ಬೊಂಬಾಟ್ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ: ಸಚಿವರ ಶ್ಲಾಘನೆ.

ಬೆಂಗಳೂರು,ಫೆಬ್ರವರಿ,16,2024(www.justkannada.in):  ರಾಜ್ಯ ಕಾಂಗ್ರೆಸ್ ಸರ್ಕಾರದ 2024-25ನೇ ಸಾಲಿನ ರಾಜ್ಯ ಬಜೆಟ್ ಅನ್ನು ಸಿಎಂ ಸಿದ್ದರಾಮಯ್ಯ ಇಂದು ಮಂಡನೆ ಮಾಡಿದ್ದು ಕೃಷಿ, ಶಿಕ್ಷಣ, ನೀರಾವರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೂ ಆದ್ಯತೆ ನೀಡಿದ್ದಾರೆ. ಇನ್ನು ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಬಗ್ಗೆ ಸಚಿವರು ಶ್ಲಾಘಿಸಿದ್ದಾರೆ.

ಜನರ ಒಳಿತಿನ ಸರ್ವಸ್ಪರ್ಶಿ ಬಜೆಟ್: ಸಚಿವ ಈಶ್ವರ ಖಂಡ್ರೆ

ಹಣಕಾಸು ಸಚಿವರೂ ಆದ ಸಿದ್ದರಾಮಯ್ಯ ಅವರಿಂದು ಮಂಡಿಸಿರುವ 2024-25ನೇ ಸಾಲಿನ ಆಯವ್ಯಯ ವಂಚಿತರು, ಬಡವರು, ಮಹಿಳೆಯರು ಮತ್ತು ಮಧ್ಯಮ ವರ್ಗದ ಆಶಾಕಿರಣವಾಗಿ ಹಾಗೂ ರಾಜ್ಯದ ಸರ್ವಾಂಗೀಣ ಪ್ರಗತಿಗೆ ಪೂರಕವಾದ ಸರ್ವಸ್ಪರ್ಶಿ ಬಜೆಟ್‌ ಆಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.

ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಈಶ್ವರ್ ಖಂಡ್ರೆ, 15ನೇ ಬಾರಿಗೆ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರು, ಆಗದು ಎಂದು ಕೈಕಟ್ಟಿ ಕೂರದೆ, ಸಾಧನೆಗೆ ಅಸಾಧ್ಯವಾದ್ದು ಯಾವುದೂ ಇಲ್ಲ ಎಂಬುದನ್ನು ಎಲ್ಲ ಅನ್ನಭಾಗ್ಯ, ಶಕ್ತಿ, ಗೃಹಲಕ್ಷ್ಮೀ, ಯುವನಿಧಿ ಮತ್ತು ಗೃಹಜ್ಯೋತಿ ಗ್ಯಾರಂಟಿಗಳ ಅನುಷ್ಠಾನದ ಯಶಸ್ವಿ ಜಾರಿ ಮತ್ತು ಸ್ಪಷ್ಟ ಮುನ್ನೋಟದೊಂದಿಗೆ ಸಾಬೀತು ಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ಬಜೆಟ್ ನ ಮುಖಪುಟದಲ್ಲ ಸಂವಿಧಾನದ ಪೀಠಿಕೆಯನ್ನು ಮುದ್ರಿಸಿದ್ದು, ಇದು ಗಣರಾಜ್ಯದ 75ನೆ ವರ್ಷದ ಆಚರಣೆಯ ಸಂಕೇತವಾಗಿದ್ದು, ನಮ್ಮ ಸರ್ಕಾರಕ್ಕೆ ಸಂವಿಧಾನವೇ ಪರಮೋಚ್ಛ ಎಂಬುದನ್ನೂ ನಿರೂಪಿಸುತ್ತದೆ ಎಂದು ತಿಳಿಸಿದ್ದಾರೆ.

ಬಂಡೀಪುರ, ದಾಂಡೇಲಿ ಮತ್ತು ಕಬಿನಿಯಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಇಂಟರ್ ಪ್ರಿಟೇಷನ್ ಕೇಂದ್ರ ನಿರ್ಮಿಸಲು 25 ಕೋಟಿ ರೂ. ನೀಡಲಾಗಿದ್ದರೆ, ಗದಗ ಜಿಲ್ಲೆಯ ಕಪ್ಪತ್ತಗುಡ್ಡದಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದಾಗಿ ಪ್ರಕಟಿಸಿರುವುದು ಪರಿಸರ ಪ್ರವಾಸೋದ್ಯಮಕ್ಕೆ ಇಂಬು ನೀಡುತ್ತದೆ ಎಂದು ತಿಳಿಸಿದ್ದಾರೆ.

ಆನೆ ಮತ್ತು ಚಿರತೆ ಕಾರ್ಯಪಡೆಗಳ ಉನ್ನತೀಕರಣ

ಈಗಾಗಲೇ ರಚಿಸಲಾಗಿರುವ 7 ಆನೆ ಕಾರ್ಯಪಡೆ ಮತ್ತು 2 ಚಿರತೆ ಕಾರ್ಯಪಡೆ ಕಾರ್ಯಕ್ಷಮತೆ ಹೆಚ್ಚಿಸಲು 40 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಜೊತೆಗೆ ಪ್ರಸಕ್ತ ಸಾಲಿನಲ್ಲಿ ಕೂಡ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಪ್ರಮುಖ್ಯತೆ ನೀಡುವುದಾಗಿ ಪ್ರಕಟಿಸಿರುವುದು ಮಾನವ-ವನ್ಯಜೀವಿ ಸಂಘರ್ಷದ ತ್ವರಿತ ಸ್ಪಂದನೆಗೆ ಸಹಕಾರಿಯಾಗಲಿದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಬೀದರ್ ಜಿಲ್ಲೆ ಹೊನ್ನಿಕೇರಿ ಮೀಸಲು ಅರಣ್ಯ ಮತ್ತುಇತರೆ ಜೀವ ವೈವಿಧ್ಯ ಪ್ರದೇಶಗಳಲ್ಲಿ ಪರಿಸರ ಪ್ರವಾಸೋದ್ಯಮ ಮತ್ತು ಸಂರಕ್ಷಣಾತ್ಮಕ ಕಾರ್ಯಕ್ರಮಗಳಿಗೆ 15 ಕೋಟಿ ರೂ.ಅನುದಾನ ಒದಗಿಸಿರುವುದನ್ನು ಅರಣ್ಯ ಸಚಿವ ಈಶ್ವರ್ ಖಂಡ್ರೆ  ಸ್ವಾಗತಿಸಿದ್ದಾರೆ.

ಸುಗಮ ವ್ಯಾಪಾರಕ್ಕೆ ಒತ್ತು

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಲ, ವಾಯು ಮತ್ತು ಪರಿಸರ ಸಂರಕ್ಷಣಾ ಕಾಯಿದೆಗಳನ್ವಯ ನೀಡುವ ಸಮ್ಮತಿ ಪತ್ರಗಳನ್ನು ಒಗ್ಗೂಡಿಸಿ ಸರಳೀಕರಣಗೊಳಿಸುವ ಮೂಲಕ ಸುಗಮ ವ್ಯಾಪಾರಕ್ಕೆ ಒತ್ತು ನೀಡಲಾಗಿದ್ದು, ಮಂಡಳಿಯ ಕಾರ್ಯಕ್ಷಮತೆ ಹೆಚ್ಚಿಸಲು ಅನುಮತಿ ಮತ್ತು ಪ್ರಮಾಣಪತ್ರಗಳ ನೀಡಿಕೆಗೆ ಏಕ ಗವಾಕ್ಷಿ ಯೋಜನೆ ತರುವ ಯೋಜನೆ ಕ್ರಾಂತಿಕಾರಿ ಹೆಜ್ಜೆ ಎಂದು ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಬೆಂಗಳೂರಿನ ಖಾಸಗಿ ಸಮುಚ್ಛಯಗಳಲ್ಲಿ ನಿತ್ಯ ಉತ್ಪತ್ತಿಯಾಗುವ ತ್ಯಾಜ್ಯ ಜಲವನ್ನು ಸಂಸ್ಕರಿಸಲು ಕ್ರಮ ವಹಿಸಲಾಗಿದ್ದು, ಈ ಸಂಸ್ಕರಣೆಯ ನಂತರ ಬಳಸಿ ಉಳಿಯುವ ನೀರನ್ನು ಮನೆ ಬಳಕೆಯ ಹೊರತಾಗಿ ಕಟ್ಟಡ ನಿರ್ಮಾಣ ಇತ್ಯಾದಿಗೆ ಮಂಡಳಿಯು ನಿಗದಿಪಡಿಸಿದ ಮಾನದಂಡಗಳ ಪ್ರಕಾರ ಮರುಬಳಕೆಗೆ ಪ್ರೋತ್ಸಾಹ ನೀಡಿರುವುದು ನೀರಿನ ಕೊರತೆಗೆ ಪರಿಹಾರವಾಗಲಿದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಕಲ್ಯಾಣ ಕರ್ನಾಟಕಕ್ಕೆ 5000 ಕೋಟಿ ರೂ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಒತ್ತು ನೀಡಲಾಗಿದ್ದು 5000ಕೋಟಿ ರೂ. ಒದಗಿಸಲಾಗಿದೆ.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಸಹಯೋಗದೊಂದಿಗೆ ಸರ್ಕಾರಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜನ್ನು ಪ್ರಾರಂಭಿಸುವ ಘೋಷಣೆ ಹಾಗೂ ಕೆಕೆಆರ್.ಡಿ.ಬಿ. ವತಿಯಿಂದ ಕೊಪ್ಪಳ, ಬೀದರ್, ಯಾದಗಿರಿ, ರಾಯಚೂರು ಮತ್ತು ಕಲಬುರಗಿಯಲ್ಲಿ ವಿಶ್ವವಿದ್ಯಾಲಯಗಳ ಘಟಕ ಕಾಲೇಜುನ್ನು ಅವಶ್ಯವಿರುವ ಜಿಲ್ಲಾ  ಅಥವಾ ತಾಲೂಕು ಕೇಂದ್ರದಲ್ಲಿ ಸ್ಥಾಪಿಸುವ ಸಂಕಲ್ಪ ನಮ್ಮ ಭಾಗದ ಶೈಕ್ಷಣಿಕ ಪ್ರಗತಿಗೆ ಕಾರಣವಾಗಲಿದೆ ಎಂದು ಹೇಳಿದ್ದಾರೆ.

ಬೀದರ್ ನಾನಕ್  ಝೀರಾ ಸಾಹೇಬ್ ಗುರುದ್ವಾರ ಅಭಿವೃದ್ದಿಗೆ 1ಕೋಟಿ ರೂ., ಔರಾದ್ ನೀರಾವರಿ ಯೋಜನೆ, ಬೀದರ್- ಬೆಂಗಳೂರು ನಡುವಿನ ಆರ್ಥಿಕ ಕಾರಿಡಾರ್, ಬೀದರ್ ಜಿಲ್ಲಾ ಸಂಕೀರ್ಣ ಜಿಲ್ಲೆಗೆ ಬಜೆಟ್ ಕೊಡುಗೆಯಾಗಿದೆ.

ಕಲ್ಯಾಣ ಕರ್ನಾಟಕದಲ್ಲಿ ಹಿಮೋಫೀಲಿಯಾ ಮತ್ತು ತಲಸ್ಮೇನಿಯಾ ರೋಗಿಗಳಿಗೆ ಸೂಕ್ತ ಚಿಕಿತ್ಸಾ ಸೌಲಭ್ಯ ಕಲ್ಪಿಸಲು ಕಲಬುರಗಿ ಮತ್ತು ಕೊಪ್ಪಳದ ಐಸಿಡಿಟಿ ಕೇಂದ್ರಗಳ ಬಲವರ್ಧನೆಗೆ 7 ಕೋಟಿ ರೂ. ಒದಗಿಸಿರುವುದನ್ನು ಈಶ್ವರ ಖಂಡ್ರೆ ಸ್ವಾಗತಿಸಿದ್ದಾರೆ.

ಕಲ್ಯಾಣ ಕರ್ನಾಟಕದ 38 ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಮಾದರಿಯಲ್ಲಿ ಒಟ್ಟು1150 ಕಿ.ಮೀ. ರಸ್ತೆಗಳನ್ನು 1000 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ನಿರ್ಧಾರದಿಂದ ಕ.ಕ.ದಲ್ಲಿ ಸಂಪರ್ಕ ಕ್ರಾಂತಿ ಆಗಲಿದೆ ಎಂದು ತಿಳಿಸಿದ್ದಾರೆ.

ಅನುಭವದ ಧಾರೆ:  ಮುಖ್ಯಮಂತ್ರಿಯವರು ಹಣಕಾಸು ಸಚಿವರಾಗಿ ತಾವು ಪಡೆದ ಸುಧೀರ್ಘ ಅನುಭವವನ್ನು ಈ ಬಜೆಟ್ ನಲ್ಲಿ ಧಾರೆ ಎರೆದಿದ್ದು, ಕಲ್ಯಾಣ ರಾಜ್ಯದ ಕನಸು ನನಸು ಮಾಡುವ ಸಂಯಕ್ ನೋಟವನ್ನು ಮುಂದಿಟ್ಟಿದ್ದಾರೆ ಮತ್ತು 1 ಟ್ರಿಲಿಯನ್ ಆರ್ಥಕ ರಾಜ್ಯ ಮಾಡುವ ಪ್ರಯತ್ನ ಮಾಡಿದ್ದಾರೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಶಿಕ್ಷಣ ಇಲಾಖೆಗೆ ಅನುದಾನ : ಸಿಎಂ ಸಿದ್ದರಾಮಯ್ಯಗೆ ಅಭಿನಂದನೆ ಸಲ್ಲಿಸಿದ ಸಚಿವ ಎಸ್ ಮಧು ಬಂಗಾರಪ್ಪ

ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ 15ನೇ ಬಜೆಟ್ ಮಂಡಿಸಿದ್ದು, ಶಾಲಾ/ಕಾಲೇಜುಗಳ ಕೊಠಡಿ ನಿರ್ಮಾಣ, ದುರಸ್ತಿ, ಶೌಚಾಲಯ ನಿರ್ಮಾಣದಂತಹ ಕಾಮಗಾರಿಗಳಿಗೆ 850 ಕೋಟಿ ರೂ. ಅನುದಾನ ನೀಡಿರುವುದಕ್ಕೆ. ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ ಎಸ್ ಮಧು ಬಂಗಾರಪ್ಪ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಈ ಬಾರಿ ಬಜೆಟ್​​ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ 44,422 ಕೋಟಿ ರೂಪಾಯಿ ಮೀಸಲಿಟ್ಟಿದ್ದು, ಶಾಲಾ/ಕಾಲೇಜುಗಳ ಕೊಠಡಿ ನಿರ್ಮಾಣ, ದುರಸ್ತಿ, ಶೌಚಾಲಯ ನಿರ್ಮಾಣದಂತಹ ಕಾಮಗಾರಿಗಳಿಗೆ 850 ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದಾರೆ.

”ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ಮತ್ತು ಅಗತ್ಯ ಮೂಲಸೌಕರ್ಯ ಒದಗಿಸಲು ಸಿ.ಎಸ್.ಆರ್. ಅನುದಾನದಡಿ, ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಆಯ್ದ ಶಾಲೆಗಳ ಉನ್ನತೀಕರಣ. 3 ರಿಂದ 5 ನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ-ಗಣಕ ಕಾರ್ಯಕ್ರಮ. 10 ಕೋಟಿ ರೂ. ವೆಚ್ಚದಲ್ಲಿ ಮರು ಸಿಂಚನ ಕಾರ್ಯಕ್ರಮ; ಆಯ್ದ ಪ್ರೌಢ ಶಾಲೆಗಳಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ವಿಜ್ಞಾನ ಹಾಗೂ ಕಂಪ್ಯೂಟ‌ರ್ ಪ್ರಯೋಗಾಲಯ, ಇಂಟರ್‌ನೆಟ್ ಸೌಲಭ್ಯ ಒದಗಿಸಿರುವು ಖುಷಿ ತಂದಿದೆ.

ಅಲ್ಲದೆ, ದ್ವಿಭಾಷಾ ಮಾಧ್ಯಮ ಶಾಲೆಗಳಾಗಿ 2000 ಸರ್ಕಾರಿ ಪ್ರಾಥಮಿಕ ಶಾಲೆಗಳ ಪರಿವರ್ತನೆ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಹೊಸ ಸರ್ಕಾರಿ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳ ಪ್ರಾರಂಭ, ವಾಣಿಜ್ಯ ಮತ್ತು ವಿಜ್ಞಾನ ವಿಷಯಗಳಲ್ಲಿ ಪದವಿ ಪೂರ್ವ ಕಾಲೇಜುಗಳನ್ನಾಗಿ ರಾಜ್ಯದ 74 ಆದರ್ಶ ವಿದ್ಯಾಲಯಗಳ ಉನ್ನತೀಕರಣ ಮಾಡಿರುವುದು ಶಿಕ್ಷಣ ಇಲಾಖೆಗೆ ಹೆಚ್ಚಿನ ಬಲ ನೀಡಲಿದೆ. ಈ ಬಾರಿಯ ಬಜೆಟ್ ಉತ್ತಮವಾಗಿದೆ” ಎಂದು ಸಚಿವ ಎಸ್ ಮಧು ಬಂಗಾರಪ್ಪ ಅವರು ಪ್ರತ್ರಿಕಾ ಪ್ರಕಟಣೆಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

ರಾಜ್ಯದ ಎಲ್ಲಾ ಜನರ ಅಭಿವೃದ್ಧಿಗೆ ಪೂರಕವಾದ ಬಜೆಟ್:- ಸಚಿವ ಬೈರತಿ ಸುರೇಶ್

ಮುಖ್ಯಮಂತ್ರಿ  ಸಿದ್ದರಾಮಯ್ಯನವರು ದಾಖಲೆಯ 15 ನೇ ಹಾಗೂ 2024-25 ನೇ ಸಾಲಿನ ಬಜೆಟ್ ಅನ್ನು ಮಂಡಿಸಿರುವುದು, ರಾಜ್ಯದ ಎಲ್ಲಾ ವರ್ಗದ ಜನರ ಅಭಿವೃದ್ಧಿಗೆ ಪೂರಕವಾಗಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಶ್ರೀ ಬಿ.ಎಸ್.ಸುರೇಶ್(ಬೈರತಿ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯದ ಸರ್ವ ಜನರ ಆರ್ಥಿಕ ಮತ್ತು ಸಾಮಾಜಿಕ ಏಳಿಗೆಯನ್ನು ಗಮನದಲ್ಲಿಟ್ಟುಕೊಂಡು ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಿದ್ದಾರೆ. 2023 ರ ವಿಧಾನಸಭಾ ಚುನಾವಣೆ ವೇಳೆ ನಮ್ಮ ಕಾಂಗ್ರೆಸ್ ಪಕ್ಷ ನೀಡಿದ್ದ ಪಂಚ ಗ್ಯಾರೆಂಟಿಗಳನ್ನು ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಜಾರಿಗೊಳಿಸಿದ್ದ ನಮ್ಮ ಬದ್ಧತೆಯನ್ನು ತೋರಿಸುತ್ತದೆ ಎಂದು ಸಚಿವ ಬೈರತಿ ಸುರೇಶ್ ಅವರು ಹೇಳಿದ್ದಾರೆ.

ರಾಜ್ಯದ ರಾಜಧಾನಿ ಬೆಂಗಳೂರನ್ನು ಅಭಿವೃದ್ಧಿ ಪಡಿಸಲು ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಬೆಂಗಳೂರು ಬಿಸಿನೆಸ್ ಕಾರಿಡಾರ್ ನಿರ್ಮಾಣ, ಮೆಟ್ರೋ ರೈಲು ಮಾರ್ಗ ವಿಸ್ತರಣೆ, ರಸ್ತೆಗಳ ಅಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು 2024-25 ನೇ ಸಾಲಿನ ಬಜೆಟ್ ನಲ್ಲಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಘೋಷಿಸಿರುವುದು ರಾಜಧಾನಿ ಬೆಂಗಳೂರು ಮತ್ತಷ್ಟು ಅಭಿವೃದ್ಧಿ ಹೊಂದಲು ಸಹಕಾರಿಯಾಗಿದೆ ಎಂದು ಸಚಿವ ಬೈರತಿ ಸುರೇಶ ತಿಳಿಸಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ನಗರಗಳ ಅಭಿವೃದ್ಧಿಗೆ 2024-25 ಸಾಲಿನ ಬಜೆಟ್ ನಲ್ಲಿ 18155 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದು, ರಾಜ್ಯದ ಇತರೆ ಹತ್ತು ಮಹಾನಗರ ಪಾಲಿಕೆಗಳ ಅಭಿವೃದ್ಧಿಗಾಗಿ 200 ಕೋಟಿ ರೂಪಾಯಿಗಳನ್ನು ಘೋಷಿಸಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಚಿವ ಬೈರತಿ ಸುರೇಶ್ ಅಭಿ‌ನಂದಿಸಿದ್ದಾರೆ.

ಮೈಸೂರು, ‌ಮಂಗಳೂರು, ಹುಬ್ಬಳ್ಳಿ ಧಾರವಾಡ, ಬೆಳಗಾವಿ ಕಲಬುರಗಿ, ಕೆಜಿಎಫ್, ತುಮಕೂರಿನ ವಸಂರನರಸಾಪುರ, ಬಳ್ಳಾರಿ ನಗರಗಳ ಸಮೀಪ ಇಂಟಿಗ್ರೇಟೆಡ್‌ ಟೌನ್ ಶಿಪ್ ನಿರ್ಮಾಣ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿರುವುದು ಸ್ವಾಗತಾರ್ಹ ಎಂದು ಸಚಿವ ಬೈರತಿ ಸುರೇಶ್ ಹೇಳಿದ್ದಾರೆ.

ಮೈಸೂರು ಮಹಾನಗರದ ಸಂಚಾರ ದಟ್ಟಣೆ ನಿಯಂತ್ರಣ ಮಾಡಲು ಪೆರಿಫಿರಲ್ ರಿಂಗ್ ರೋಡ್ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಮೈಸೂರು ನಗರದ ಲ್ಯಾನ್ಸಡೌನ್ ಕಟ್ಟಡ ಮತ್ತು ದೇವರಾಜ ಮಾರುಕಟ್ಟೆಯನ್ನು ಪಾರಂಪರಿಕ ಶೈಲಿಯಲ್ಲಿ ನಿರ್ಮಿಸಲಾಗುತ್ತದೆ.

ರಾಜ್ಯದ ನಗರ ಪ್ರದೇಶಗಳಲ್ಲಿ ವಾಸಿಸುವ ಜನರ ಮನೆಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ 2024-25 ನೇ ಸಾಲಿನಲ್ಲಿ ‌7.5 ಲಕ್ಷ ಮನೆಗಳಿಗೆ 200 ಕೋಟಿ ರೂಪಾಯಿ ವೆಚ್ಚದಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಗುರಿ ಹೊಂದಿದೆ

ಬೆಂಗಳೂರು ಸೇರಿದಂತೆ ರಾಜ್ಯದ ಇತರೆ 10 ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಣಿಜ್ಯ ಮತ್ತು ವ್ಯಾಪಾರ ವಹಿವಾಟು ಉತ್ತೇಜಿಸುವ ಸಲುವಾಗಿ ಬೆಳಗಿನ ಜಾವ ಒಂದು ಗಂಟೆ ವರೆಗೆ ತೆರೆಯಲು ವಿಸ್ತರಿಸಲಾಗಿದೆ.

ಸಾಮಾಜಿಕ ಸಮಾನತೆ, ಆರ್ಥಿಕ ಶಿಸ್ತು, ರಾಜಸ್ವ, ಸಂಪನ್ಮೂಲ ಕ್ರೋಡೀಕರಣಕ್ಕೆ ಆದ್ಯತೆ ನೀಡುವ ಮೂಲಕ ಜನಮನ್ನಣೆಯನ್ನು ಗಳಿಸುವ ವಿಶಿಷ್ಠವಾದ ಆಯವ್ಯಯ ಇದಾಗಿದೆ ಎಂದು ಸಚಿವ ಬೈರತಿ ಸುರೇಶ ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಅಭಿನಂದನೆ ಸಲ್ಲಿಸಿದ ಸಚಿವ ಡಾ.ಶರಣಪ್ರಕಾಶ್ ಪಾಟೀಲ್

ಹಲವು ದಿನಗಳ  ಬೇಡಿಕೆಯಂತೆ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಇನ್ನಷ್ಟು ದಕ್ಷತೆ ತರುವ ನಿಟ್ಟಿನಲ್ಲಿ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವನ್ನು ಆಯುಕ್ತಾಲಯವನ್ನಾಗಿ ಉನ್ನತೀಕರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿರುವುದಕ್ಕೆ  ವೈದ್ಯಕೀಯ ಶಿಕ್ಷಣ ಜೀವನೋಪಾಯ  ಹಾಗೂ ಕೌಶಲ್ಯಾಭಿವೃಧಿ ಮತ್ತು ರಾಯಚೂರು ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅಭಿನಂದನೆ ಸಲ್ಲಿಸಿದ್ದಾರೆ.

ವೈದ್ಯಕೀಯ ಶಿಕ್ಷಣ ಕ್ಷೇತ್ರವು ಸರ್ಕಾರಿ ವಲಯವೆಂದು ವ್ಯಾಪಕ ಬೆಳವಣಿಗೆ ಹೊಂದಿದ್ದು, ಇಲಾಖೆ ಕಾರ್ಯ ನಿರ್ವಹಣೆಯಲ್ಲಿ ಇನ್ನಷ್ಟು ದಕ್ಷತೆ ತರುವ  ಕಾರಣಕ್ಕಾಗಿ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವನ್ನು ಆಯುಕ್ತಾಲಯವನ್ನಾಗಿ ಉನ್ನತೀಕರಿಸಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದಿದ್ದಾರೆ.

ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ವೈದ್ಯಕೀಯ ಕಾಲೇಜುಗಳ ನಿರ್ಮಾಣ  ಮತ್ತು ಉಪಕರಣಗಳ ಖರೀದಿಗಾಗಿ ರೂ. 400 ಕೋಟಿ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣಕ್ಕಾಗಿ  ರೂ. 350 ಕೋಟಿ, ಮೈಸೂರಿನಲ್ಲಿರುವ 40 ಹಾಸಿಗೆ ಸಾಮರ್ಥ್ಯದ ನೆಪ್ರೋ ಯೂರಾಲಜಿ ಆಸ್ಪತ್ರೆ, 100 ಹಾಸಿಗೆ ಸಾಮಥ್ರ್ಯದ ಆಸ್ಪತ್ರೆಯನ್ನಾಗಿ  ಉನ್ನತೀಕರಿಸಲು ಮುಂದಾಗಿರುವುದು ಉತ್ತಮ ನಿರ್ಧಾರ ಎಂದು ಪಾಟೀಲ್ ಹೇಳಿದ್ದಾರೆ.

ಕಲಬುರಗಿಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಕ್ಕಳ ಆರೋಗ್ಯ ಘಟಕವನ್ನು ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ, ಬೆಂಗಳೂರು ಇವರ ತಾಂತ್ರಿಕ ನೆರವಿನೊಂದಿಗೆ ಸ್ಥಾಪನೆ.  ಗದಗ, ಕೊಪ್ಪಳ ಹಾಗೂ ಚಾಮರಾಜನಗರದಲ್ಲಿ 450 ಹಾಸಿಗೆ ಸಾಮರ್ಥ್ಯದ ವೈದ್ಯಕೀಯ ಉಪಕರಣ ಮತ್ತು ಪೀಠೋಪಕರಣಗಳ ಖರೀದಿಗಾಗಿ 150 ಕೋಟಿ ರೂ. ಅನುದಾನ ಒದಗಿಸಿದ್ದಾರೆ ಎಂದು ಹೇಳಿದ್ದಾರೆ.  ಬೆಂಗಳೂರಿನ ನೆಪ್ರೊ ಯೂರಾಲಜಿ ಸಂಸ್ಥೆಯ ಶಸ್ತ್ರ ಚಿಕಿತ್ಸೆ ವಿಭಾಗದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ರೋಬೊಟಿಕ್ ಯಂತ್ರದ ಮೂಲಕ ಉತ್ತಮ  ಚಿಕಿತ್ಸೆ ನೀಡಲು ಕ್ರಮ.  ವೈದ್ಯಕೀಯ ಕಾಲೇಜಿನ ಆಸ್ಪತ್ರೆ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ 114 ಮಾಡೂಲರ್ ಓಟಿಗಳನ್ನು 177 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಮುಂದಾಗಿರುವುದು ಆಶಾದಾಯಕ ಬೆಳವಣಿಗೆ ಎಂದಿದ್ದಾರೆ.

ಗದಗ ವೈದ್ಯಕೀಯ ಸಂಸ್ಥೆಯಲ್ಲಿ ಕ್ಯಾಥ್ಲಬ್ ಸೌಲಭ್ಯದೊಂದಿಗೆ ಸೂಪರ್ ಸ್ಪೆಷಾಲಿಟಿ ಕಾರ್ಡಿಯಾಕ್ ಯೂನಿಟ್ ಪ್ರಾರಂಭ, ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಬರುವ ಸಂಸ್ಥೆಗಳಲ್ಲಿ 64  ಅನೇಸ್ತೇಷಿಯಾ   ವರ್ಕ್ ಸ್ಟೇಷನ್‍ ಗಳನ್ನು 34 ಕೋಟಿ ರೂ. ವೆಚ್ಚದಲ್ಲಿ ಖರೀದಿಸಿ ಅಳವಡಿಕೆ, ಈಗಾಗಲೇ ನಾಲ್ಕು ಜಿಲ್ಲೆಗಳಲ್ಲಿ ಅಸ್ತಿತ್ವದಲ್ಲಿರುವ ಹ್ಯೂಮನ್ ಮಿಲ್ಕ್ ಬ್ಯಾಂಕ್‍ ಗಳನ್ನು ಇನ್ನು ಮುಂದೆ  ಮೈಸೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಸ್ಥಾಪನೆ  ಮಾಡಲು ಹೊರಟಿರುವುದು ಉತ್ತಮ ಬೆಳವಣಿಗೆ ಎಂದು ಪಾಟೀಲ್‌ ಹೇಳಿದ್ದಾರೆ.

ಕೊಡಗು ವೈದ್ಯಕೀಯ ಸಂಸ್ಥೆಯಲ್ಲಿ ಅಪಾಯಕಾರಿ ಸಾಂಕ್ರಾಮಿಕ ರೋಗ, ಸೋಂಕುಗಳನ್ನು ಪತ್ತೆ ಹಚ್ಚಲು ವೈರಲ್ ರಿಸರ್ಚ್ ಮತ್ತು ಡಯಾಗ್ನಸ್ಟಿಕ್ ಲ್ಯಾಬರೋಟರಿ ನಿರ್ಮಾಣ, ಚಿತ್ರದುರ್ಗ ವೈದ್ಯಕೀಯ ವಿಜ್ಞಾನ  ಸಂಸ್ಥೆಯಲ್ಲಿ ಅಗತ್ಯವಿರುವ ಹೊಸ ವೈದ್ಯಕೀಯ ಕಟ್ಟಡ, ವಿದ್ಯಾರ್ಥಿ ವಸತಿ ನಿಲಯ, ಸಿಬ್ಬಂದಿ, ವಸತಿ ಗೃಹ ನಿರ್ಮಾಣ ಕಾರ್ಯ ಪೂರ್ಣಗೊಳಿಸುತ್ತೇವೆ ಎಂದು ಹೇಳಿದ್ದಾರೆ.

ಇನ್ನು ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ಮೈಸೂರು ವೈದ್ಯಕೀಯ ಮಹಾವಿದ್ಯಾಲಯದ  ಶತಮಾನೋತ್ಸವದ ನೆನಪಿಗಾಗಿ ಕೆ.ಆರ್ ಆಸ್ಪತ್ರೆಯಲ್ಲಿ 75 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಹೊರರೋಗಿ ವಿಭಾಗದ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿರುವುದು ಸ್ವಾಗತಾರ್ಹ ಎಂದು ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Key words: CM Siddaramaiah – Bombat- Budget: Appreciated – Minister.