ಚುನಾವಣಾ ಬಾಂಡ್: ಎಸ್ ಬಿಐಗೆ ಸುಪ್ರೀಂ ಕೋರ್ಟ್ ತರಾಟೆ.

ನವದೆಹಲಿ,ಮಾರ್ಚ್,18,2024(www.justkannada.in): ಚುನಾವಣಾ ಬಾಂಡ್‌ ಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ನೀಡದ ಹಿನ್ನೆಲೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ ಸುಪ್ರೀಂಕೋರ್ಟ್ ತರಾಟೆ ತೆಗೆದುಕೊಂಡಿದೆ.

ಈ ಸಂಬಂಧ ಇಂದು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ , ಚುನಾವಣಾ ಬಾಂಡ್‌ ಗಳ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಬೇಕು. ಮಾರ್ಚ್​ 21ರ ಸಂಜೆ 5 ಗಂಟೆಯೊಳಗೆ ಅಫಿಡವಿಟ್ ಸಲ್ಲಿಸುವಂತೆ  ಎಸ್ ಬಿಐಗೆ ಸುಪ್ರೀಂಕೋರ್ಟ್‌ ಸೂಚನೆ ನೀಡಿದೆ.

ಚುನಾವಣಾ ಬಾಂಡ್ ಗಳಿಗೆ ಸಂಬಂಧಿಸಿದಂತೆ ಆಯ್ದ ಮಾಹಿತಿಯನ್ನು ಮಾತ್ರ ಏಕೆ ಸಾರ್ವಜನಿಕ ಗೊಳಿಸಲಾಗುತ್ತಿದೆ.  ಎಲ್ಲಾ ಮಾಹಿತಿಗಳನ್ನು ಏಕೆ ಬಹಿರಂಗಪಡಿಸಲಾಗುತ್ತಿಲ್ಲ ಎಂದು ಎಸ್​ಬಿಐಗೆ ಸುಪ್ರೀಂಕೋರ್ಟ್​ ಪ್ರಶ್ನಿಸಿತು. ರಾಷ್ಟ್ರೀಯ ಪಕ್ಷಗಳೊಂದಿಗೆ ದಾನಿಗಳ ವಿವರಗಳನ್ನು ಲಿಂಕ್ ಮಾಡಲು ಸಹಾಯ ಮಾಡುವ ಆಲ್ಫಾನ್ಯೂಮರಿಕ್ ಸೀರಿಯಲ್ ಕೋಡ್ ಸೇರಿದಂತೆ ಚುನಾವಣಾ ಬಾಂಡ್​ಗಳಿಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಬಹಿರಂಗಪಡಿಸುವಂತೆ ಸುಪ್ರೀಂಕೋರ್ಟ್​  ಆದೇಶಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್​ ನೇತೃತ್ವದ ಪಂಚ ಪೀಠವು ಫೆಬ್ರವರಿ ತೀರ್ಪಿನಲ್ಲಿ ಬಾಂಡ್​ಗಳ ಎಲ್ಲಾ ವಿವರಗಳನ್ನು ಬಹಿರಂಗಪಡಿಸಲು ಬ್ಯಾಂಕ್​ ಗೆ ಕೇಳಿತ್ತು. ತನ್ನ ಆದೇಶದಲ್ಲಿ ಎಸ್​ಬಿಐ ಅಧ್ಯಕ್ಷ ದಿನೇಶ್​ ಖಾರಾ ಅವರಿಗೆ ಮಾರ್ಚ್​ 21ರ ಸಂಜೆ 5 ಗಂಟೆಯೊಳಗೆ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿದ್ದು, ಬ್ಯಾಂಕ್​ ತನ್ನ ಸ್ವಾಧೀನದಲ್ಲಿರುವ ಚುನಾವಣಾ ಬಾಂಡ್ ​ಗಳ ಎಲ್ಲಾ ವಿವರಗಳನ್ನು ಬಹಿರಂಗಪಡಿಸಬೇಕು ಮತ್ತು ಯಾವುದೇ ವಿವರಗಳನ್ನು ತಡೆಹಿಡಿಯುವಂತಿಲ್ಲ ಎಂದು ಕೋರ್ಟ್​ ಸೂಚಿಸಿದೆ.

Key words: Election bond- Supreme Court – SBI