www.justkannada.in news ) ಗುಂಡ್ಲುಪೇಟೆ ಬಳಿ ಹುಲಿ ಸೆರೆ ಕಾರ್ಯಾಚರಣೆ ಸಂಘಟಿತ ಪ್ರಯತ್ನದಿಂದ ಯಶಸ್ವಿಯಾಗಿದೆ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕರಾದ ಟಿ. ಬಾಲಚಂದ್ರ ತಿಳಿಸಿದರು.

ಬಂಡೀಪುರದಲ್ಲಿ ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಸಿಬ್ಬಂದಿ, ಅಧಿಕಾರಿಗಳಿಗೆ ಅಭಿನಂದನೆ ಹಾಗೂ ವಿಜಯ ಕರ್ನಾಟಕ ಪತ್ರಿಕೆಯ ಮೈಸೂರು ವರದಿಗಾರ ನಾಗರಾಜ್ ನವೀಮನೆ ಅವರ ‘ಆನೆ ಕಥೆ’ ಪುಸ್ತಕ ಬಿಡುಗಡೆಗೊಳಿಸಿ ಮಾತಾಡಿದರು.

‘‘ಯಾವುದೇ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಹುಲಿ ಸೆರೆ ಕಾರ್ಯಾಚರಣೆ ನಡೆಸಲಾಗಿದೆ. ವಾಚರ್ಸ್‌, ಶೂಟರ್ಸ್‌, ಫಾರೆಸ್ಟ್ ಆಫೀಸರ್ಸ್‌, ಆನೆ ವೈದ್ಯರು ಸೇರಿದಂತೆ ಸಾಕಷ್ಟು ಜನ ಇದಕ್ಕೆ ಕಾರಣಕರ್ತರು. ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುವೆ ಎಂದರು.

‘‘1 ತಿಂಗಳು 13 ದಿನಗಳ ಕಾಲ ಹುಲಿ ಸೆರೆ ಕಾರ್ಯಾಚರಣೆ ನಡೆಯಿತು. ಅ. 9ರಿಂದ ತೀವ್ರತರವಾದ ಕಾರ್ಯಾಚರಣೆ ನಡೆಸಲಾಯಿತು. ಇಬ್ಬರನ್ನು ಕೊಂದ ಶಂಕಿತ ಹುಲಿ ಸೆರೆ ಹಿಡಿಯಬೇಕೆಂಬ ಒತ್ತಡ ಎಲ್ಲೆಡೆಯಿಂದ ಕೇಳಿ ಬಂದಿತ್ತು. ಹುಲಿ ಸೆರೆ ಕಾರ್ಯಾಚರಣೆ ‘ ಹುಲ್ಲಿನ ಬಣವೆಯಲ್ಲಿ ಸೂಜಿ ಹುಡುಕಿದಂತೆ’ , ಅಷ್ಟು ಸುಲಭವಲ್ಲ. ಸಾಕಷ್ಟು ಸವಾಲುಗಳು ಇದ್ದವು. ಇದೆಲ್ಲವನ್ನೂ ಮೆಟ್ಟಿ ನಿಂತು ಜೀವಂತವಾಗಿ ಹುಲಿಯನ್ನು ಸೆರೆ ಹಿಡಿಯಲಾಗಿದೆ ಎಂದರು.

ಪುಸ್ತಕ ಕುರಿತು :

‘ಆನೆ ಕಥೆ’ ಪುಸ್ತಕ ಹಲವು ಸ್ವಾರಸ್ಯಕರ ಮಾಹಿತಿಯನ್ನು ಒಳಗೊಂಡಿದೆ. ಮಾವುತರು, ಆನೆಗಳ ಸಾಹಸ, ಅರಮನೆ ಮತ್ತು ಸಾಕಾನೆಗಳ ನಂಟನ್ನು ಚೆನ್ನಾಗಿ ನಿರೂಪಿಸಲಾಗಿದೆ. ಇದೊಂದು ಸಂಗ್ರಹ ಯೋಗ್ಯ ಪುಸ್ತಕ. ವನ್ಯಜೀವಿ ಲೋಕದ ಬಗ್ಗೆ ಮತ್ತಷ್ಟು ಪುಸ್ತಕ ಹೊರ ಬರುವ ಅಗತ್ಯತೆ ಇದೆ ಎಂದು ಆಶಿಸಿದರು.
ಇದೇ ವೇಳೆ ಬಿಳಿಗಿರಿರಂಗ ಹುಲಿ ಸಂರಕ್ಷಣಾ ಪ್ರದೇಶದ ಅರಣ್ಯ ಸಂರಕ್ಷಣಾಧಿಕಾರಿಯಾದ ಶಂಕರ್, ಮೈಸೂರು ಪ್ರಾದೇಶಿಕ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್, ಆನೆ ವೈದ್ಯರಾದ ನಾಗರಾಜು, ಪತ್ರಕರ್ತ ನಾಗರಾಜ್ ನವೀಮನೆ ಸೇರಿದಂತೆ ಇತರರು ಇದ್ದರು.

key words : elephant-story-anne-kathe-book-written-by-journalist-nagaraj-navemane-bandipura-mysore