“ಬಿಜೆಪಿ ಸಂಸದ ಪ್ರತಾಪ್ ಸಿಂಹ ರವರ ಆಲೋಚನೆ ಮತ್ತು ಅರಿವಿನ ಮಟ್ಟು ಕೆಳಗಿದೆ -ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ಟೀಕೆ

ಮೈಸೂರು,ಜುಲೈ,14,2022(www.justkannada.in): ಬಿಜೆಪಿ ಸಂಸದ ಪ್ರತಾಪ್ ಸಿಂಹ ರವರ ಆಲೋಚನೆ ಮತ್ತು ಅರಿವಿನ ಮಟ್ಟು ಕೆಳಗಿದೆ  ಎಂದು ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ಟೀಕಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಆರ್‌ಎಸ್‌ಎಸ್ ಸಂಘಟನೆಯ ನೈಜ ಸ್ವರೂಪ ಮತ್ತು ಉದ್ದೇಶವನ್ನು ವಿಮರ್ಶಾತ್ಮಕವಾಗಿ ಗಮನಿಸಿ, ಜನರ ಮುಂದೆ ಸತ್ಯ ಬಿಚ್ಚಿಟ್ಟು ಕೋಮವಾದೀಕರಣಗೊಳ್ಳುತ್ತಿರುವ ಮನಸ್ಸುಗಳನ್ನು ಸಾಹಿತಿ ದೇವನೂರು ಮಹಾದೇವ ಜಾಗೃತಗೊಳಿಸಿದ್ದಾರೆ. ಇವರು ತಮ್ಮ ಆರ್‌ಎಸ್‌ಎಸ್ ಆಳ ಮತ್ತು ಅಗಲ ಕೃತಿಯ ಮೂಲಕ ಕನ್ನಡ ನಾಡಿನಲ್ಲಿ ನವ ಬೌದ್ಧಿಕ ಸಂಚಲನೆಗೂ ಕಾರಣರಾಗಿದ್ದಾರೆ.

ವಿಚಾರ ಜಾಗೃತಿಯ ಇಂತಹ ಕೃತಿಯ ಕುರಿತು ಬಿಜೆಪಿ ಸಂಸದ ಪ್ರತಾಪ್‌ಸಿಂಹ ಕೀಳಾಗಿ ಅನ್ನಿಸಿಕೆ ಮುಂದಿಟ್ಟು ಇದನ್ನು ವಿಕೃತಿ ಎಂದು ಕರೆಯುವ ಮೂಲಕ ತಮ್ಮ ಆಲೋಚನೆ ಮತ್ತು ಅರಿವಿನ ಮಟ್ಟ ಬಹಳ ಕೆಳಗಿದೆ ಎನ್ನುವುದನ್ನು ತೋರ್ಪಡಿಸಿಕೊಂಡಿದ್ದಾರೆ.

ಸಂಘ ಪರಿವಾರದವರು ಸಾಮಾಜಿಕ ಜಾಲತಾಣಗಳ ಮೂಲಕ ಯುವ ಮನಸ್ಸುಗಳನ್ನು ಕಲುಷಿತಗೊಳಿಸುತ್ತಿದ್ದಾರೆ.  ವ್ಯಾಟ್ಯಾಪ್, ಫೇಸ್‌ಬುಕ್ ಇನ್ನಿತರ ಮಾಧ್ಯಮಗಳ ಮೂಲಕ ಕೋಮುವಾದಿ ಅಜೆಂಡಾಗಳನ್ನು ಬಿತ್ತುತ್ತಿದ್ದಾರೆ. ಇದನ್ನು ಬಗ್ಗು ಬಡಿಯಲು ದೇವನೂರು ತಮ್ಮ ಆಳ ಓದು ಮತ್ತು ಅಪಾರ ಕಾಳಜಿಯ ಫಲವಾಗಿ, ಎಲ್ಲರೂ ಸುಲಭವಾಗಿ ಗ್ರಹಿಸಿಕೊಳ್ಳಬಹುದಾದ ಕಿರು ಕೃತಿ ಮುಂದಿಟ್ಟಿದ್ದಾರೆ. ಈ ಕೃತಿಯಲ್ಲಿ ಆರ್‌ಎಸ್‌ಎಸ್ ಸಂಘಟನೆಯ ವಿಭಜನಕಾರಿ ಉದ್ದೇಶಗಳು   ಬಟಬಯಲಾಗಿದೆ.

ಸಂಶೋಧನೆ ಎಂದರೇನೆಂಬುದನ್ನು ಅರಿಯದ, ಸತ್ಯವನ್ನು ಅರ್ಥೈಸಿಕೊಳ್ಳುವ ಶಕ್ತಿಯಿಲ್ಲದ ಹಾಗು ಸದಾ ಸುಳ್ಳು ಪ್ರಚಾರದ ಮೂಲಕವೇ ಅಸ್ತಿತ್ವ ಕಂಡುಕೊಂಡಿರುವ ಪ್ರತಾಪ್‌ಸಿಂಹ ಅವರಂತಹ ಕನಿಷ್ಟ ನಡವಳಿಕೆಯ ನಾಯಕರಿಂದ ಇಂತಹ ಪ್ರತಿಕ್ರಿಯೆಯಲ್ಲದೇ ಬೇರೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ.

ಪೊಳ್ಳು ವ್ಯಕಿತ್ವದ ಇಂತಹ ನಾಯಕರು, ಧೈರ್‍ಯವಿದ್ದರೆ ಮಹಾದೇವ ಅವರ ಕೃತಿಯಲ್ಲಿರುವ ಅಂಶಗಳು ಸುಳ್ಳು ಎಂದು ಸಾಬೀತು ಮಾಡಬೇಕಿತ್ತು.  ಇಂತಹ ಸವಾಲು ಸ್ವೀಕರಿಸುವುದು ಬಿಟ್ಟು, ದೇವನೂರು ಮಹದೇವ ಅವರನ್ನು ವಯಕ್ತಿಕವಾಗಿ ಒಂದು ಪಕ್ಷಕ್ಕೆ ಸೀಮಿತರಾಗಿ ಬಿಂಬಿಸುವುದು, ಆಳು ಎನ್ನುವುದು ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ. ಸೃಜನಶೀಲತೆಯ ಅರಿವಿಲ್ಲದ ಅಡಿಯಾಳು ಮನಸ್ಥಿತಿಯ ವ್ಯಕ್ತಿಗಳಷ್ಟೇ ಇಂತಹ ಟೀಕೆಗಳನ್ನು ಮಾಡಲು ಸಾಧ್ಯ.

ಇಷ್ಟಕ್ಕೂ ದೇಮ ಅವರಂತಹ ಮೇರುವಿನ ಬಗ್ಗೆ ಮಾತನಾಡುತ್ತಿರುವ  ಈ ಸಂಸದರ ವ್ಯಕ್ತಿತ್ವವಾದರೂ ಎಂತದ್ದು, ಯಾವೆಲ್ಲಾ ಪ್ರಕರಣಗಳಿಗೆ ಇವರು ನ್ಯಾಯಾಲಯದಿಂದ ತಡೆ ತಂದಿದ್ದಾರೆ, ಎಷ್ಟೆಲ್ಲಾ ಇವರ ಸುಳ್ಳುಗಳು ಸಮಾಜದಲ್ಲಿ ಹರಿದಾಡುತ್ತಿವೆ, ಇವರು ಹೇಗೆ ಸ್ವವೈಭವೀಕರಣದ ವ್ಯಸನ,  ಹಲವು ದೌರ್ಬಲ್ಯಗಳನ್ನು ಅಂಟಿಸಿಕೊಂಡಿದ್ದಾರೆ ಎನ್ನುವುದು  ಜಗಜ್ಜಾಹೀರಾಗಿರುವ ವಿಷಯ.

ಸೀಮಿತ ಅರಿವು ಮತ್ತು ಅಲ್ಪ ವಿದ್ಯೆಯ ಅಹಂಕಾರಿಗಳಿಗೆ ಅಧಿಕಾರ  ಸಿಕ್ಕಿದರೆ ಏನೆಲ್ಲಾ ಆಗಬಹುದು ಎನ್ನುವುದರ ಉದಾಹರಣೆಗಳನ್ನು ಪ್ರತಾಪ್‌ಸಿಂಹ ಅವರ ಮೂಲಕ ನಾವು ನೋಡುತ್ತಿದ್ದೇವೆ. ಸಿಕ್ಕಿರುವ ಅಧಿಕಾರ ಜನಹಿತಕ್ಕೆ ಬಳಕೆಯಾಗುಬೇಕು. ಅದು ಬಿಟ್ಟು ಮಂಗನಕೈಗೆ ಮಾಣಿಕ್ಯ ಸಿಕ್ಕಂತೆ ಅಯೋಮಯ ಕಾರ್‍ಯಗಳಿಗೆ ಬಳಕೆಯಾಗುತ್ತಿರುವುದು ದುರಂತ ಎಂದು ಕಿಡಿಕಾರಿದ್ದಾರೆ.

Key words: kpcc-spokesperson-HA Venkatesh- mp- prathap simha