ಹನುಮ ಧ್ವಜ ಇಳಿಸಿದ ವಿವಾದ: ಬಿಜೆಪಿ ವಿರುದ್ದ ಸಚಿವ ಪ್ರಿಯಾಂಕ್ ಖರ್ಗೆ ಕಿಡಿ

ಮಂಡ್ಯ, ಜನವರಿ 29,2024(www.justkannada.in): ಮಂಡ್ಯ ತಾಲೂಕಿನ ಕೆರಗೋಡಿನಲ್ಲಿ ಹನುಮಧ್ವಜ  ಇಳಿಸಿದ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ವಿರುದ್ಧ ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಇಷ್ಟು ದಿನ ಕರಾವಳಿಯನ್ನು ಕೋಮು ರಾಜಕಾರಣದ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡಿದ್ದ ಬಿಜೆಪಿ ಹಾಗೂ ಸಂಘ ಪರಿವಾರ ಈಗ ಮಂಡ್ಯದಲ್ಲಿ ತಮ್ಮ ಪ್ರಯೋಗ ಆರಂಭಿಸಿದೆ. ಸಮಾಜ ಶಾಂತಿಯುತವಾಗಿದ್ದರೆ ಬಿಜೆಪಿಗೆ ತಿಂದ ಅನ್ನ ಜೀರ್ಣವಾಗಲ್ಲ. ಬೆಂಕಿ ಹಚ್ಚಿ, ಆ ಬೆಂಕಿಯಲ್ಲಿ ರಾಜಕೀಯದ ಚಳಿ ಕಾಯಿಸಿಕೊಳ್ಳುತ್ತಿರುವ ಬಿಜೆಪಿ ನಾಯಕರು ಅತ್ಯಂತ ಕೀಳುಮಟ್ಟಕ್ಕೆ ಇಳಿದಿದ್ದಾರೆ ಎಂದು ಹರಿಹಾಯ್ದಿದ್ದಾರೆ

ವಿಪಕ್ಷ ನಾಯಕನೆಂದರೆ ಘನತೆಯುಕ್ತ ಸ್ಥಾನ, ಆ ಸ್ಥಾನದ ಗೌರವವನ್ನು ಮಣ್ಣುಪಾಲು ಮಾಡುತ್ತಿರುವ ವಿರೋಧ ಪಕ್ಷದ ನಾಯಕ ಆರ್​. ಅಶೋಕ್ ಮತ್ತು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೇ ರಾಷ್ಟ್ರಧ್ವಜದ ಬದಲು ಭಗವಾಧ್ವಜ ಹಾರಿಸುವ ಷಡ್ಯಂತ್ರ ರೂಪಿಸಿದ್ಯಾರು? ಅನುಮತಿ ಪತ್ರದ ಷರತ್ತುಗಳನ್ನ ಉಲ್ಲಂಘಿಸಲು ಪ್ರೇರೇಪಿಸಿದ್ದು ಯಾರು? ಬಿಜೆಪಿ ಅದೆಷ್ಟು ದಿನಗಳಿಂದ ಶಾಂತಿ ಕೆಡಿಸುವ ಸಂಚು ರೂಪಿಸಿತ್ತು? ಕಾನೂನು, ನೀತಿ ನಿಯಮ ಬಿಜೆಪಿ ಕಾಲ ಕೆಳಗಿನ ಕಸದಂತೆ ನೋಡೋದೇಕೆ?  ಎಂದು ವಾಗ್ದಾಳಿ ನಡೆಸಿದ್ದಾರೆ.

ತ್ರಿವರ್ಣ ಧ್ವಜವನ್ನು ವಿರೋಧಿಸಿದ್ದ ಆರ್​ಎಸ್​ಎಸ್​ ಹೇಳಿಕೊಟ್ಟ ಪಾಠದಂತೆ ಬಿಜೆಪಿಯೂ ತಿರಂಗಾ ಕಂಡರೆ ಉರಿದು ಬೀಳುತ್ತಿದೆ. ರಾಷ್ಟ್ರಧ್ವಜಕ್ಕೆ ಕೈ ಮುಗಿಯುವ ಬದಲು ಬಿಜೆಪಿ ಕೆಂಡ ಕಾರುತ್ತಿದೆ. ತಮಗೆ ತಾವೇ ದೇಶದ್ರೋಹಿಗಳೆಂದು ಸರ್ಟಿಫಿಕೇಟ್ ಕೊಟ್ಟುಕೊಂಡಿದ್ದಾರೆ. ಬಿಜೆಪಿಯವರಿಗೆ ದೇಶದ ಧ್ವಜ, ಸಂವಿಧಾನ, ದೇಶದ ಐಕ್ಯತೆ ಇಷ್ಟವಿಲ್ಲವೆಂದರೆ ನಿಮ್ಮ ಪ್ರೀತಿಪಾತ್ರವಾದ ಪಾಕಿಸ್ತಾನಕ್ಕೆ ಹೋಗಿ. ಬಿಜೆಪಿ ತಂತ್ರ, ಕುತಂತ್ರಗಳಿಗೆ ನಾವು ಬಗ್ಗುವುದಿಲ್ಲ, ಬಗ್ಗು ಬಡಿಯುತ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಗುಡುಗಿದ್ದಾರೆ.

Key words: Controversy – Hanuman flag-Minister- Priyank Kharge – against- BJP.