ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಇತಿಶ್ರೀ ಹಾಡಲು ಡಿಸಿಎಂ ಡಿ.ಕೆ ಶಿವಕುಮಾರ್ ಸಂಕಲ್ಪ

ಬೆಂಗಳೂರು.ಜೂನ್,13,2023(www.justkannada.in): ಬೆಂಗಳೂರಿನ ಘನತೆಗೆ ಕಪ್ಪುಚುಕ್ಕೆಯಾಗಿರುವ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಂಕಲ್ಪ ಮಾಡಿರುವ ಡಿಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಇಂದು ನಗರದ ಪ್ರಮುಖ ಸಂಚಾರಿ ದಟ್ಟಣೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಿಡಿಎ ಕೇಂದ್ರ ಕಚೇರಿಯಲ್ಲಿ ಮಂಗಳವಾರ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಬಿಡಿಎ ಅಧ್ಯಕ್ಷ ರಾಕೇಶ್ ಸಿಂಗ್, ಕಮಿಷನರ್ ಕುಮಾರ್ ನಾಯಕ್, ಡಿಸಿಎಂ  ಆಪ್ತ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ಹಾಗೂ ಮತ್ತಿತರ ಅಧಿಕಾರಿಗಳ ಜೊತೆ ಸಭೆ ನಡೆಸಿದರು.

ನಂತರ ಬೆಂಗಳೂರು ಪ್ರದಕ್ಷಣೆ ಹಾಕಿದ ಶಿವಕುಮಾರ್ ಅವರು ಮೊದಲು ಹೆಬ್ಬಾಳ ಜಂಕ್ಷನ್ ಗೆ ಭೇಟಿ ನೀಡಿ ಮೇಲ್ಸೇತುವೆ ನಿರ್ಮಾಣ, ಸುತ್ತಮುತ್ತಲ ಪ್ರದೇಶದ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಈ ಭಾಗದಲ್ಲಿ ಸಂಚಾರ ದಟ್ಟಣೆ ನಿಯಂತ್ರಣ, ರಸ್ತೆ, ಮೇಲ್ಸೇತುವೆ ಅಗಲೀಕರಣ ಹಾಗೂ ಹೆಬ್ಬಾಳ ಕೆರೆಯ ಸೌಂದರ್ಯಕ್ಕೆ ಕೈಗೊಳ್ಳುವ ಕ್ರಮಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಅಲ್ಲದೆ 2047ರ ವೇಳೆಗೆ ಹೆಚ್ಚಾಗುವ ವಾಹನ ದಟ್ಟಣೆಗೆ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂದು ವಿವರಣೆ ನೀಡಿದರು.

63 ಕಿ.ಮೀ. ಅವಳಿ ಸುರಂಗ ಮಾರ್ಗ ನಿರ್ಮಾಣದ ಬಗ್ಗೆ ಸಲಹೆ ನೀಡಿದರು. ಈ ವಿಚಾರವಾಗಿ ಪ್ರತ್ಯೇಕ ಸಭೆ ಮಾಡೋಣ ಎಂದು ತಿಳಿಸಿದರು.

ಹೆಬ್ಬಾಳದಲ್ಲಿ ಮೆಟ್ರೋ ಸ್ಟೇಷನ್, ಮೆಟ್ರೋ ಲೈನ್ಸ್ ನಿರ್ಮಾಣದ‌ ಬಗ್ಗೆ ನುರಿತ ಇಂಜಿನಿಯರ್ ಗಳಿಂದ ಸ್ಥಳದಲ್ಲಿ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಮಹಿಳಾ ಪೌರ ಕಾರ್ಮಿಕರು ನಮಗೆ ಸ್ಥಳೀಯ ಆಧಾರ್ ಹಾಗೂ ಮತದಾರರ ಗುರುತಿನ ಚೀಟಿ ಇಲ್ಲ, ಹೀಗಾಗಿ ಪೌರ ಕಾರ್ಮಿಕ ಗುರುತಿನ ಚೀಟಿಗೆ ಉಚಿತ ಟಿಕೆಟ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಿ ಎಂದು ಮನವಿ ಮಾಡಿದರು.

ನಂತರ ಹೊರ ವರ್ತುಲ ರಸ್ತೆ, ನಾಗವಾರ ಮೇಲ್ಸೇತುವೆ, ಟೆಲಿಕಾಂ ಲೇಔಟ್ ಗೆ ಭೇಟಿ ಮಾಡಿ ಅಲ್ಲಿ ನಡೆಯುತ್ತಿರುವ ಕೊಳಚೆ ನೀರು ಕಾಲುವೆ ಕಾಮಗಾರಿ ಪರಿಶೀಲನೆ ನಡೆಸಿದರು.

ಮಳೆ ಬಂದಾಗಲೆಲ್ಲಾ ಜಲಾವೃತವಾಗ್ತಿದ್ದ ಹಿನ್ನೆಲೆಯಲ್ಲಿ ಬಿಬಿಎಂಪಿ ರಾಜಕಾಲುವೆ, ತಡೆಗೋಡೆ ಕಾಮಗಾರಿ ಕೈಗೆತ್ತಿಕೊಂಡಿದ್ದು, ಅದರ ಪರಿಶೀಲನೆ ನಡೆಸಲಾಯಿತು.

ನಂತರ ಹೊರ ವರ್ತುಲ ರಸ್ತೆ, ಕಲ್ಯಾಣ ನಗರ, ಹೆಚ್ ಆರ್ ಬಿಆರ್ ಲೇಔಟ್ ಗೆ ಭೇಟಿ ನೀಡಿ ಕೊಳಚೆ ನೀರು ಕಾಲುವೆ ಕಾಮಗಾರಿ ಪರಿಶೀಲನೆ ನಡೆಸಿದರು. ನಂತರ ಕೆ.ಆರ್ ಪುರಂಗೆ ಭೇಟಿ ನೀಡಿ ಬಿಎಂ ಆರ್ ಸಿ ಎಲ್ ನಡೆಸುತ್ತಿರುವ ಮೆಟ್ರೋ ಕಾಮಗಾರಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಕೆ.ಆರ್ ಪುರಂ ಶಾಸಕ ಭೈರತಿ ಬಸವರಾಜು ಅವರು ಟಿನ್ ಫ್ಯಾಕ್ಟರಿ ಬಳಿ ಡಿಸಿಎಂಗೆ ಹೂಗುಚ್ಛ ನೀಡಿ ಸ್ವಾಗತಿಸಿದರು.

ಬೆಂಗಳೂರು ರೌಂಡ್ಸ್ ಬಳಿಕ ಕೆ.ಆರ್ ಪುರಂನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಿಷ್ಟು….

“ನಾನು ಇಂದು ಬಿಡಿಎ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಅವರಿಂದ ಮಾಹಿತಿ ಪಡೆದೆ. ಪಿ ಡಬ್ಲ್ಯೂ ಡಿ, ರಾಷ್ಟ್ರೀಯ ಹೆದ್ದಾರಿ, ಬಿಎಂ ಆರ್ ಸಿ ಎಲ್ ಸೇರಿದಂತೆ ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಒಂದು ಕಡೆಯಿಂದ ಪರಿಶೀಲನೆ ಮಾಡುತ್ತಿದ್ದೇನೆ.

ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಹೆಬ್ಬಾಳದಿಂದ ಪರಿಶೀಲನೆ ಆರಂಭಿಸಿದ್ದೇವೆ.

ಇಂದು ಅಧಿಕಾರಿಗಳು ಕೆಲವು ಪ್ರಸ್ತಾವನೆ ಸಲ್ಲಿಸಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜೊತೆ ಚರ್ಚೆ ಮಾಡುತ್ತೇನೆ. ಇನ್ನು ಬಿಡಿಎ ಹಾಗೂ ಪಾಲಿಕೆ ಕಡೆಯಿಂದಲೂ ಕೆಲವು ಪ್ರಸ್ತಾವನೆಗಳು ಬಂದಿವೆ.

ಎಲ್ಲೂ ಜನರಿಂದ ಆಸ್ತಿ ವಶಪಡೆಯದೆ ಎಲ್ಲಿ ಎಷ್ಟು ಕೆಲಸ ಮಾಡಬಹುದು ಎಂದು ಪರಿಶೀಲನೆ ಮಾಡಲಾಗುತ್ತಿದೆ.

ಹೆಬ್ಬಾಳ ಹಾಗೂ ಕೆ.ಆರ್ ಪುರಂ ಪ್ರಮುಖ ಕೇಂದ್ರಗಳಾಗಿದ್ದು ಎಲ್ಲೆಲ್ಲಿ ಸುರಂಗ ಮಾರ್ಗ ಮಾಡಲು ಸಾಧ್ಯ? ಎಂದು ಹೇಳಿದ್ದೇವೆ. ಅಲ್ಪದೂರದ ಫ್ಲೈ ಓವರ್ ಜೊತೆಗೆ ಮುಂದಿನ 25 ವರ್ಷಗಳ ದೂರದೃಷ್ಟಿಯಿಂದ  ಬಹುದೂರದ ಫ್ಲೈಓವರ್ ಕುರಿತು ಚರ್ಚೆ ಮಾಡಲಾಗಿದೆ.

ಈ ವಿಚಾರವಾಗಿ ಎರಡು ಸಭೆ ನಡೆಸುತ್ತೇನೆ. ಬೆಂಗಳೂರಿನ ನಾಗರೀಕರ ಜೊತೆ ಒಂದು ಸಭೆ, ಬೆಂಗಳೂರಿನ ಬಗ್ಗೆ ಕಾಳಜಿ ಹಾಗು ದೂರದೃಷ್ಟಿ ಹೊಂದಿರುವವರ ತಜ್ಞರ ಜೊತೆ ಒಂದು ಸಭೆ ಮಾಡಿ ಸಮಾಲೋಚನೆ ನಡೆಸುತ್ತೇನೆ.  ಮುಂದಿನ ಹತ್ತು ಹದಿನೈದು ದಿನಗಳಲ್ಲಿ ತೀರ್ಮಾನ ಮಾಡುತ್ತೇವೆ.

ಇನ್ನು ಕಾಲುವೆಗಳ ಹೂಳು ಎತ್ತಿದ ನಂತರ ಆ ಹೂಳನ್ನು ಎಲ್ಲಿ ಹಾಕಲಾಗುತ್ತಿದೆ ಎಂಬುದರ ಬಗ್ಗೆ ಮಾಹಿತಿ ಕೇಳಿದ್ದೇನೇ. ಈ ಬಗ್ಗೆಯೂ ಪರಿಶೀಲನೆ ನಡೆಸುತ್ತೇವೆ.”

ಹೆಬ್ಬಾಳ ಮೇಲ್ಸೇತುವೆ ಅಗಲೀಕರಣಕ್ಕೆ ಅಡೆತಡೆ ಹಾಗೂ ಬಿಎಂ ಆರ್ ಸಿ ಎಲ್ ವಿರೋಧ ಇದೆಯೇ ಎಂಬ ಪ್ರಶ್ನೆಗೆ, “ಯಾರ ವಿರೋಧ ಇಲ್ಲ. ನಾನು ಎಲ್ಲಾ ಸಂಸ್ಥೆಗಳ ಅಧಿಕಾರಿಗಳ ಜತೆಗೆ ಪರಿಶೀಲನೆ ಮಾಡುತ್ತಿದ್ದೇವೆ. ಗುಣಮಟ್ಟದ ಕೆಲಸ ಆಗಬೇಕು ಅದೇ ನಮ್ಮ ಗುರಿ” ಎಂದು ತಿಳಿಸಿದರು.

ಹೆಬ್ಬಾಳ ಮೇಲ್ಸೇತುವೆ ಮರು ವಿನ್ಯಾಸಕ್ಕೆ ಬಿಡಿಎ ಮಾಜಿ ಅಧ್ಯಕ್ಷ ವಿಶ್ವನಾಥ್ ಅವರು ಪೂಜೆ ಮಾಡಿದ್ದು, ಅದೇ ವಿನ್ಯಾಸ ಮುಂದುವರಿಯುತ್ತದೆಯೇ ಎಂಬ ಪ್ರಶ್ನೆಗೆ, “ನಾವು ಅದರ ಬಗ್ಗೆ ಪರಿಶೀಲನೆ ಮಾಡುತ್ತೇವೆ. ತಾಂತ್ರಿಕವಾಗಿ, ಅನುಕೂಲಕರವಾಗಿ, ಉತ್ತಮವಾಗಿ ಇದ್ದರೆ ನಾವು ಅದನ್ನು ಮುಂದುವರಿಸುತ್ತೇವೆ. ನಾವು ಎಲ್ಲರ ಸಲಹೆ ಕೇಳುತ್ತೇವೆ” ಎಂದು ತಿಳಿಸಿದರು.

ಹೆಬ್ಬಾಳದಲ್ಲಿ ಕಾಮಗಾರಿ ಆರಂಭವಾದರೆ ಟ್ರಾಫಿಕ್ ಸಮಸ್ಯೆ ಹೆಚ್ಚಲಿದೆ ಅಲ್ಲವೇ ಎಂದು ಕೇಳಿದಾಗ, “ಮೆಟ್ರೋ ಕಾಮಗಾರಿ ಕೇವಲ ರಾತ್ರಿ ವೇಳೆ ಕೆಲಸ ಮಾಡಲಾಗುತ್ತಿದೆ. ಕಾಮಗಾರಿಗಳು ಬೇಗ ನಡೆಯುವಂತೆ ಅನುವು ಮಾಡಿಕೊಡಲು ಪೊಲೀಸ್ ಅಧಿಕಾರಿಗಳ ಜತೆಗೂ ಚರ್ಚೆ ಮಾಡಲಾಗುತ್ತಿದೆ. ಒಂದು ನಿಮಿಷವೂ ಫ್ಲೈಓವರ್ ಮೇಲೆ ವಾಹನ ಸಂಚಾರ ನಿಲ್ಲಿಸಲ್ಲ. ಹೆಬ್ಬಾಳ ಫ್ಲೈಓವರ್ ಮೇಲೆ, ಕೆಳಗೆ ಟ್ರಾಫಿಕ್ ಜಾಮ್ ಮಾಡದಂತೆ ಕಾಮಗಾರಿ ಮಾಡ್ತೇವೆ. ಮೆಟ್ರೋ ಕಾಮಗಾರಿ ಆರಂಭವಾದ್ರೂ ಟ್ರಾಫಿಕ್ ಜಾಮ್ ಆಗದಂತೆ ನೋಡಿಕೊಳ್ತೇವೆ” ಎಂದು ತಿಳಿಸಿದರು.

ಬಿಜೆಪಿ ಸರ್ಕಾರ ಯಾವುದೇ ಕರೆಂಟ್ ಬಿಲ್ ಹೆಚ್ಚಳ ಮಾಡಿಲ್ಲ ಎಂಬ ಮಾಜಿ ಸಿಎಂ ಬೊಮ್ಮಾಯಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಬೊಮ್ಮಾಯಿ ಅವರು ದುಃಖದಲ್ಲಿ ಮಾತನಾಡಿದ್ದಾರೆ.  ಅದಕ್ಕೆ ನಾನ್ಯಾಕೆ ಬೇಸರ ಮಾಡಿಕೊಳ್ಳಲಿ. ರೇಟು, ದಾಖಲೆಗಳು ಎಲ್ಲವೂ ನಮ್ಮ ಬಳಿ ಇದೆ. ನಾವು ಎಲ್ಲ ದಾಖಲೆಗಳನ್ನು ಕೊಡುತ್ತೇವೆ” ಎಂದು ತಿರುಗೇಟು ನೀಡಿದರು.

Key words: DCM -DK Shivakumar- determination –  Bangalore- traffic -problem