ಬರದ ನಡುವೆ ದಸರಾ ಮಹತ್ವ ಕಡಿಮೆಯಾಗದಂತೆ ನಾಡಹಬ್ಬದ ಆಚರಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು, ಅಕ್ಟೋಬರ್ 15, 2023(www.justkannada.in): ನಾಡಿನ ಸಂಪತ್ತು, ಅಧಿಕಾರ ಎಲ್ಲರಿಗೂ ಹಂಚಿಕೆಯಾಗಬೇಕು. ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕು. ಇದನ್ನೇ ಬಾಬಾ ಸಾಹೇಬರು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಸರಕಾರ ಹೆಜ್ಜೆ ಇಟ್ಟಿದೆ. ಎಲ್ಲ ಜನರಿಗೂ ಅದರಲ್ಲೂ ಬಡಜನರಿಗೆ ಕೊಂಡುಕೊಳ್ಳುವ ಶಕ್ತಿಯನ್ನು ಹೆಚ್ಚಿಸಬೇಕು ಎಂಬ ಉದ್ದೇಶದಿಂದ ಐದು ಗ್ಯಾರಂಟಿಗಳನ್ನು ಘೋಷಿಸಿ ಜಾರಿಗೆ ತಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಚಾಮುಂಡಿಬೆಟ್ಟದಲ್ಲಿ ನಡೆದ ನಾಡಹಬ್ಬ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ,  ಬರದ ನಡುವೆಯೂ ದಸರಾ ಮಹತ್ವ ಕಡಿಮೆಯಾಗದಂತೆ ರಾಜ್ಯ ಸರಕಾರ ಸಾಂಪ್ರದಾಯಿಕವಾಗಿ ನಾಡಹಬ್ಬವನ್ನು ಆಚರಣೆ ಮಾಡುತ್ತಿದೆ. ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ 42 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. 38ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದರು.

ರಾಜ್ಯದಲ್ಲಿ 116 ತಾಲೂಕುಗಳು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. 4860 ಕೋಟಿ ಬೆಳೆ ನಷ್ಟ ಪರಿಹಾರವನ್ನು ಕೇಂದ್ರದಿಂದ ನಿರೀಕ್ಷೆ ಮಾಡುತ್ತಿದ್ದೇವೆ. ಕೇಂದ್ರದ ಅನುದಾನವನ್ನೇ ನಂಬಿಕೊಳ್ಳದೇ ರೈತರಿಗೆ ನೆರವಾಗುವ ಕೆಲಸವನ್ನು ರಾಜ್ಯ ಸರಕಾರ ಮಾಡಲಿದೆ ಎಂದರು.

ಕನ್ನಡ ನಿಘಂಟು ಪುಸ್ತಕ ವಿತರಣೆ: ವೇದಿಕೆಯಲ್ಲಿ ದಸರಾ ಉದ್ಘಾಟಕ ಹಂಸಲೇಖರಿಗೆ ಕನ್ನಡ ನಿಘಂಟು ಪುಸ್ತಕ ನೀಡಲಾಯಿತು. ಕುವೆಂಪು ಕನ್ನಡ ವಿಶ್ವ ವಿದ್ಯಾನಿಲಯದ ವಿಶೇಷಚೇತನ ವಿದ್ಯಾರ್ಥಿ ಭವಿತ ಅವರು ಕನ್ನಡ ನಿಘಂಟು ಪುಸ್ತಕ ನೀಡಿದರು.