ಅಪ್ಪನ ಹೆಗಲ ಮೇಲೆ ಕುಳಿತು ದಸರಾ ನೋಡಿದ್ದ ದಿನಗಳನ್ನು ನೆನೆದ ಸಿಎಂ ಸಿದ್ದರಾಮಯ್ಯ

ಮೈಸೂರು, ಅಕ್ಟೋಬರ್ 15, 2023(www.justkannada.in): ನಾಡಹಬ್ಬ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ತಮ್ಮ ಬಾಲ್ಯದ ದಿನಗಳಲ್ಲಿ ಕಂಡ ದಸರಾ ದಿನಗಳನ್ನು ಮೆಲುಕು ಹಾಕಿದರು.

ಜಂಬೂಸವಾರಿಯಲ್ಲಿ ಮಹಾರಾಜರು ಅಂಬಾರಿಯಲ್ಲಿ ಕುಳಿತು ಹೋಗುತ್ತಿದ್ದು… ಅಪ್ಪನ ಹೆಗಲ ಮೇಲೆ ಕೂತು ದಸರಾ ನೋಡಿದ್ದ ನೆನಪುಗಳನ್ನು ಸ್ಮರಿಸಿದರು. ಜತೆಗೆ ಪ್ರತಿ ದಿನ ತಪ್ಪಿಸದೇ ವಸ್ತು ಪ್ರದರ್ಶನಕ್ಕೆ ಬಂದು ನೋಡಿಕೊಂಡು ಹೋಗುತ್ತಿದೆ. ದಸರಾ ಆರಂಭವಾದ ಬಳಿಕ ವಸ್ತು ಪ್ರದರ್ಶನ ಮುಗಿಯುವವರೆಗೆ ನಿತ್ಯವೂ ಬಂದು ಹಾಜರಾಗುತ್ತಿದ್ದೆ ಎಂದರು.

ಕರ್ನಾಟಕ ಮನುಷ್ಯತ್ವ, ಪ್ರೀತಿ, ಪರಸ್ಪರ ವಿಶ್ವಾಸವನ್ನು ಬೆಳೆಸಿಕೊಂಡು ಬಂದಿರುವ ರಾಜ್ಯ. ಪ್ರತಿಯೊಬ್ಬ ಕನ್ನಡಿಗನೂ ಎಲ್ಲರನ್ನೂ ವಿಶ್ವಾಸದಿಂದ, ಪರಸ್ಪರ ಸ್ನೇಹ-ಪ್ರೀತಿಯಿಂದ ನೋಡಬೇಕಾದ್ದದ್ದು ಅಗತ್ಯ ಎಂದು ಕಿವಿಮಾತು ಹೇಳಿದರು.

ದಸರಾ ಮೂಲಕ‌ ನಾಡಿನ ಕಲೆ, ಸಂಸ್ಕೃತಿಯನ್ನು ದೇಶಕ್ಕೆ ತಿಳಿಸುತ್ತಿದ್ದೇನೆ. ರಾಜ್ಯದ ಅಭಿವೃದ್ಧಿಯನ್ನು ಜನರಿಗೆ ತಿಳಿಸುವ ಕಾರ್ಯವನ್ನು ದಸರಾ ಮೆರವಣಿಗೆ ಮೂಲಕ ಮಾಡುತ್ತೇವೆ. ಇಡೀ ಜಗತ್ತಿಗೆ ಕನ್ನಡ ನಾಡಿನ ವೈಭೋಗ ತಿಳಿಸುವ ಕಾರ್ಯ ದಸರಾ ಮೂಲಕ ಆಗುತ್ತಿದೆ. ಕಲೆ, ಸಂಸ್ಕೃತಿ, ಸಂಪ್ರದಾಯ ನಮ್ಮ ನಾಡಿನಲ್ಲಿ ಶ್ರೀಮಂತವಾಗಿದೆ. ಕರ್ನಾಟಕ ಜನ ಸುಸಂಸ್ಕೃತ ಜನ. ನಮ್ಮಲ್ಲಿ ಪ್ರೀತಿ, ವಿಶ್ವಾಸ ಹೆಚ್ಚಿದೆ ಎಂದರು.