ರಾಮನಗರ, ಜೂನ್ 23,2026 (www.justkannada.in): ಸೋಮವಾರ ಲಿಂಗೈಕ್ಯರಾದ ಕನಕಪುರ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿಗಳ ಪಾರ್ಥಿವ ಶರೀರಕ್ಕೆ ಸಿಎಂ ಡಿ.ಕೆ ಶಿವಕುಮಾರ್ ಅವರು ದೇಗುಲ ಮಠದ ಆವರಣದಲ್ಲಿ ಅಂತಿಮ ನಮನ ಸಲ್ಲಿಸಿದರು.
ಮುಮ್ಮಡಿ ನಿರ್ವಾಣ ಸ್ವಾಮೀಜಿಗಳ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿದ ಸಿಎಂ ಡಿಕೆ ಶಿವಕುಮಾರ್ ನಂತರ ಪಾದುಕೆಗಳಿಗೆ ನಮಸ್ಕರಿಸಿದರು. ತದನಂತರ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ, ಗೌರವ ಸಲ್ಲಿಸಿದರು. ಬಳಿಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಷ್ಟ್ರಧ್ವಜವನ್ನು ದೇಗುಲಮಠದ ಕಿರಿಯ ಸ್ವಾಮೀಜಿಗಳಿಗೆ ಹಸ್ತಾಂತರಿಸಿದರು.
ಒಡೆದ ದುಃಖದ ಕಟ್ಟೆ, ಬಿಕ್ಕಿದ ಸಿಎಂ
ಕಿರಿಯ ಸ್ವಾಮೀಜಿಗಳಿಗೆ ಧ್ವಜ ಹಸ್ತಾಂತರ ಮಾಡುವ ವೇಳೆ ಭಾವುಕರಾದ ಸಿಎಂ ಶಿವಕುಮಾರ್ ಅವರು ಬಿಕ್ಕಿ, ಬಿಕ್ಕಿ ಅಳುತ್ತಲೇ ರಾಷ್ಟ್ರಧ್ವಜವನ್ನು ನೀಡಿದರು. ನಂತರ ಲಿಂಗೈಕ್ಯ ಮಹಾಸ್ವಾಮಿಗಳ ಪಾದುಕೆಗಳಿಗೆ ನಮಸ್ಕರಿಸಿ ಕಿರಿಯ ಶ್ರೀಗಳಿಗೆ ನಮಿಸಿದರು. ಇದು ಶ್ರೀಗಳ ಅಂತಿಮ ದರ್ಶನಕ್ಕೆ ನೆರೆದಿದ್ದ ಮಠದ ಭಕ್ತಾಧಿಗಳ ಕಣ್ಣುಗಳನ್ನು ತೇವಗೊಳಿಸಿತು. ನಂತರ ಶ್ರೀಗಳ ಗದ್ದುಗೆ ಸ್ಥಳಕ್ಕೆ ತೆರಳಿ ವಿಭೂತಿ ಗಟ್ಟಿಗಳನ್ನು ಅರ್ಪಿಸಿ ಪೂಜೆ ಸಲ್ಲಿಸಿದರು.
ಭಾವುಕರಾದ ಬಗ್ಗೆ ಮಾಧ್ಯಮಗಳು ಕೇಳಿದಾಗ, “ಭಕ್ತನಿಗೂ ಹಾಗೂ ಭಗವಂತನಿಗೂ ಇರುವ ಸಂಬಂಧ ಇದು” ಎಂದರು.
ಚುನಾವಣಾ ಖರ್ಚಿಗೆ ಆಶೀರ್ವಾದ ರೂಪದಲ್ಲಿ ಹಣ ನೀಡಿದ್ದರು
ಮಠದ ಆವರಣದಲ್ಲಿ ನೆರೆದಿದ್ದ ಮಠದ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಹಾಗೂ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಡಿ.ಕೆ.ಶಿವಕುಮಾರ್ ಅವರು, “ಶ್ರೀಗಳು ಅತ್ಯಂತ ಕಡಿಮೆ ಮಾತನಾಡುತ್ತಿದ್ದರು. ಆದರೆ ಮೌನವಾಗಿಯೇ ಅಚ್ಚುಕಟ್ಟಾಗಿ ಕೆಲಸಗಳನ್ನು ನೆರವೇರಿಸುತ್ತಿದ್ದರು. ಚುನಾವಣೆ ಮುಂಚಿತವಾಗಿ ಅವರ ಆಶೀರ್ವಾದ ಪಡೆಯಲು ಹೋದ ಸಂದರ್ಭದಲ್ಲಿ ಅನಾರೋಗ್ಯದಿಂದ ಹಾಸಿಗೆಯಲ್ಲಿ ಮಲಗಿದ್ದರೂ ಸಹ ಹಣದ ಕಟ್ಟನ್ನು ನೀಡಿ ʼಇದು ಚುನಾವಣಾ ಖರ್ಚಿಗೆ ಸಣ್ಣ ಕೊಡುಗೆʼ ಎಂದು ಹೇಳಿ ಆಶೀರ್ವಾದ ಮಾಡಿದ್ದರು. ಅವರಿಗೆ ಭವಿಷ್ಯದಲ್ಲಿ ಏನಾಗುತ್ತದೆ ಎಂದು ತಿಳಿದಿತ್ತು”ಎಂದರು.
“ನನಗೆ ಕೆಂಪೇಗೌಡ ಎಂದು ನಾಮಕರಣ ಮಾಡಿದ್ದರೂ ಶಿವಗಿರಿ ಕ್ಷೇತ್ರದ ಅನುಗ್ರಹ ಇದ್ದ ಕಾರಣಕ್ಕೆ ಶಿವಕುಮಾರ್ ಎಂದು ನಾಮಕರಣ ಮಾಡಲಾಯಿತು ಎಂದು ನಮ್ಮ ತಾಯಿ ಹೇಳುತ್ತಿರುತ್ತಾರೆ. ನನಗೂ ಮಠ-ಮಾನ್ಯಗಳಿಗೂ ಅವಿನಾಭಾವ ಸಂಬಂಧವಿದೆ. ಮನೆ ಹುಷಾರು, ಮಠ ಹುಷಾರು ಎಂದು ಹಿರಿಯರು ಹೇಳಿದ್ದಾರೆ. ಅದರಂತೆ ನಮ್ಮ ಮಠಗಳನ್ನೂ ನಾವು ಉಳಿಸಿ ಬೆಳೆಸಬೇಕು. ಸಾವಿಗೆ ಗಳಿಗೆಯಿಲ್ಲ, ಸಾವು ಯಾರನ್ನೂ ಕೇಳಿ ಬರುವುದಿಲ್ಲ, ಅತಿಥಿಗಳಿಗೆ ನಾಳೆ ಬನ್ನಿ ಎನ್ನಬಹುದು. ಆದರೆ ಸಾವಿಗೆ ನಾಳೆ ಬಾ ಎನ್ನಲು ಸಾಧ್ಯವಿಲ್ಲ. ಆದರೆ ನಿರ್ವಾಣ ಸ್ವಾಮಿಗಳ ಆದರ್ಶ ಸದಾ ಶಾಶ್ವತ” ಎಂದರು.
ನಮ್ಮ ಕುಟುಂಬಕ್ಕೂ ಶ್ರೀ ಮಠಕ್ಕೂ ನೂರಾರು ವರ್ಷಗಳ ಒಡನಾಟ
“ಶ್ರೀಮಠ ಹಾಗೂ ನಮ್ಮ ಕುಟುಂಬಕ್ಕೆ ನೂರಾರು ವರ್ಷಗಳ ಭವ್ಯ ಅವಿನಾಭಾವ ಒಡನಾಡವಿದೆ. ನಮ್ಮ ಅಜ್ಜನ ಕಾಲದಿಂದಲೂ ಮನೆಯಲ್ಲಿ ಯಾವುದೇ ಕಾರ್ಯ ನಡೆದರೂ ಇವರಿಗಿಂತ ಮೊದಲು ಇದ್ದಂತಹ ಹಿರಿಯ ಸ್ವಾಮೀಜಿಯವರು ಬಂದು ಆಶೀರ್ವಾದ ಮಾಡುತ್ತಿದ್ದರು. ಯಾವುದೇ ಶುಭಕಾರ್ಯಗಳಿದ್ದರೂ ನಮಗೆ ಅವರ ಅಭಯ ಹಸ್ತ ಇದ್ದೇ ಇರುತ್ತಿತ್ತು. ಪ್ರತಿಯೊಂದು ಸಂದರ್ಭದಲ್ಲಿಯೂ ಅವರು ನಮಗೆ ಮಾರ್ಗದರ್ಶನ ಮಾಡುತ್ತಿದ್ದರು. ಅವರ ಚಿಂತನೆಗಳು ನಮಗೆ ದಾರಿದೀಪವಾಗಿದ್ದವು” ಎಂದರು.
“ನಮ್ಮ ಜಿಲ್ಲೆಗೆ ಆಧ್ಯಾತ್ಮಿಕವಾದ ದೀಪ. ಅನ್ನ, ಅಕ್ಷರ, ಆಶ್ರಯವನ್ನು ಸರ್ಕಾರ ನೀಡುವುದಕ್ಕಿಂತ ಮೊದಲು ಇವರು ಹಾಗೂ ಸಿದ್ದಗಂಗಾ ಮಠ ನೀಡಿದ್ದವು. 86 ವರ್ಷ ಬಾಳಿ ಬದುಕಿ ಮಾರ್ಗದರ್ಶನ ನೀಡಿದವರು. 700 ವರ್ಷಗಳಿಂದ ಜಾತಿ, ಧರ್ಮ ಮಾಡದೇ ಮೈಸೂರು ಮಹಾರಾಜರ ಕಾಲದಿಂದಲೂ ಈ ಮಠ ಅಚಲವಾಗಿ ನಿಂತಿದೆ. ಕರಿಯಪ್ಪನವರ ವಿದ್ಯಾಸಂಸ್ಥೆಗೂ ಮೊದಲು ಅಕ್ಷರ ದಾನ ಮಾಡಿದವರು. ದೊಡ್ಡ ಅಧಿಕಾರಿಗಳು, ಜನಪ್ರತಿನಿಧಿಗಳು, ಉದ್ಯಮಿಗಳು ಈ ಮಠದಲ್ಲಿ ಕಲಿತಿದ್ದಾರೆ. ಈ ಮಠದಲ್ಲಿ ಕಲಿತವರು ಪ್ರಪಂಚದಾದ್ಯಂತ ಹರಡಿಕೊಂಡಿದ್ದಾರೆ” ಎಂದರು.
“ಈ ಮಠದ ಆಶೀರ್ವಾದಿಂದ ಬೆಳೆದವರು ಎಲ್ಲರೂ ಒಟ್ಟಾಗಿ ಇನ್ನೊಮ್ಮೆ ಸೇರಿ ಸಮಾಜಮುಖಿ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗಲು ಚಿಂತನೆ ನಡೆಸಲಾಗುವುದು. ಹೊರ ಜಿಲ್ಲೆಗಳು, ತಮಿಳುನಾಡಿನಿಂದಲೂ ಭಕ್ತಾಧಿಗಳು ಬಂದಿದ್ದಾರೆ” ಎಂದರು.
“ಸುತ್ತೂರು ಶ್ರೀಗಳು ಈ ಮಠಕ್ಕೆ ಯಾವಾಗಲೂ ಆಧಾರಸ್ತಂಭವಾಗಿದ್ದರು. ಸಿದ್ದಗಂಗಾ ಮಠಕ್ಕೆ ಎಷ್ಟು ಹಿರಿತನ ಇದೆಯೋ ಅಷ್ಟೇ ಹಿರಿತನ ಹಳೇ ಮೈಸೂರು ಭಾಗದ ಈ ಮಠಕ್ಕೂ ಇದೆ. ಮರಣ ದೇಹಕ್ಕೆ ಹೊರತು ಜಂಗಮಕ್ಕಲ್ಲ. ಬಸವಣ್ಣವರ ತತ್ವ, ಚಿಂತನೆ ಆದರ್ಶಗಳನ್ನು ಮುನ್ನಡೆಸುತ್ತಿದ್ದರು. ಅಕ್ಷರ, ಅನ್ನ ದಾಸೋಹ ನಡೆಸುತ್ತಿದ್ದರು. ಕಿರಿಯ ಶ್ರೀಗಳ ಮಾರ್ಗದರ್ಶನದಂತೆ ಈ ಮಠದ ಸೇವೆಯನ್ನು ನಾವು ಮುಂದುವರೆಸುತ್ತೇವೆ. ಕನಕಪುರದ ಕಣ ಕಣದಲ್ಲೂ ದೇಗುಲ ಮಠವಿದೆ” ಎಂದರು.
“ನಿರ್ವಾಣ ಮಹಾಸ್ವಾಮಿಯವರಿಗೆ ಸರ್ಕಾರಿ ಗೌರವ ಸಲ್ಲಿಸುವ ಗೌರವ ಸಿಕ್ಕಿದ್ದು ನನ್ನ ಭಾಗ್ಯ. ಇದು ಭಾಗ್ಯ, ಇದು ಭಾಗ್ಯ ಇದು ಭಾಗ್ಯವಯ್ಯಾ ಪದುಮನಾಭನ ಪಾದ ಭಜನೆ ಪರಮ ಸುಖವಯ್ಯಾ. ನಾವೆಲ್ಲರೂ ಹಾಗೂ ಕಿರಿಯ ಶ್ರೀಗಳು ಸೇರಿ ಮಠದ ತತ್ವ, ಪರಂಪರೆಯನ್ನು ಉಳಿಸಿಕೊಂಡು ಹೋಗುತ್ತೇವೆ. ಇದು ನಮ್ಮ ಮಠ” ಎಂದು ಹೇಳಿದರು.
Key words: CM, D.K. Shivakumar, last respects, Shri Mummadi Nirvana Swamiji






