ಸೋಲುವ ಭೀತಿ: ವಿಪಕ್ಷಗಳ ವಿರುದ್ದ ಕೇಂದ್ರ ಷಡ್ಯಂತ್ರ-ಡಿಸಿಎಂ ಡಿ.ಕೆ ಶಿವಕುಮಾರ್ ವಾಗ್ದಾಳಿ.

ಬೆಂಗಳೂರು,ಮಾರ್ಚ್,22,2024(www.justkannada.in): ವಿಪಕ್ಷಗಳ ನಾಯಕರ ಬ್ಯಾಂಕ್ ಖಾತೆ ಸೀಜ್ ವಿಚಾರ ಸಂಬಂಧ  ಲೋಕಸಭೆ ಚುನಾವಣೆಯಲ್ಲಿ ಸೋಲುವ ಭೀತಿಯಿಂದಾಗಿ ವಿಪಕ್ಷಗಳ ವಿರುದ್ದ ಕೇಂದ್ರ ಸರ್ಕಾರ ಷಡ್ಯಂತ್ರ ನಡೆಸುತ್ತಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಗುಡುಗಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಲೋಕಸಭಾ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಬಿಜೆಪಿ ಸರ್ಕಾರ, ವಿರೋಧ ಪಕ್ಷಗಳ ವಿರುದ್ಧ ಖಾತೆ ಮುಟ್ಟುಗೋಲು, ಮುಖ್ಯಮಂತ್ರಿಗಳ ಬಂಧನ ಹೀಗೆ ಷಡ್ಯಂತ್ರ ಮಾಡುತ್ತಿದೆ. ಈ ಬಾರಿ ಲೋಕಸಭೆ ಚುನಾವಣೆ ಸಮಯದಲ್ಲೂ ದೇಣಿಗೆ ಸಂಗ್ರಹಿಸಲು ಮುಂದಾಗಿದ್ದೆ. ಆದರೆ ಎಐಸಿಸಿ ನಾಯಕರು ಬೇಡ ಎಂದರು. ಈಗ ಎಐಸಿಸಿ ಖಾತೆಯಲ್ಲಿನ 290 ಕೋಟಿಯಷ್ಟು ಹಣವನ್ನು ಕೇಂದ್ರ ಸರ್ಕಾರ ಆದಾಯ ತೆರಿಗೆ ಇಲಾಖೆ ಮೂಲಕ ಮುಟ್ಟುಗೋಲು ಹಾಕಿಸಿದ್ದಾರೆ. ನಮ್ಮದು ವ್ಯವಹಾರಿಕ ಸಂಸ್ಥೆಯಲ್ಲ. ನಾವು ಜನರ ದೇಣಿಗೆ ಮಾತ್ರ ಸಿಗುತ್ತಿದೆ. ನಮಗೆ ಚುನಾವಣಾ ಬಾಂಡ್ ಮೂಲಕ ನಮಗೆ ಸಿಕ್ಕಿರೋದು ಕೇವಲ 11% ಮಾತ್ರ. ಆದರೆ ಬಿಜೆಪಿ ಅವರಿಗೆ 57% ಸಿಕ್ಕಿದೆ. ಇಂದು ಪತ್ರಿಕೆಗಳಲ್ಲಿ ಯಾರು ಯಾರಿಗೆ ಎಷ್ಟು ದೇಣಿಗೆ ನೀಡಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ. ನಾವು ಮಾಧ್ಯಮಗಳಲ್ಲಿ ಪಕ್ಷದ ವತಿಯಿಂದ ಜಾಹೀರಾತು ನೀಡಲು ಈಗ ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡರೆ ವಿರೋಧ ಪಕ್ಷಗಳು ಚುನಾವಣೆ ನಡೆಸುವುದು ಹೇಗೆ? ಎಂದು ಪ್ರಶ್ನಿಸಿದರು.

ಲೋಕಸಭೆ ಚುನಾವಣೆಯಲ್ಲಿ ಸೋಲುವ ಬಗ್ಗೆ  ಬಿಜೆಪಿಗೆ  ಮನವರಿಕೆಯಾಗಿದೆ. ಈ ಭಯದಲ್ಲಿ ಖಾತೆ ಮುಟ್ಟುಗೋಲು, ಎದುರಾಳಿಗಳ ಮುಖ್ಯಮಂತ್ರಿಗಳ ಬಂಧನ, ರಾಜ್ಯಪಾಲರ ದುರ್ಬಳಕೆ ಯತ್ನಕ್ಕೆ ಮುಂದಾಗಿದ್ದಾರೆ. ಕರ್ನಾಟಕ ಕಾಂಗ್ರೆಸ್ ಪಕ್ಷ ಕೇಂದ್ರದ ಈ ಧೋರಣೆ ಖಂಡಿಸುತ್ತೇವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದರು.

Key words: Central govt- conspiracy- against –opposition Parties-DCM- DK Shivakumar