ಜಾತಿಗಣತಿ ತೃಪ್ತಿ ತಂದಿದೆ: ಸಮೀಕ್ಷೆ ಪೂರ್ಣಗೊಳ್ಳದಿದ್ರೆ ಅವಧಿ ವಿಸ್ತರಣೆ- ಸಿಎಂ ಸಿದ್ದರಾಮಯ್ಯ

ಮೈಸೂರು,ಅಕ್ಟೋಬರ್,3,2025 (www.justkannada.in): ಜಾತಿ ಜನಗಣತಿ ಸಮೀಕ್ಷೆ ಮೂರು ದಿನಗಳಲ್ಲಿ ಮುಗಿಸುತ್ತೇವೆ. ಮೂರು ದಿನಗಳಲ್ಲಿ ಸಮೀಕ್ಷೆ ಪೂರ್ಣಗೊಳ್ಳದಿದ್ದರೆ ದಿನಾಂಕ ಮುಂದುವರೆಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ,  ಜಾತಿ ಜನಗಣತಿ ತೃಪ್ತಿ ತಂದಿದೆ. ಮೂರು ದಿನಗಳಲ್ಲಿ ಸಮೀಕ್ಷೆ ಮುಗಿಯುತ್ತದೆ. ಈವರೆಗೆ ಮೂರು ಕೋಟಿ ಜನರ ಸಮೀಕ್ಷೆ ಮುಗಿದಿದೆ. ಸುಮಾರು 80 ಲಕ್ಷ ಮನೆಗಳ ಸರ್ವೆ ಕಾರ್ಯ ಪೂರ್ಣವಾಗಿದೆ. ಇದು ಕೇವಲ ಜಾತಿ ಗಣತಿ ಅಲ್ಲ. ಇದು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ವರದಿ. ಸ್ವತಂತ್ರ ಬಂದ ‌ಮೇಲೆ ಜನರ ಜೀವನ ಮಟ್ಟ ಹೇಗಿದೆ ಎಂಬುದರ ಕುರಿತು ವರದಿ ಸಿದ್ಧಪಡಿಸುತ್ತೇವೆ. ಈ ಅಂಕಿ ಅಂಶಗಳ ಆಧಾರದ ಮೇಲೆ ಸರ್ಕಾರ ಯೋಜನೆ ರೂಪಿಸಲು ಸಹಕಾರಿ ಆಗುತ್ತದೆ. ಮೂರು ದಿನಗಳಲ್ಲಿ ಸಮೀಕ್ಷೆ ಪೂರ್ಣಗೊಳ್ಳದಿದ್ದರೆ ದಿನಾಂಕ ವಿಸ್ತರಣೆ ಮಾಡುತ್ತೇವೆ ಎಂದರು.

ಜಿಎಸ್ ಟಿ ಇಳಿಕೆ ಕೇಂದ್ರ ಸರ್ಕಾರದ ಹೊಸ ನಾಟಕ

ಜಿಎಸ್ ಟಿ ಇಳಿಕೆ ಕೇಂದ್ರ ಸರ್ಕಾರದ ಹೊಸ ನಾಟಕ. ಅವರೇ ಬೆಲೆ  ಏರಿಸುತ್ತಾರೆ. ಅವರೇ ಬೆಲೆ ಇಳಿಸುತ್ತಾರೆ. ಇದನ್ನ ಸಂಭ್ರಮಪಡಿ ಅಂತ ಕೂಡ ಹೇಳುತ್ತಾರೆ. ಕಳೆದ ಎಂಟು ವರ್ಷಗಳ ತೆರಿಗೆ ಹೆಚ್ಚಳ ಹಣ ಕೊಡ್ತಾರಾ? ಚುನಾವಣೆ ಬಂದ ತಕ್ಷಣ ಇಂತಹ ಡ್ರಾಮಾ ಮಾಡುತ್ತಾರೆ. ಬಿಹಾರ ಚುನಾವಣೆಯನ್ನ ಗಮನದಲ್ಲಿಟ್ಟುಕೊಂಡು ಈ  ರೀತಿ ಇಳಿಕೆ ಮಾಡಿದ್ದಾರೆ. ಅದನ್ನ ಸಂಭ್ರಮಿಸಿ ಅಂತ ಹೇಳುತ್ತಾರೆ. ಜನರನ್ನ ಬಿಜೆಪಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಮಗೆ ಕೊಡುವ ಪಾಲನ್ನ ನೀಡಲು ನಿರಾಕರಿಸುತ್ತಾರೆ. ಕೇವಲ ಚುನಾವಣಾ ರಾಜಕೀಯಕ್ಕಾಗಿ ಈ ರೀತಿ ಪ್ಲಾನ್ ಮಾಡುತ್ತಾರೆ. ಇದೆಲ್ಲ ಕೇಂದ್ರ‌ ಸರ್ಕಾರದ ಗಿಮಿಕ್ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದರು.

ಆರ್.ಅಶೋಕ್ ಆರ್ ಎಸ್ ಎಸ್ ನ ಕೈಗೊಂಬೆ

ಸಿಎಂಗೆ ರಾಜ್ಯದಲ್ಲಿ ರೈತರ ಸಮಸ್ಯೆ ಗೊತ್ತಿಲ್ಲ. ಸರ್ಕಾರ ಇದ್ದರೂ ಅಷ್ಟೇ, ಸತ್ತರೂ ಅಷ್ಟೇ ಎಂಬ ಆರ್. ಅಶೋಕ್ ಹೇಳಿಕೆಗೆ ಕಿಡಿ ಕಾರಿದ ಸಿಎಂ ಸಿದ್ದರಾಮಯ್ಯ, ವಿಪಕ್ಷ ನಾಯಕ ಆರ್.ಅಶೋಕ್ ಆರ್ ಎಸ್ ಎಸ್ ನ ಕೈಗೊಂಬೆ. ಆರ್ ಎಸ್ ಎಸ್ ಏನು ಹೇಳುತ್ತಾರೆ ಅದನ್ನ ಹೇಳುತ್ತಾನೆ. ಆರ್. ಅಶೋಕ್ ಬೆಂಗಳೂರು ಸಿಟಿಯಲ್ಲಿ ಹುಟ್ಟಿದವರು. ಅವನು ರೈತನೂ ಅಲ್ಲ, ಅವನಿಗೆ ಏನೂ ಗೊತ್ತೂ ಇಲ್ಲ. ಅವನನ್ನ ಶ್ಯಾಡೋ ಸಿಎಂ ಅಂತಾರಲ್ಲ. ಅದನ್ನ ಅವನನ್ನೇ ಕೇಳಬೇಕು ಅವನು ಶ್ಯಾಡೋ ‌ಸಿಎಂ ಅಂತಾ? ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

Key words: Caste census, Extension, time, survey, CM, Siddaramaiah