10 ಲಕ್ಷ ರೂ. ಸವಾಲ್ : ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸಿದರೆ ದರಿದ್ರ ಗ್ಯಾರಂಟಿ..!

 

ಮೈಸೂರು. ಮೇ.6, 2019 (www.justkannada.in news): ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸಿದರೆ ದರಿದ್ರ ಗ್ಯಾರಂಟಿ ಎಂದು ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಎಚ್ಚರಿಸಿದ್ದಾರೆ.

ಅಕ್ಷಯ ತೃತೀಯದಂದು ಚಿನ್ನ ಖರೀದಿಸಿದರೆ ಸಂಪತ್ತು ಅಕ್ಷಯವಾಗುವುದು ಎಂದು ಮುಗ್ಧ ಗ್ರಾಹಕರನ್ನು ಚಿನ್ನದ ವ್ಯಾಪಾರಸ್ಥರು ನಂಬಿಸಿ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂ.ಕೆ.ಸೋಮಶೇಖರ್ ಹೇಳಿದಿಷ್ಟು..

ಯಾವುದೇ ಪುರಾಣ, ಮಹಾಕಾವ್ಯಗಳಲ್ಲಿ ಉಲ್ಲೇಖವಾಗದ ಇಂತಹ ಮೌಡ್ಯವನ್ನು ಜನರಲ್ಲಿ ಬಿತ್ತುತ್ತಿರುವುದು ಅಕ್ಷಮ್ಯ. ಕಳೆದ ಹತ್ತು ಹದಿನೈದು ವರ್ಷಗಳಿಂದಲೂ ಇದೊಂದು ವ್ಯಾಪಾರ ತಂತ್ರವಾಗಿ ಬಳಸಲಾಗುತ್ತಿದ್ದು . ಈ ದಿನ ಖರೀದಿಸಿದ ಚಿನ್ನವೂ ಎಲ್ಲಿಯಾದರು ಅಕ್ಷಯವಾಗಿದ್ದರೆ ಅವರಿಗೆ ನಾನು 10 ಲಕ್ಷ ರೂ.ಗಳನ್ನು ನೀಡುವೆ ಎಂದು ಸವಾಲೆಸೆದರು.

ಶೇ. 80ರಷ್ಟು ಕೆಳ ಮಧ್ಯಮ, ಮಧ್ಯಮ ವರ್ಗದವರು ಸಂಬಳದಿಂದ ಜೀವನ ಸಾಗಿಸುತ್ತಿದ್ದು. ಅಂತಹವರು ನಾಳೆ ಚಿನ್ನ ಖರೀದಿಸಲೇಬೇಕೆಂದು ಸಾಲ ಮಾಡುವರು. ಇದರಿಂದ ಬಡ್ಡಿ ಹೆಚ್ಚಾಗಿ ದರಿದ್ರ ಕಾಡುವುದೇ ಹೊರತು ಒಳಿತಾಗುವುದಿಲ್ಲ ಎಂದು ತಿಳಿಸಿದರು.

ಹನ್ನೆರಡನೇ ಶತಮಾನದ ಕಾಯಕಯೋಗಿ ಬಸವೇಶ್ವರ ಜಯಂತಿಯಂದು ಈ ಗೊಡ್ಡು ಅಚರಣೆ ಮಾಡುತ್ತಿರುವುದು ತರವಲ್ಲ. ಆದ್ದರಿಂದ ಪ್ರತಿಯೊಬ್ಬರು ವೈಜ್ಞಾನಿಕ ಹಾಗೂ ವೈಚಾರಿಕ ಚಿಂತನೆ ಮಾಡುವ ಅಗತ್ಯವಿದೆ. ಯಾವುದೇ ಆಮಿಷಕ್ಕೊಳಗಾಗಿ ಚಿನ್ನ ಖರೀದಿಸಬೇಡಿ. ವಿದ್ಯಾವಂತರೇ‌ ಇಂತಹ ಮೌಡ್ಯಾಚರಣೆಗೆ ಮುಂದಾಗಿರುವುದು ದೇಶದ ದೌರ್ಭಾಗ್ಯವೆಂದರು.

ಪಾಲಿಕೆ ಸದಸ್ಯ ಲೋಕೇಶ್ ವಿ ಪಿಯಾ, ಮಾಜಿ ಸದಸ್ಯ ಸುನಿಲ್, ಮುಖಂಡರಾದ ಡೈರಿ ವೆಂಕಟೇಶ್ ಇತರರು ಗೋಷ್ಠಿಯಲ್ಲಿ ಇದ್ದರು.

dont purchace gold on Akshaya Tritiya