ನಿಮಗೂ ಮನೋರಂಜನ್ ಗೂ ಲಿಂಕ್ ಏನು ..? ಪ್ರಕರಣದಲ್ಲಿ ನಿಮ್ಮ ಪಾತ್ರವೇನು ಅಂತ ಹೇಳಿ – ಪ್ರತಾಪ್ ಸಿಂಹಗೆ ಪ್ರಶ್ನೆಗಳ ಸುರಿಮಳೆಗೈದ ಎಂ.ಲಕ್ಷ್ಮಣ್

ಮೈಸೂರು,ಡಿಸೆಂಬರ್,25,2023(www.justkannada.in): ಲೋಕಸಭೆಯಲ್ಲಿ ಭದ್ರತಾ ವೈಫಲ್ಯ ಸಂಬಂಧ ನಿಮಗೂ ಮನೋರಂಜನ್ ಗೂ ಲಿಂಕ್ ಏನು ..? ಪ್ರಕರಣದಲ್ಲಿ ನಿಮ್ಮ ಪಾತ್ರವೇನು ಅಂತ ಹೇಳಿ ಎಂದು ಸಂಸದ ಪ್ರತಾಪ್ ಸಿಂಹ ಅವರಿಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಪ್ರಶ್ನೆಗಳ ಸುರಿಮಳೆಗೈದರು.

ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂ.ಲಕ್ಷ್ಮಣ್, ನಿಮಗೆ ಜನ ಈ ಬಾರಿ ಚುನಾವಣೆಯಲ್ಲಿ ಬುದ್ದಿ ಕಲಿಸುತ್ತಾರೆ. ಜನರಿಗೆ ನಿಮ್ಮ ಬಿಜೆಪಿ ಬುದ್ದಿ ಎಲ್ಲಾ ಗೊತ್ತಾಗಿದೆ. ತಾಯಿ ಚಾಮುಂಡೇಶ್ವರಿ ಮೇಲೆ ಭಕ್ತಿ ಇದ್ದರೆ ನಿಮ್ಮ ಕೇಂದ್ರದ ವೀಕ್ಷಕರು ಮಾಡಿರುವ ವರದಿಯಲ್ಲಿ ಏನಿದೆ ಅಂತ ಹೇಳಿ. ನೀವು ಎಷ್ಟು ವೋಟ್ ಗಳಲ್ಲಿ ಸೋಲುತ್ತೀರಿ ಅಂತನೂ ಹೇಳಿ ಎಂದು ಸಂಸದ ಪ್ರತಾಪ್ ಸಿಂಹ ವಿರುದ್ಧ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು.

ಪ್ರತಾಪ್ ಸಿಂಹ ನಾನೇನಾದರೂ ತಪ್ಪು ಮಾಡಿದರೇ ಚಾಮುಂಡೇಶ್ವರಿ ನೋಡಿ ಕೊಳ್ತಾರೆ.   ನನ್ನ ಕ್ಷೇತ್ರದ ಜನ ನೋಡಿಕೊಳ್ಳುತ್ತಾರೆ  ಅಂತ ಹೇಳಿದ್ದಾರೆ. ಹೋಗಲಿ ನಿಮಗೂ ಮನೋರಂಜನ್ ಗೂ  ಏನು ಲಿಂಕ್ ಇದೆ ಅಂತ ಹೇಳಿ? ಬೇರೆ ಏನೂ ಬೇಡ. ಮನೋರಂಜನ್ ಗೆ ನೀವು ಆನ್ ಲೈನ್ ಮೂಲಕ ಎಲ್ಲಿ ಹೇಗೆ ಎಷ್ಟು ಹಣ ಕಳಿಸಿಕೊಟ್ಟಿದ್ದೀರಿ ಅಂತ ಹೇಳಿ. ಪ್ರಕರಣದಲ್ಲಿ ನಿಮ್ಮ ಪಾತ್ರ ಏನು ಇಲ್ವಾ ಅಂತ ಹೇಳಿ ? ಎಂದು  ಪ್ರತಾಪ್‌ ಸಿಂಹ ಅವರಿಗೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಪ್ರಶ್ನೆಗಳ ಸುರಿಮಳೆಗೈದರು.

ದಶಪಥ  ಹೆದ್ದಾರಿ ಕಾಮಗಾರಿಯಲ್ಲಿ ನೀವು ನೂರು ಕೋಟಿಗೂ ಅಧಿಕವಾಗಿ ಕಮಿಷನ್ ಹೊಡೆದಿದ್ದೀರಿ ಅಂತ ಜನ ಹೇಳುತ್ತಿದ್ದಾರೆ. ನೀವು ನಿಮ್ಮ ಕಾಲಾವಧಿಯಲ್ಲಿ ಏನು ಕೆಲಸ ಮಾಡಿದ್ದೀರಿ ಅಂತ ಒಂದು ಶ್ವೇತ ಪತ್ರ ಹೊರಡಿಸಿ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಒತ್ತಾಯಿಸಿದರು.

ಹಿಜಾಬ್ ವಿಚಾರ: ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದಾರೆ..

ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ಪ್ರತಿಕ್ರಿಯೆ ಕುರಿತು ಮಾತನಾಡಿದ ಎಂ.ಲಕ್ಷ್ಮಣ್,  ಮೊನ್ನೆ ಕವಲಂದೆ ಪೋಲಿಸ್ ಠಾಣೆ ಉದ್ಘಾಟನೆ  ವೇಳೆ  ಸಿಎಂ ಸಿದ್ದರಾಮಯ್ಯ ಹಿಜಾಬ್ ಬಗ್ಗೆ ಒಂದು ಹೇಳಿಕೆ ಕೊಟ್ಟಿದ್ದರು. ಅದನ್ನ ಅಲ್ಲೊಬ್ಬ ವ್ಯಕ್ತಿ ಕೇಳಿದ ಪ್ರಶ್ನೆಗೆ ಸಿಎಂ‌ ಪ್ರತಿಕ್ರಿಯೆ ಕೊಟ್ಟಿದ್ದಾರೆ ಅಷ್ಟೇ. ಅದನ್ನ ರಾಜ್ಯದಲ್ಲಿ ಎಲ್ಲೆಲ್ಲೋ ಅಡಗಿ ಬಿಲ ಸೇರಿದ್ದ ಬಿಜೆಪಿ ಅವರಿಂದ ಖಂಡನೆ ವ್ಯಕ್ತವಾಗಿದೆ.  ಇದನ್ನೇ ದೊಡ್ಡದು ಎಂದು ಬಿಂಬಿಸಿ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

ಜಾತಿ, ಧರ್ಮಗಳ ವಿಷ ಬೀಜ ಬಿತ್ತೋದು ಸರಿಯಲ್ಲ.

ನಿನ್ನೆ ಶ್ರೀರಂಗಪಟ್ಟಣದಲ್ಲಿ ಕಲ್ಲಡ್ಕ ಪ್ರಭಾಕರ್ ಪ್ರಚೋದಕಾರಿ ಹೇಳಿಕೆ ಕೊಟ್ಟಿದ್ದಾರೆ. ಮಸೀದಿಗೆ ನುಗ್ಗುವಂತೆ ಪ್ರಚೋದನೆ ಮಾಡಿದ್ದಾರೆ. ಜಿಲ್ಲಾ ಪೋಲಿಸರು ಇವರಿಗೆ ಹೇಗೆ ಅನುಮತಿ ಕೊಟ್ಟಿದ್ದೀರಿ.? ಸರ್ಕ್ಯೂಟ್ ಯಾತ್ರೆ ಮಾಡಲು ಯಾಕೆ ಅನುಮತಿ ಕೊಟ್ಟಿರಿ.? ಸಿದ್ದರಾಮಯ್ಯ ವಿರುದ್ಧ ಕಲ್ಲಡ್ಕ ತೊಡೆ ತಟ್ಟುತ್ತಾರೆ. ಜಿಲ್ಲಾ ಪೋಲಿಸರು ಇಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಹಿಜಾಬ್ ಬಗ್ಗೆ ಸರ್ಕಾರ ಮುಂದಿನ ದಿನಗಳಲ್ಲಿ ಚರ್ಚೆ ಮಾಡುತ್ತೆ. ವಾಪಸ್ ಪಡೆಯುವುದಾದರೆ ಖಂಡಿತ ವಾಪಸ್ ಪಡೆಯುತ್ತಾರೆ. ಆದರೆ ಭಾವನಾತ್ಮಕ ವಿಚಾರ ತೆಗೆದುಕೊಂಡು ಈ‌ ರೀತಿ ಜನರಲ್ಲಿ ಜಾತಿ, ಧರ್ಮಗಳ ವಿಷ ಬೀಜ ಬಿತ್ತೋದು ಸರಿಯಲ್ಲ ಎಂದು ಎಂ. ಲಕ್ಷ್ಮಣ್ ಹೇಳಿದರು.

ಹಾಗೆಯೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ವಾಗ್ದಾಳಿ ನಡೆಸಿದ ಎಂ. ಲಕ್ಷ್ಮಣ್, ಸಿದ್ದರಾಮಯ್ಯ ಅವರನ್ನು ಮುಟ್ಟಾಳ  ಅಂತ ಇವರು ಕರೆಯುತ್ತಾರೆ. ಇವರ ಯೋಗ್ಯತೆಗೆ ಕೇಂದ್ರದಿಂದ ಬರ ಪರಿಹಾರವನ್ನು ಒಂದು ಪೈಸೆ ಕೊಡಿಸಲಿಕ್ಕೆ ಆಗಲಿಲ್ಲ. ಕೃಷ್ಣ ಯೋಜನೆ, ಮೇಕದಾಟು ಯೋಜನೆ, ಜಿಎಸ್ಟಿ, ನರೇಗ ಯೋಜನೆಗೆ ಕೇಂದ್ರದಿಂದ ಬರುವ ಅನುದಾನ ಕೊಡಿಸಲಿಕ್ಕೆ ನಿಮಗೆ ತಾಕತ್ ಇಲ್ಲ. ಇದರ ಬಗ್ಗೆ ಚಕಾರ ಎತ್ತುವುದಿಲ್ಲ. ನೀವು ನಮ್ಮ‌ ಮುಖ್ಯಮಂತ್ರಿಗಳ ಬಗ್ಗೆ ಮಾತನಾಡುತ್ತೀರಾ ? ಮುಂದಿನ ಚುನಾವಣೆಯಲ್ಲಿ ನೀವು ಜಗದೀಶ್ ಶೆಟ್ಟರ್ ರಿಂದಲೇ  ಸೋಲುತ್ತೀರಾ. ಎರಡು ಲಕ್ಷ ವೋಟ್ ಗಳಿಂದ ಸೋಲುತ್ತೀರಾ ನಿಮ್ಮ ಕಥೆ ಮುಗಿತು ಎಂದು ಕಿಡಿಕಾರಿದರು.

ಜಾತಿ ಗಣತಿ ವರದಿ ಕೊಡುವುದಕ್ಕೂ ಮುನ್ನೆ ವಿರೋದ ಮಾಡುವುದು ಯಾಕೆ.?

ಜಾತಿಗಣತಿ ವರದಿ ಬಿಡುಗಡೆಗೆ ವಿರೋಧ ಕುರಿತು ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್ , ಜಾತಿ ಗಣತಿ ವರದಿ ಕೊಡುವುದಕ್ಕೂ ಮುನ್ನ ವಿರೋಧ ಮಾಡುವುದು ಏಕೆ? ಯಾರೋ ಹೇಳಿದರು ಅಂತಾ  ವರದಿಗೆ ವೀರಶೈವ ಲಿಂಗಾಯತ ಸಮುದಾಯ ವಿರೋಧ ಮಾಡೋದು ಸರಿಯಲ್ಲ ಎಂದರು.

Key words: Commission -allegation – Dashpath -highway -work-Pratap Simha- M. Laxman