ಅಂಬೇಡ್ಕರ್ ಬಯಸಿದ ಪ್ರಬುದ್ಧ ಭಾರತ ನಿರ್ಮಾಣ ಆಗಿದೆಯೇ ಎಂಬುದರ ಬಗ್ಗೆ ಚರ್ಚೆ ಆಗಬೇಕು- ಮೈವಿವಿ‌ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್.

ಮೈಸೂರು,ಸೆಪ್ಟಂಬರ್,24,2021(www.justkannada.in):  ಸ್ವಾತಂತ್ರ್ಯ ನಂತರದ ಚುನಾವಣೆಗಳಲ್ಲಿ ಬಾಬಾ ಸಾಹೇಬರು ಬಯಸಿದ ದಲಿತ ರಾಜಕಾರಣ, ದಲಿತ ನಾಯಕತ್ವ, ಎಲ್ಲರನ್ನು ಒಳಗೊಂಡ ಪ್ರಬುದ್ಧ ಭಾರತದ ನಿರ್ಮಾಣ ಸಾಧ್ಯವಾಗಿದೆಯೇ? ಎಂಬ ಕಡೆ ಆರೋಗ್ಯಪೂರ್ಣ ಚರ್ಚೆಗಳು, ಸಂವಾದಗಳು, ಸಂಶೋಧನೆಗಳು ಹೆಚ್ಚು-ಹೆಚ್ಚು ನಡೆಯಬೇಕಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯ,‌ ಡಾ.ಬಿ.ಆರ್ ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರದ ಸಹಯೋಗದಲ್ಲಿ ಮಾನಸಗಂಗೋತ್ರಿಯ ವಿಶ್ವ ಜ್ಞಾನಿ ಸಭಾಂಗಣದಲ್ಲಿ ನಡೆದ ಪೂನಾ ಒಪ್ಪಂದ ಮತ್ತು ಆನಂತರದ ಪರಿಣಾಮಗಳು ಒಂದು ಸಂವಾದ ಕಾರ್ಯಕ್ರಮದಲ್ಲಿ ಅವರು ಹೇಳಿದಿಷ್ಟು…

ಪೂನಾ ಒಪ್ಪಂದವು ಗಾಂಧಿ ಮತ್ತು ಅಂಬೇಡ್ಕರ್ ನಡುವಿನ ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಒಂದು ಚಾರಿತ್ರಿಕ ಘಟ್ಟವಾಗಿದೆ. ಗಾಂಧೀಜಿ ಅವರಿಗೆ ಭಾರತವನ್ನು ಬ್ರಿಟೀಷರಿಂದ ಮುಕ್ತಿಗೊಳಿಸುವುದು ಆದ್ಯತೆಯಾದರೆ, ಅಂಬೇಡ್ಕರ್‌ರವರಿಗೆ ಭಾರತೀಯರನ್ನು ಸಾಮಾಜಿಕ ಸಂಕೋಲೆಯಿಂದ ಮುಕ್ತಿಗೊಳಿಸುವುದು ಆದ್ಯತೆಯಾಗಿತ್ತು ಎಂದರು.

ಕರ್ನಾಟಕ ರಾಜ್ಯ ರಾಜಕೀಯ ಮೀಸಲಾತಿ ವಿಚಾರದಲ್ಲಿ ಅದರಲ್ಲೂ ಸ್ಥಳೀಯ ಸರ್ಕಾರ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತರುವ ಮೂಲಕ ಸಾಮಾಜಿಕ ನ್ಯಾಯದ ನಡೆಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಹೇಳಬಹುದು.

ಮಹಿಳೆಯರ ರಾಜಕೀಯ ಮೀಸಲಾತಿಯ ಮಸೂದೆಯು ಸಂಸತ್ತಿನಲ್ಲಿಯೇ ಉಳಿದಿದೆ. ರಾಜಕೀಯ ಮೀಸಲಾತಿಗೆ ಅರ್ಥ ಬರಬೇಕಾದರೆ ಭಾರತೀಯರು ವೈಜ್ಞಾನಿಕ ಮನೋಭಾವನೆಯನ್ನು ಬುದ್ಧಪ್ರಜ್ಞೆಯ, ಬೆಳಕಿನಲ್ಲಿ ಸ್ಥಾಪಿಸಿಕೊಂಡಾಗ ಮಾತ್ರವೇ ರಾಜಕೀಯ ಮೀಸಲಾತಿಗೆ ಅರ್ಥ ಬರುತ್ತದೆ ಎಂದರು.

ಗಾಂಧಿಯನ್ನು ಉಳಿಸಿಕೊಳ್ಳಲು ಬಾಬಾಸಾಬರು ಬಹುದೊಡ್ಡ ತ್ಯಾಗವನ್ನು ಮಾಡಿದ್ದಾರೆ. ಬಾಬಾಸಾಹೇಬರ ನೆಲೆಯಲ್ಲಿ ಹೇಳುವುದಾದರೆ,‌ ಕೋಮುವಾರು, ತೀರ್ಪಿನಿಂದ  ನೈಜ ಪ್ರಾತಿನಿಧ್ಯತ್ವ ಸಾಧ್ಯವಾಗುತ್ತದೆಂದು ಹಾಗೂ ಎರಡು ಮತಗಳಿರುವುದರಿಂದ ಸಾಮಾನ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಹಕ್ಕು ಪ್ರತ್ಯೇಕ ಸಮುದಾಯಕ್ಕೂ ಕೊಟ್ಟಿರುವುದನ್ನು ಬಾಬಾ ಸಾಹೇಬರು ಬೆಲೆಕಟ್ಟಲಾಗದ ಆಸ್ತಿ ಎಂದೇ ಸ್ವಾಗತಿಸಿದರು, ಆದರೆ ಗಾಂಧಿಯವರ ವಿರೋಧದಿಂದಾಗಿ ಪ್ರತ್ಯೇಕ ಮತದಾನವನ್ನು ಕಳೆದುಕೊಳ್ಳಬೇಕಾಯಿತು ಎಂದು ಹೇಳಿದರು.

ಗದಗದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತಿ ರಾಜ್ ವಿಶ್ವವಿದ್ಯಾನಿಲಯ ಗೌರವ ಪ್ರಾಧ್ಯಾಪಕರಾದ ಪ್ರೊ.ಡಿ.ಜೀವನ್‌ಕುಮಾರ್ ಆನ್ಲೈನ್ ನಲ್ಲಿ ಭಾಗವಹಿಸಿ ದಿಕ್ಸೂಚಿ ಭಾಷಣ ಮಾಡಿದರು. ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಎಂ. ಶಿವಣ್ಣ, ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ, ಡಾ.ಬಿ.ಆರ್.ಅಂಬೇಡ್ಕರ್ ಪೀಠದ ಸಂದರ್ಶಕ ಪ್ರಾಧ್ಯಾಪಕರಾದ ಬಸವರಾಜ ದೇವನೂರ, ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರದ ನಿರ್ದೇಶಕ ಪ್ರೊ.ಜೆ.ಸೋಮಶೇಖರ್ ಇದ್ದರು.

Key words: Dr.BR Ambedkar – build – mature- India-discussion-Prof.G.Hemanth Kumar