ಮೈಸೂರು, ಏಪ್ರಿಲ್,17,2026 (www.justkannada.in(www.justkannada.in): ರಸಗೊಬ್ಬರ ಮಾರಾಟಗಾರರು ರೈತರು ಯುರಿಯಾ ಸೇರಿದಂತೆ ಅಗತ್ಯ ರಸಗೊಬ್ಬರ ಖರೀದಿಸುವಾಗ ಅವರಿಗೆ ಅಗತ್ಯವಿಲ್ಲದ ರಸಗೊಬ್ಬರ ಖರೀದಿಸುವಂತೆ ಲಿಂಕ್ ಮಾಡಿ ಒತ್ತಾಯ ಮಾಡಿದರೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ. ಜಿ ಅವರು ಎಚ್ಚರಿಕೆ ನೀಡಿದರು.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ 2026-27 ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಸಮರ್ಪಕ ಪೂರೈಕೆ ಸಂಬಂಧ ಕೃಷಿ ಪರಿಕರಗಳ ಸರಬರಾಜುದಾರರ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಅಧಿಕಾರಗಳ ಸಭೆ ನಡೆಸಿ ಡಿಸಿ ಲಕ್ಷ್ಮೀಕಾಂತರೆಡ್ಡಿ ಮಾತನಾಡಿದರು.
ರೈತರಿಗೆ ಯುರಿಯಾ ಕೊರತೆಯಾಗದಂತೆ ಮಾರಾಟ ಮಾಡಲು ಜಿಲ್ಲೆಯಲ್ಲಿ ರಸಗೊಬ್ಬರ ಸರಬರಾಜುದಾರ ಸಂಸ್ಥೆ ಹಾಗೂ ಡೀಲರ್ ಗಳು ಕೃಷಿ ಇಲಾಖೆಯಿಂದ ಹೊರಡಿಸಲಾಗಿರುವ ಸೂಚನೆಗಳನ್ನು ಪಾಲಿಸಬೇಕು ಎಂದರು.
ರಸಗೊಬ್ಬರ ಸರಬರಾಜುದಾರ ಕಂಪನಿಗಳು ಡೀಲರ್ ಗಳಿಗೆ ರಸಗೊಬ್ಬರ ವಿತರಣೆ ಮಾಡುವ ಮೊದಲೇ ರೇಕ್ (Rake) ವಿವರವನ್ನು ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು. ಯುರಿಯಾ ಮತ್ತು ಡಿ.ಎ.ಪಿ ದಾಸ್ತಾನು ಜಿಲ್ಲೆಗೆ ಬಂದ ತಕ್ಷಣ ಕೆ.ಎಸ್.ಎಸ್.ಸಿ ಮತ್ತು ಕೆ.ಎಸ್.ಸಿ.ಎಂ.ಎಫ್ ನಲ್ಲಿ ಶೇ 40 ರಿಂದ 50 ರಷ್ಟು ಪರಿಮಾಣವನ್ನು ಬಫರ್ ಸ್ಟಾಕ್ ರೂಪದಲ್ಲಿ ಸಂಗ್ರಹಿಸಬೇಕು ಎಂದರು.
ರೈತರಿಗೆ ಮಾರಾಟ ಮಾಡಬೇಕಿರುವ ಯುರಿಯಾ ಹಾಗೂ ಡಿ.ಎ.ಪಿ ರಸಗೊಬ್ಬರಗಳನ್ನು ಅನಧಿಕೃತವಾಗಿ ದಾಸ್ತಾನು ಮಾಡುವುದು, ಕೈಗಾರಿಕೆಗಳಿಗೆ ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂತಹ ಡೀಲರ್ ಅಥವಾ ಸರಬರಾಜು ಕಂಪನಿಗಳ ಪರವಾನಗಿ ರದ್ದು ಪಡಿಸಿ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಯುರಿಯಾ ರಸಗೊಬ್ಬರವನ್ನು ಕಡ್ಡಾಯವಾಗಿ ಯುರಿಯಾ ವಿತರಣಾ ಆ್ಯಪ್ ನಲ್ಲಿ ಹಾಗೂ ಪಿ.ಒ.ಎಸ್ ತಂತ್ರಾಂಶದಲ್ಲಿ ನಮೂದಿಸಿ ನಂತರ ಮಾರಾಟ ಮಾಡಬೇಕು. ರೈತರ ಎಫ್.ಐ.ಡಿ (fruits ID) ಯಲ್ಲಿ ಜಮೀನಿನ ವಿವರ ಲಭ್ಯವಿದ್ದು, ವಿಸ್ತೀರ್ಣ ಹಾಗೂ ಬೆಳೆಗಳಿಗೆ ಇಲಾಖೆ ನಿಗದಿಪಡಿಸುವ ಯುರಿಯಾ ಬಳಕೆಯ ಪರಿಮಾಣವನ್ನು ಮಾತ್ರ ಆಯಾ ರೈತರಿಗೆ ಮಾರಾಟ ಮಾಡಬೇಕು. ಯಾವುದೇ ಕಾರಣಕ್ಕೂ ಹೆಚ್ಚುವರಿಯಾಗಿ ನೀಡುವಂತಿಲ್ಲ ಎಂದರು.
ಯುರಿಯಾ ಸೇರಿದಂತೆ ರಾಸಾಯನಿಕ ರಸಗೊಬ್ಬರಗಳ ಬಳಕೆ ಕುರಿತಂತೆ ಇಲಾಖೆ ಪ್ರಕಣೆ ಹೊರಡಿಸಲಿದೆ. ಇಲಾಖೆಯ ಪ್ರಕಟಣೆಯನ್ನು ಅನಾವರಣಗೊಳಿಸಿ, ರೈತರಿಗೆ ಅದರನ್ವಯ ರಸಗೊಬ್ಬರ ವಿತರಣೆ ಮಾಡಿ. ಇದರಿಂದ ಅತಿಯಾದ ರಾಸಾಯನಿಕ ರಸಗೊಬ್ಬರ ಬಳಕೆಯನ್ನು ಸಹ ತಡೆಯಬಹುದು ಎಂದರು.
ತಾಲ್ಲೂಕು ಕೃಷಿ ಅಧಿಕಾರಿಗಳು ಪ್ರತಿ ದಿನ ಪರಿಶೀಲನೆ ನಡೆಸಿ ಮಾರಾಟಗಾರರು ಯುರಿಯಾ ವಿತರಣಾ ಆ್ಯಪ್ ಹಾಗೂ ಪಿ.ಒ.ಎಸ್ ತಂತ್ರಾಂಶದಲ್ಲಿ ಯುರಿಯಾ ಮಾರಾಟದ ಬಗ್ಗೆ ನಿಖರ ಮಾಹಿತಿ ಭರ್ತಿ ಮಾಡುತ್ತಿರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಯುರಿಯಾ ಮಾರಾಟದಲ್ಲಿ ಯಾವುದೇ ರೀತಿಯ ಲೋಪ ಕಂಡುಬಂದಲ್ಲಿ ಆಯಾ ತಾಲ್ಲೂಕಿನ ಕೃಷಿ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಂಟಿ ಕೃಷಿ ನಿರ್ದೇಶಕ ಕೆ.ಎಚ್ ರವಿ ಅವರು ಮಾತನಾಡಿ ಮಾರಟಗಾರರು ತಮ್ಮಲ್ಲಿರುವ ರಸಗೊಬ್ಬರದ ದಾಸ್ತಾನು, ದರದ ವಿವರನ್ನು ಅಂಗಡಿಯ ಮುಂಭಾಗ ಅನಾವರಣ ಮಾಡಬೇಕು, ಕಡ್ಡಾಯವಾಗಿ ಎಂ. ನಮೂನೆಯಲ್ಲಿ ಬಿಲ್ ನೀಡಬೇಕು ಎಂದರು.
ಜಿಲ್ಲೆಯಲ್ಲಿ ಅಗತ್ಯ ಬಿತ್ತನೆ ಬೀಜದ ದಾಸ್ತಾನು ಲಭ್ಯವಿದ್ದು, ಗುಣಮಟ್ಟದ ಪರೀಕ್ಷೆಗೆ ಕೃಷಿ ವಿಶ್ವವಿದ್ಯಾಲಯಕ್ಕೆ ರವಾನಿಸಲಾಗಿದ್ದು, ವರದಿ ಬಂದ ತಕ್ಷಣ ಮಾರಾಟ ಪ್ರಾರಂಭಿಸಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕ್, ಜಂಟಿ ಕೃಷಿ ನಿರ್ದೇಶಕ ( ಜಾಗೃತ ಕೋಶ) ರಾಮಕೃಷ್ಣ, ಜಿಲ್ಲಾ ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ವೆಂಕಟೇಶ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
Key words: farmers, fertilizers, Mysore DC, Laxmikant Reddy, warns







