Sunday, August 9, 2026

BDA Apartments

Home Front Page ನ್ಯಾಯಾಲಯದ ಮೇಲೆ ಪ್ರಭಾವ ಬೀರುವ ದುರುದ್ದೇಶದಿಂದ ಲೋಕಾಯುಕ್ತಕ್ಕೆ ED ಪತ್ರ- ಸಿಎಂ ಸಿದ್ದರಾಮಯ್ಯ

ನ್ಯಾಯಾಲಯದ ಮೇಲೆ ಪ್ರಭಾವ ಬೀರುವ ದುರುದ್ದೇಶದಿಂದ ಲೋಕಾಯುಕ್ತಕ್ಕೆ ED ಪತ್ರ- ಸಿಎಂ ಸಿದ್ದರಾಮಯ್ಯ

ಮಂಡ್ಯ, ಡಿಸೆಂಬರ್,4,2024 (www.justkannada.in):  ಹೈಕೋರ್ಟ್ ನಲ್ಲಿ ನಮ್ಮ‌ ಅರ್ಜಿ ವಿಚಾರಣೆಗೆ ಬರುವ ಹಿಂದಿನ‌ ದಿನ ಇಡಿಯವರು ಲೋಕಾಯುಕ್ತಕ್ಕೆ ಪತ್ರ ಬರೆದಿದ್ದೇ ನ್ಯಾಯಾಲಯದ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರ  ಜೊತೆ ಸಿಎಂ ಸಿದ್ದರಾಮಯ್ಯ ಮಾತನಾಡಿದರು. ಇಡಿಯವರು ತಮ್ಮ ತನಿಖೆಯ ವಿವರವನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿರುವುದರ ಬಗ್ಗೆ ಮತ್ತು ಲೋಕಾಯುಕ್ತಕ್ಕೆ ಪತ್ರ ಬರೆದಿರುವುದರ ಹಿಂದಿನ ಉದ್ದೇಶದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಇಡಿಯವರು ತನಿಖೆ ನಡೆಸುತ್ತಿದ್ದಾರೆ. ಇವರು ತನಿಖೆ ನಡೆಸುತ್ತಿರುವುದೇ ಸರಿಯಲ್ಲ. ಆಗಲಿ, ತನಿಖೆ ನಡೆಸಿದ ಮೇಲೆ ತನಿಖಾ ವರದಿಯನ್ನು ಲೋಕಾಯುಕ್ತಕ್ಕೆ ನೀಡಬಹುದಿತ್ತು. ಅದನ್ನು ಬಿಟ್ಟು , ಲೋಕಾಯುಕ್ತಕ್ಕೆ ಪತ್ರ ಬರೆಯುವುದು ಮತ್ತು ಮಾಧ್ಯಮಗಳಿಗೆ ಸೋರಿಕೆ ಮಾಡುವುದರ ಹಿಂದೆ ರಾಜಕೀಯ ದುರುದ್ದೇಶ ಇದೆ ಎಂದರು.

ಈ ವಿಚಾರಕ್ಕೆ ಸಂಬಂಧಪಟ್ಟಂತೆ ನಾಳೆ ನಮ್ಮ ಅರ್ಜಿ ಹೈಕೋರ್ಟ್ ನಲ್ಲಿ ವಿಚಾರಣೆ ಬರುತ್ತಿದೆ. ಇದಕ್ಕೆ ಒಂದು ದಿನ ಮೊದಲು ಮಾಧ್ಯಮಗಳಲ್ಲಿ ಪ್ರಚಾರ ಮಾಡಿರುವುದರ ಹಿಂದೆ ನ್ಯಾಯಾಲಯದ ಮೇಲೆ ಪ್ರಭಾವ ಬೀರುವ ಮತ್ತು ನ್ಯಾಯಾಲಯವನ್ನು ಪೂರ್ವಾಗ್ರಹದ ನಿಲುವಿಗೆ ತರುವ ದುರುದ್ದೇಶದ ರಾಜಕೀಯ ನಡೆಯಾಗಿದೆ ಎಂದು ತಿಳಿಸಿದರು.

ಡಿಸೆಂಬರ್ 24 ರ ಒಳಗೆ ತನಿಖೆಯ ವರದಿ ನೀಡುವಂತೆ ನ್ಯಾಯಾಲಯ ಲೋಕಾಯುಕ್ತಕ್ಕೆ ಸೂಚನೆ ನೀಡಿದೆ. ಬೇಕಿದ್ದರೆ ಇಡಿಯವರು ಲೋಕಾಯುಕ್ತಕ್ಕೆ ವರದಿ ನೀಡಲು ಅವಕಾಶವಿತ್ತು. ಅದನ್ನು ಬಿಟ್ಟು ಈ ರೀತಿ ಮಾಡಿರುವುದರ ಹಿಂದಿನ ಉದ್ದೇಶ ರಾಜ್ಯದ ಜನರಿಗೆ ಅರ್ಥವಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದರು.

ಮಂತ್ರಿಮಂಡಲ ಪುನಾರಚನೆ ಮಾಡ್ತೀವಿ ಅಂತಾ ನಾನು ಹೇಳಿದ್ನಾ?

ಮಂತ್ರಿ ಮಂಡಲ ಪುನಾರಚನೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಮಂತ್ರಿಮಂಡಲ ಪುನಾರಚನೆ ಮಾಡ್ತೀವಿ ಅಂತ ನಾನು ಹೇಳಿದ್ನಾ? ನೀವೇ ನಿಮ್ಮ ಪಾಡಿಗೆ ನೀವು ಕಲ್ಪಿಸಿಕೊಂಡು ಸುದ್ದಿ ಮಾಡಿದ್ರಿ. ಈಗ ನನ್ನ ಬಳಿ ಉತ್ತರ ಕೇಳಿದರೆ ಹೇಗೆ ? ಈ ಬಗ್ಗೆ ಹೈ ಕಮಾಂಡ್ ಕೂಡ ಸೂಚನೆ ಕೊಟ್ಟಿಲ್ಲ ಎಂದರು.

ನಾಳೆ ಹಾಸನದಲ್ಲಿ ನಡೆಯುತ್ತಿರುವ ಸಮಾವೇಶದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿ ಕಾಂಗ್ರೆಸ್ ಪಕ್ಷದಿಂದ ಸಮಾವೇಶ ನಡೆಯುತ್ತಿದೆ ಎಂದರು.

ಸಚಿವರಾದ ಕೆ.ಎನ್.ರಾಜಣ್ಣ, ಚಲುವರಾಯಸ್ವಾಮಿ ಮತ್ತು ಶಾಸಕರುಗಳು ಉಪಸ್ಥಿತರಿದ್ದರು.

Key words: ED, letter, Lokayukta, CM Siddaramaiah