ಅಕ್ಕ ಸಂಸ್ಥೆಗೆ 25 ವರ್ಷದ ಸಂಭ್ರಮ: ಆಗಸ್ಟ್ ನಲ್ಲಿ12ನೇ ಅಕ್ಕ ವಿಶ್ವ ಸಮ್ಮೇಳನ.

ಮೈಸೂರು, ಫೆಬ್ರವರಿ, 28, 2024(www.justkannada.in):   ದೂರದ ಯುಎಸ್ ಎ ನಲ್ಲಿರುವ  ಅಕ್ಕ ಸಂಸ್ಥೆಗೆ 25 ವರ್ಷದ ಸಂಭ್ರಮವಾಗಿದ್ದು, ಈ ಹಿನ್ನೆಲೆಯಲ್ಲಿ ಆಗಸ್ಟ್ ನಲ್ಲಿ ಮೂರು ದಿನಗಳ ಕಾಲ ನಲ್ಲಿ 12ನೇ ಅಕ್ಕ ವಿಶ್ವ ಸಮ್ಮೇಳನ ನಡೆಸಲು ಉದ್ದೇಶಿಸಲಾಗಿದೆ ಎಂದು ಅಕ್ಕ ಸಂಸ್ಥೆಯ ಅಧ್ಯಕ್ಷ ರವಿ ಬೋರೇಗೌಡ ತಿಳಿಸಿದರು.

ಅಕ್ಕ ಸಂಸ್ಥೆಗೆ ಬೆಳ್ಳಿ ಹಬ್ಬದ  ಸಂಭ್ರಮ ಹಿನ್ನೆಲೆಯಲ್ಲಿ ಅಕ್ಕ ಸಂಸ್ಥೆಯ ಸಂಸ್ಥಾಪಕರು  ಅಮೇರಿಕಾದಿಂದ ಮೈಸೂರಿಗೆ ಆಗಮಿಸಿ ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.  ಅಕ್ಕ ಸಂಸ್ಥೆಯ ಹಾಲಿ‌ ಅಧ್ಯಕ್ಷ ರವಿ ಬೋರೇಗೌಡ, ಕಾರ್ಯದರ್ಶಿ ಮಾದೇಶ್, ಡಾ.ವಿಶ್ವಾಮಿತ್ರ  ಜಂಟಿ ಸುದ್ದಿಗೋಷ್ಠಿ ನಡೆಸಿದರು.

ಈ ವೇಳೆ ಮಾತನಾಡಿದ ರವಿ ಬೋರೇಗೌಡ, ಇದೇ ವರ್ಷ ಆಗಸ್ಟ್ 30, 31 ಮತ್ತು ಸೆಪ್ಟೆಂಬರ್ 1 ಒಟ್ಟು ಮೂರು ದಿನಗಳ ಕಾಲ 12ನೇ ಅಕ್ಕ ವಿಶ್ವ ಸಮ್ಮೇಳನ ನಡೆಯಲಿದೆ. ಈಗಾಗಲೇ ಎಲ್ಲಾ ತಯಾರಿಗಳು ನಡೆಯುತ್ತಿದೆ.  ಈ ನಡುವೆ ಪ್ರತಿ ಎರಡು ವರ್ಷಕ್ಕೊಮ್ಮೆ ಈ ಸಮ್ಮೇಳನ ನಡೆಯುತ್ತಾ ಬಂದಿದ್ದು, ಕೊರೋನಾ ಹಿನ್ನೆಲೆಯಲ್ಲಿ ಕಳೆದ ಬಾರಿ ಸಮ್ಮೇಳನ ನಡೆದಿರಲಿಲ್ಲ. ಈ ಬಾರಿ ಅಮೇರಿಕಾದ ವಾಷಿಂಗ್ಟನ್ ನಗರದಿಂದ 120 ಕಿ.ಮೀ‌ ದೂರದಲ್ಲಿರುವ ರಿಚ್ಮಂಡ್ ನಗರದಲ್ಲಿ ಈ ಸಮ್ಮೇಳನ ಆಯೋಜನೆ ಮಾಡುತ್ತಿದ್ದೇವೆ. ಸಮ್ಮೇಳನದಲ್ಲಿ 5000 ಕನ್ನಡಿಗರು ಸೇರುವ ನಿರೀಕ್ಷೆ ಇದ್ದು, ಬಹಳ ಅದ್ದೂರಿಯಾಗಿ ಈ ಸಮ್ಮೇಳನ ಜರುಗಲಿದೆ ಎಂದು ತಿಳಿಸಿದರು.

ಕಲೆ, ಸಾಹಿತ್ಯ, ವಾಣಿಜ್ಯ ಮಳಿಗೆ, ಹಳೇ ವಿದ್ಯಾರ್ಥಿಗಳ ಮಹಾ ಸಮ್ಮಿಲನ ಆಗುತ್ತದೆ. ನಟ ದಿ.ಪುನೀತ್ ರಾಜಕುಮಾರ್ ಹೆಸರಿನಲ್ಲಿ ಅಪ್ಪು ನೈಟ್ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದೇವೆ. ಮೂರು ದಿನಗಳ ಕಾಲ ನಡೆಯಲಿರುವ ಈ ಸಮ್ಮೇಳನದಲ್ಲಿ ಅಮೆರಿಕಾದ ಕನ್ನಡಿಗರು ಮತ್ತು ನಮ್ಮ ರಾಜ್ಯದಿಂದ ಹಲವರನ್ನು ಆಹ್ವಾನ ಮಾಡುತ್ತಿದ್ದೇವೆ. ಮೂರು ತಿಂಗಳಿಂದ ಸಕಲ ರೀತಿಯಲ್ಲೂ ಸಿದ್ದತೆ ಭರದಿಂದ ಸಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿ  ರಾಜ್ಯದ ಮಠಾಧೀಶರು ಸೇರಿ ಗಣ್ಯಾತಿಗಣ್ಯರಿಗೆ ಆಹ್ವಾನ ನೀಡಿದ್ದೇವೆ ಎಂದು ರವಿ ಬೋರೇಗೌಡ ಮಾಹಿತಿ ನೀಡಿದರು.

ನಂತರ ಅಕ್ಕ ಸಂಸ್ಥೆಯ ಸಂಸ್ಥಾಪಕ ಡಾ.ವಿಶ್ವಾಮಿತ್ರ ಮಾತನಾಡಿ,  ಅಕ್ಕ ಸಂಸ್ಥೆಯನ್ನ ಕಟ್ಟಲು ಆರಂಭದಲ್ಲಿ ಬಹಳ ಶ್ರಮ ಪಟ್ಟಿದ್ದೇವೆ. ಇಂದು ಅದು ಹೆಮ್ಮರವಾಗಿ ಬೆಳೆದಿದೆ. ಈಗ ಸುಮಾರು 1 ಲಕ್ಷ ಕನ್ನಡಿಗರು ನೋಂದಣಿ ಆಗಿದ್ದಾರೆ. ಅಂದು ಯಾವುದೇ ಸಾಮಾಜಿಕ ಜಾಲತಾಣಗಳು ಇಲ್ಲದೆ ಸಂಸ್ಥೆ ಕಟ್ಟಿದೆವು. ಈಗ ನಮಗೆ ಸಂಸ್ಥಾಪಕರಾಗಿ ಇರುವುದಕ್ಕೆ ಖುಷಿ ಮತ್ತು ತೃಪ್ತಿ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಅನಿವಾಸಿ ಭಾರತೀಯರಾದ  ಮಾದೇಶ್, ಬಸವರಾಜ್ ಮತ್ತು  ಮಾಜಿ ಸಚಿವ ಸಾರಾ ಮಹೇಶ್ ಉಪಸ್ಥಿತರಿದ್ದರು.

Key words: Celebrating- 25 years – Akka organization- 12th Akka World Conference – August.