Thursday, August 13, 2026

BDA Apartments

Home Front Page ಅಡ್ಡ ಮತದಾನ: ಆಣೆ-ಪ್ರಮಾಣ ಮಾಡಿದ ಬಿಜೆಪಿ ಶಾಸಕ

ಅಡ್ಡ ಮತದಾನ: ಆಣೆ-ಪ್ರಮಾಣ ಮಾಡಿದ ಬಿಜೆಪಿ ಶಾಸಕ

ಹಾಸನ,ಜೂನ್,30,2026 (www.justkannada.in):  ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್  ಶಾಸಕರು ಅಡ್ಡಮತದಾನ  ಮಾಡಿದ್ದಾರೆಂಬ ಆರೋಪ ಕೇಳಿ ಬಂದಿರುವ  ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಬೇಲೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಹೆಚ್.ಕೆ. ಸುರೇಶ್ ಅವರು ಆಣೆ ಪ್ರಮಾಣ ಮಾಡಿದ್ದಾರೆ.

ಬೇಲೂರಿನ ಐತಿಹಾಸಿಕ ಹಾಗೂ ಪ್ರಸಿದ್ಧ ಶ್ರೀ ಚನ್ನಕೇಶವಸ್ವಾಮಿ ದೇವಾಲಯದ ಆವರಣದಲ್ಲಿ ಕರಿಕಲ್ಲಿನ ಮೇಲೆ ಕೈಯಿಟ್ಟು ಆಣೆ ಪ್ರಮಾಣ ಮಾಡಿರುವ ಶಾಸಕ ಹೆಚ್.ಕೆ ಸುರೇಶ್, ನಾನು ವಿಧಾನಪರಿಷತ್ ಚುನಾವಣೆಯಲ್ಲಿ ಯಾವುದೇ ಅಡ್ಡಮತದಾನ ಮಾಡಿಲ್ಲ’ ಎಂದು ಮೂರು ಬಾರಿ ಗಟ್ಟಿಯಾಗಿ ಉಚ್ಚರಿಸಿದರು. ಅಷ್ಟೇ ಅಲ್ಲದೆ, ‘ನಾನು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ದ್ರೋಹ ಮಾಡಿಲ್ಲ’ ಎಂದು ಮೂರು ಬಾರಿ ಹೇಳಿದರು.

ನನ್ನ ವಿರುದ್ಧ ಅಡ್ಡಮತದಾನದ ಅಪಪ್ರಚಾರ  ಮಾಡಲಾಗುತ್ತಿದೆ. ಇದು ನನ್ನ ಕ್ಷೇತ್ರದ ವಿರುದ್ಧ ನಡೆದಿರುವ ದೊಡ್ಡ ಪಿತೂರಿ ಮತ್ತು ಷಡ್ಯಂತ್ರ . ನಮ್ಮ ಕ್ಷೇತ್ರಕ್ಕೆ ಖುದ್ದಾಗಿ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಬಂದು ಪ್ರಚಾರ ಮಾಡಿದ್ದರು. ಅಂತಹ ನಾಯಕರಿಗೆ ಹಾಗೂ ಪಕ್ಷಕ್ಕೆ ನಾನು ಅನ್ಯಾಯ ಮಾಡಿದರೆ ಭಗವಂತ ನನ್ನನ್ನು ಎಂದಿಗೂ ಕ್ಷಮಿಸುವುದಿಲ್ಲ. ನಮ್ಮ ಪಕ್ಷದ ವಿರೋಧ ಪಕ್ಷದ ನಾಯಕರು ಸೂಚಿಸಿದಂತೆ ನಾನು ನಿಖರವಾಗಿ ನನ್ನ ಮತ ಹಾಕಿದ್ದೇನೆ. ಇದಕ್ಕೆ ಆ ಪರಮಾತ್ಮನೇ ಸಾಕ್ಷಿ ಎಂದು ಹೆಚ್.ಕೆ ಸುರೇಶ್ ತಿಳಿಸಿದ್ದಾರೆ.

Key words: Cross-voting, Belur BJP, MLA, takes, oath