ಪಿ ಸಾಯಿನಾಥ್ ಜೊತೆ  ಮತ್ತೆ ಬರುತ್ತಿದ್ದೇನೆ..

ಬೆಂಗಳೂರು,ಆಗಸ್ಟ್, 16,2022(www.justkannada.in): ಪಿ ಸಾಯಿನಾಥ್ ಅವರು ಇದುವರೆಗೆ ಬರೆದದ್ದು ಒಂದೇ ಒಂದು ಪುಸ್ತಕ ಎಂದರೆ ಎಲ್ಲರೂ ಹುಬ್ಬೇರಿಸುತ್ತಾರೆ. ಅದು Everybody loves a good drought. ಆ ಒಂದು ಪುಸ್ತಕವೇ ಗ್ರಾಮೀಣ ಭಾರತಕ್ಕೆ ಹಿಡಿದ ಕನ್ನಡಿಯಾಗಿತ್ತು. ಅದರೊಳಗಿದ್ದ ತಲ್ಲಣದ ಮಳೆಗೆರೆಯುವ ಕಥನಗಳು ದೇಶವನ್ನು ಮಾತ್ರವಲ್ಲ ಜಗತ್ತನ್ನು ಬೆಚ್ಚಿಬೀಳಿಸುವಂತಿತ್ತು. ಅದು ಇಂದಿಗೂ ‘ಪೆಂಗ್ವಿನ್’ನ ಅತ್ಯಂತ ಹೆಚ್ಚು ಮಾರಾಟವಾದ ಪುಸ್ತಕಗಳಲ್ಲಿ ಒಂದು ಎನ್ನುವ ಹೆಮ್ಮೆಗೆ ಪಾತ್ರವಾಗಿದೆ.

ಇಂತಹ ಸಾಯಿನಾಥರನ್ನು ಮತ್ತೊಂದು ಪುಸ್ತಕ ಬರೆಯಲು ಒತ್ತಾಯ ಮಾಡಿದವರು ಅದೆಷ್ಟೋ. ನಾನಂತೂ ಅವರು ‘ದಿ ಹಿಂದೂ’ ಪತ್ರಿಕೆಗಾಗಿ ಇಡೀ ದೇಶವನ್ನು ಸುತ್ತಿ ಬರೆದ ದಲಿತ ಭಾರತದ ಕಥನವನ್ನು ಪುಸ್ತಕ ಮಾಡಿ ಎಂದು ಇನ್ನಿಲ್ಲದಂತೆ ಕಾಡುತ್ತಲೇ ಬಂದಿದ್ದೇನೆ. ಅದಕ್ಕೆ ರೆಡಿಯಾಗುತ್ತಿದ್ದ ಸಾಯಿನಾಥರು ಭಾರತದ ಸ್ವಾತಂತ್ರ್ಯ ಮತ್ತೊಮ್ಮೆ ಹರಣವಾಗುತ್ತಿರುವ ಈ ಸಂದರ್ಭದಲ್ಲಿ ನಮಗೆ ಸ್ವಾತಂತ್ರ್ಯವನ್ನು ತಂದುಕೊಟ್ಟ ಜನಸಾಮಾನ್ಯರ ಕಥೆಗಳನ್ನು ಹೇಳಲು ಇದು ನಿಜಕ್ಕೂ ಸರಿಯಾದ ಕಾಲ ಎಂದು ಸ್ವಾತಂತ್ರ್ಯ ಹೋರಾಟಗಾರರ ಕೊನೆಯ ಕೊಂಡಿಯ ಕಥೆಗಳನ್ನು ನಮ್ಮೆದುರು ಬಿಚ್ಚಿಡುತ್ತಿದ್ದಾರೆ.

ಯಾವ ಆಶಯ, ಹುಮ್ಮಸ್ಸಿನಿಂದ ಈ ಸ್ವಾತಂತ್ರ್ಯಕ್ಕೆ ದೇಶದ ಎಲ್ಲರೂ ಕೈ ಜೋಡಿಸಿದರೋ ಅದರ ಅರ್ಥವನ್ನೇ ಕಳೆದು ಹಾಕುತ್ತಿರುವಾಗ ಉಳಿದ ಪುಸ್ತಕಗಳು ಇನ್ನಷ್ಟು ಕಾಲ ಕಾಯಬಹುದು ಎನ್ನುವುದು ಅವರ ನಿಲುವು. ಈ ಕೃತಿ ಕೇವಲ ಸ್ವಾತಂತ್ರ್ಯ ಹೋರಾಟದ ಹುಮ್ಮಸ್ಸಿನ ಕಥೆಯಲ್ಲ. again ಪಿ ಸಾಯಿನಾಥರ signature ಶೈಲಿಯ ಭಾರತದ ಕಡು ಬಡತನವನ್ನು ಕಟ್ಟಿ ಕೊಡುವ ಕಥನ ಕೂಡಾ.

ಈ ಕೃತಿ 16 ಜನಸಾಮಾನ್ಯ ಆದರೆ ಅಸಾಮಾನ್ಯ ಹೋರಾಟಗಾರರನ್ನು ಪರಿಚಯಿಸುತ್ತದೆ. ಕರ್ನಾಟಕದ ಹೆಮ್ಮೆ ಎಚ್ ಎಸ್ ದೊರೆಸ್ವಾಮಿ ಅವರ ಕಥನವೂ ಇದರಲ್ಲಿದೆ.

ನವೆಂಬರ್ ನಲ್ಲಿ ಪೆಂಗ್ವಿನ್ ಈ ಪುಸ್ತಕವನ್ನು ಪ್ರಕಟಿಸುತ್ತಿದೆ. ಕನ್ನಡದ ಆವೃತ್ತಿ ಜನವರಿಯಲ್ಲಿ ಬಹುರೂಪಿಯ ಮೂಲಕ ನಿಮ್ಮ ಮುಂದೆ ಇಡುತ್ತಿದ್ದೇನೆ.

ಕೃಪೆ- ಜಿ.ಎನ್.ಮೋಹನ್

Key words: Coming -back –with- P Sainath-GN Mohan