ಬೆಂಗಳೂರು,ಜೂನ್,26,2026 (www.justkannada.in): ಸರ್ಕಾರದ ಘನತೆ ಉಳಿಸುವ ವೃತ್ತಿಪರತೆ ಪ್ರದರ್ಶಿಸಿ. ಇಲ್ಲದಿದ್ದರೆ ಕಠಿಣ ಕ್ರಮ ಅನಿವಾರ್ಯವಾಗುತ್ತದೆ ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಸಿಎಂ ಡಿ.ಕೆ ಶಿವಕುಮಾರ್ ಸೂಚಿಸಿದರು.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಶುಕ್ರವಾರ ನಡೆದ ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಅಧಿಕಾರಿಗಳಿಗೆ ಕೆಲ ಸೂಚನೆಗಳನ್ನು ನೀಡಿದರು.
ನೀವುಗಳು ಘನತೆ ಉಳಿಸಿಕೊಂಡರೆ ಸರ್ಕಾರದ ಘನತೆ ಹೆಚ್ಚುತ್ತದೆ. ನೀವು ಸರ್ಕಾರದ ಘನತೆಗೆ ಧಕ್ಕೆ ತರುವ ಕೆಲಸ ಮಾಡಿದರೆ ನಾವು ನೋಡುತ್ತಾ ಕೂರುವುದಿಲ್ಲ. ಅಬಕಾರಿ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಬೇರೆ ಇಲಾಖೆಗೆ ವರ್ಗಾವಣೆ ಮಾಡೋದಕ್ಕೆ ಆಗುವುದಿಲ್ಲ ಎಂದುಕೊಳ್ಳಬೇಡಿ. ಅಗತ್ಯಬಿದ್ದರೆ ವರ್ಗಾವಣೆ ಮಾಡಲು ಅಗತ್ಯವಾದ ಕಾನೂನು ಬದಲಾವಣೆಯನ್ನೂ ತರಲು ಅಕಾಶಗಳಿವೆ. ಬಹಳ ಎಚ್ಚರಿಕೆಯಿಂದ ಕೆಲಸ ಮಾಡಿ ಎನ್ನುವ ಸ್ಪಷ್ಟ ಸೂಚನೆ ಕೊಡುತ್ತಿದ್ದೇನೆ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಯಾರನ್ನೂ, ಯಾವ ಪ್ರಯತ್ನವನ್ನೂ ನಾನು ಸಹಿಸುವುದಿಲ್ಲ. ಇಲಾಖೆಯಲ್ಲಿ ಹೊಸದಾಗಿ AIB ಪದ್ಧತಿ ಜಾರಿಯಾದ ಬಳಿಕ ನಿರೀಕ್ಷಿತ ಪ್ರಮಾಣದಲ್ಲಿ ಬೆಳವಣಿಗೆ ಆಗಿದೆ. ಹೊಸದಾಗಿ 574 ಸನ್ನದುಗಳನ್ನು ಇ-ಹರಾಜು ಹಾಕಲು ನಿರ್ಧರಿಸಲಾಗಿದೆ. ಪರವಾನಗಿ ನವೀಕರಣ ಮೊತ್ತವನ್ನು ಎರಡು ಕಂತುಗಳಲ್ಲಿ ಪಾವತಿಸಲು ಅವಕಾಶ ಕಲ್ಪಿಸಿ. ಅಕ್ಕ ಪಕ್ಕದ ರಾಜ್ಯಗಳಲ್ಲಿ ಇಲಾಖೆ ಹೇಗೆ ನಡೆಯುತ್ತಿದೆ ಎನ್ನುವ ವರದಿ ನೋಡಿದ್ದೇನೆ. ಇಲಾಖೆಗೆ ಕೊಟ್ಟಿರುವ ಗುರಿ ತಲುಪಲು ಶ್ರಮಿಸಬೇಕು ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ನೀವುಗಳು ಘನತೆ ಉಳಿಸಿಕೊಂಡರೆ ಇಲಾಖೆಯ ಘನತೆ ಉಳಿಯುತ್ತದೆ. ಇಲಾಖೆ ಘನತೆ ಉಳಿದರೆ ಸರ್ಕಾರದ ಘನತೆ ಹೆಚ್ಚುತ್ತದೆ. ಸರ್ಕಾರದ ಘನತೆ ಉಳಿಸುವ ವೃತ್ತಿಪರತೆ ಪ್ರದರ್ಶಿಸಿ. ಇಲ್ಲದಿದ್ದರೆ ಕಠಿಣ ಕ್ರಮ ಅನಿವಾರ್ಯವಾಗುತ್ತದೆ ಎಂದು ಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದರು.
Key words: CM, DK Shivakumar, instructions, meeting, Excise Department






