ಮೈಸೂರು,ಜುಲೈ,19,2025 (www.justkannada.in): ಈ ಹಸ್ತ ವಿರೋಧಿಗಳ ಬಾಯಿ ಮುಚ್ಚಿಸಿದೆ. ಗ್ಯಾರಂಟಿಗಳನ್ನ ಟೀಕಿಸುತ್ತಿದ್ದ ಬಿಜೆಪಿಯವರು ಇದೀಗ ನಮ್ಮ ಗ್ಯಾರಂಟಿಗಳನ್ನೇ ಕಾಪಿ ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ನುಡಿದರು.
ಇಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಕಾಂಗ್ರೆಸ್ ಸಾಧನಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಚುನಾವಣೆ ಬಂದಾಗ ಒಂದು ಮಾತು ಹೇಳಿದ್ದೆ ಕಮಲ ಕೇಸರಲ್ಲಿದ್ದರೆ ಚೆನ್ನ ತೆನೆ ಗದ್ದೆಯಲಿದ್ದಾರೆ ಚೆನ್ನ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದಾರೆ ಚೆನ್ನ ಅಂತ ಹೇಳಿದ್ದೆ. ನಾವು ಏನು ಹೇಳಿದ್ದವು ಅದೇ ಕೆಲಸ ಮಾಡಿದ್ದೇವೆ. ನಾವು ಮಾಡುವ ಕೆಲಸಗಳನ್ನು ನಿಮ್ಮ ಕಣ್ಣಲ್ಲಿ ನೋಡಿ ಆಶೀರ್ವಾದ ಮಾಡಿದ್ದೀರಾ. ನಾವು ನಿಮ್ಮ ಬಳಿ ಜೈಕಾರ ಹಾಕಿಸಿಕೊಳ್ಳಲು ಬಂದಿಲ್ಲ. ನಿಮ್ಮ ಋಣ ತೀರಿಸಲು ಬಂದಿದ್ದೇವೆ ಎಂದರು.
ಈ ಹಿಂದೆ ಚಾಮುಂಡೇಶ್ವರಿ ಬಳಿ ಹರಕೆ ಹೊತ್ತಿದ್ದವು. ಗ್ಯಾರಂಟಿ ಯೋಜನೆಗಳ ಬಗ್ಗೆ ಹರಕೆ ಹೊತ್ತು ತಾಯಿಗೆ ಕಾಣಿಕೆ ಹಾಕಿ ಬಂದಿದ್ದವು. ಅದೇ ರೀತಿ ನಡೆದುಕೊಳ್ಳುತ್ತಿದ್ದೇವೆ. ಈಗ ನಮ್ಮ ಗ್ಯಾರೆಂಟಿಗಳನ್ನು ಬಿಜೆಪಿ ಕಾಪಿ ಮಾಡಿದೆ. ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ. ವಿರೋಧ ಪಕ್ಷಗಳ ಟೀಕೆಗಳು ಸಾಯುತ್ತವೆ ಎಂದು ವಾಗ್ದಾಳಿ ನಡೆಸಿದರು.
ನಾವು ರಾಜ್ಯದ ಎಲ್ಲ ಜಿಲ್ಲೆಗಳಿಗೂ ಅನುದಾನ ಕೊಟ್ಟಿದ್ದೇವೆ. ಇಂಡಿ, ಚಾಮರಾಜನಗರ, ಬೀದರ್ ಎಲ್ಲಾ ಜಿಲ್ಲೆಗಳಿಗೂ ಅಭಿವೃದ್ಧಿಗೆ ಹಣ ನೀಡಿದ್ದೇವೆ. ಈ ಹಸ್ತ ವಿರೋಧಿಗಳ ಬಾಯಿ ಮುಚ್ಚಿಸಿದೆ. ಈ ಹಸ್ತ ರೈತರನ್ನು ಉಳಿಸಿದೆ. ಈ ಹಸ್ತ ಮಹಿಳೆಯರಿಗೆ ನೆರವು ನೀಡಿದೆ. ಪ್ರತಿ ಕುಟುಂಬಕ್ಕೆ 2 ಸಾವಿರ ಹಣ ಕೊಟ್ಟು ನಿಮ್ಮ ಬದುಕಿಗೆ ಶಕ್ತಿ ಕೊಟ್ಟಿದೆ. ನಾವು ಭಾವನೆಗಳ ಮೇಲೆ ಸರ್ಕಾರ ನಡೆಸಲ್ಲ. ಬದುಕಿನ ಮೇಲೆ ಸರ್ಕಾರ ನಡೆಸುತ್ತೇವೆ. ಎಲ್ಲರ ಅಭಿವೃದ್ದಿ ಈ ಹಸ್ತಕ್ಕೆ ಮುಖ್ಯ ಎಂದು ಡಿಕೆ ಶಿವಕುಮಾರ್ ಹೇಳಿದರು.
Key words: Mysore, congress, Sadana samavesha, DCM, DK Shivakumar