ಮಲ್ಲಿಕಾರ್ಜುನ ಖರ್ಗೆ, ಈಶ್ವರ್ ಖಂಡ್ರೆ ಬಗ್ಗೆ ವಿವಾದಾತ್ಮಕ ಹೇಳಿಕೆ: ವಿಷಾದ ವ್ಯಕ್ತಪಡಿಸಿದ ಅರಗ ಜ್ಞಾನೇಂದ್ರ.

ಬೆಂಗಳೂರು,ಆಗಸ್ಟ್,2,2023(www.justkannada.in):   ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅರಣ್ಯ ಸಚಿವ ಈಶ್ವರ ಖಂಡ್ರೆ  ಅವರ  ಕುರಿತು ತಾವು ನೀಡಿರುವ ವಿವಾದಾತ್ಮಕ ಹೇಳಿಕೆ ಬಗ್ಗೆ  ಮಾಜಿ ಗೃಹ ಸಚಿವ, ಆರಗ ಜ್ಞಾನೇಂದ್ರ ವಿಷಾದ ವ್ಯಕ್ತಪಡಿಸಿದ್ದಾರೆ.

ತಮ್ಮ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಈ ಕುರಿತು ಮಾತನಾಡಿದ ಮಾಜಿ ಸಚಿವ ಅರಗ ಜ್ಞಾನೇಂದ್ರ,  ಮಲ್ಲಿಕಾರ್ಜುನ ಖರ್ಗೆ, ಈಶ್ವರ್ ಖಂಡ್ರೆ ಮನ ನೋಯಿಸುವ ಉದ್ದೇಶವಿರಲಿಲ್ಲ. ಮಲ್ಲಿಕಾರ್ಜುನ ಖರ್ಗೆ ಹೆಸರನ್ನು ಎಲ್ಲೂ ಉಲ್ಲೇಖಿಸಿಲ್ಲ. ಖಂಡ್ರೆ ಅವರನ್ನು ನೋಯಿಸಬೇಕು ಎಂಬ ಉದ್ದೇಶದಿಂದಲೂ ಮಾತನಾಡಿಲ್ಲ. ನನ್ನ ಮಾತಿನಿಂದ ಅವರ ಮನಸ್ಸಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನ ಎಲ್ಲೂ ನಾನು ಉಲ್ಲೇಖಿಸಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರು ಅನುಭವಿ ರಾಜಕಾರಣಿ, ಹಿರಿಯ ಮುತ್ಸದ್ದಿ. ಅವರನ್ನು ಟೀಕೆ ಮಾಡುವಷ್ಟು ದೊಡ್ಡವನು ನಾನಲ್ಲ ಎಂದು ಅರಗ ಜ್ಞಾನೇಂದ್ರ ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಬಿಜೆಪಿ ನಾಯಕ ಅರಗ ಜ್ಞಾನೇಂದ್ರ, ಕಾಡೇ ಇಲ್ಲದ ಪ್ರದೇಶದವರು ಅರಣ್ಯ ಸಚಿವರಾಗಿದ್ದಾರೆ. ಇದು ಕರ್ನಾಟಕದ ದುರಂತ. ಪಶ್ಚಿಮ ಘಟ್ಟದವರ ಸಮಸ್ಯೆ ಬಗ್ಗೆ ಸಚಿವರಿಗೆ ಅರಿವಿಲ್ಲ. ಉತ್ತರ ಕರ್ನಾಟಕ ಭಾಗದವರು ಸುಟ್ಟು ಕರಕಲಾಗಿರುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ನೋಡಿದರೆ ಅಲ್ಲಿನವರ ಸ್ಥಿತಿ ಗೊತ್ತಾಗುತ್ತದೆ. ಖಂಡ್ರೆ ಅವರ ತಲೆ ಕೂದಲಿನಿಂದ ಮುಚ್ಚಿಕೊಂಡಿದ್ದರಿಂದ ಉಳಿದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದರು. ಈ ಹೇಳಿಕೆಗೆ ಕಾಂಗ್ರೆಸ್ ನಾಯಕರು, ಮುಖಂಡರು, ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು.

Key words: Controversial -statement – Mallikarjuna Kharge,-Ishwar Khandre-Araga Gyanendra