ಕಾವೇರಿ ನದಿ ನೀರು ವಿವಾದ: ಸುಪ್ರೀಂಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದ ಕರ್ನಾಟಕ

ನವದೆಹಲಿ, ಆಗಸ್ಟ್ 24,2023(www.justkannada.in):  ರಾಜ್ಯದಲ್ಲಿ ಉತ್ತಮ ಮಳೆಯಾಗದಿದ್ದರೂ ತಮಿಳುನಾಡಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ನೀರು ಹರಿಸಿದೆ.  ಆದರೂ ಸಹ  ಕಾವೇರಿ ನೀರಿಗಾಗಿ ತಮಿಳುನಾಡು ಮತ್ತೆ ಕ್ಯಾತೆ ತೆಗೆದು ಸುಪ್ರೀಂಕೋರ್ಟ್ ಮೊರೆ ಹೋಗಿದ್ದು  ನಾಳೆ ಸುಪ್ರೀಂಕೋರ್ಟ್​ನಲ್ಲಿ ತಮಿಳುನಾಡು ಅರ್ಜಿ ವಿಚಾರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕವು ಸಹ ಅಫಿಡವಿಟ್ ಸಲ್ಲಿಸಿದೆ.

ಸುಪ್ರೀಂಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿರುವ ಕರ್ನಾಟಕ ಸರ್ಕಾರ,  ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ಈಗಾಗಲೇ ತಮಿಳುನಾಡಿಗೆ ನೀರು ಬಿಡಲಾಗಿದೆ. ಈ ಬಾರಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆ ನಡೆವೆಯೂ ಸಹ ನೀರು ಹರಿಸಿ ಪ್ರಾಧಿಕಾರದ ಆದೇಶ ಪಾಲನೆ ಮಾಡಲಾಗಿದೆ. ನೀರಿನ ಕೊರತೆಯದ್ದರೂ ಸಹ ಸಾಮಾನ್ಯ ವರ್ಷದಂತೆಯೇ ನೀರುಬಿಡಬೇಕು ಎಂದು  ತಮಿಳುನಾಡು ಒತ್ತಾಯಿಸಿದ್ದು ಈ ಮೂಲಕ ಕಾವೇರಿ ನೀರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕರ್ನಾಟಕ ಅಫಿಡೆವಿಟ್ ​ನಲ್ಲಿ ಆರೋಪಿಸಿದೆ.

ಈ ಬಾರಿ ಕಾವೇರಿ ಕೊಳ್ಳದಲ್ಲಿ ಶೇ.42ರಷ್ಟು ಮಳೆ ಕೊರತೆಯಿದೆ. ಕರ್ನಾಟಕ ಸಿಡಬ್ಲ್ಯುಎಂಎ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿದೆ. ಸಾಮಾನ್ಯ ವರ್ಷದಂತೆ ನೀರು ಹರಿಸಲು ತಮಿಳುನಾಡು ಕೇಳುತ್ತಿದೆ. ತಮಿಳುನಾಡು 36.76 ಟಿಎಂಸಿ‌ ನೀರು ಹರಿಸುವಂತೆ ಕೇಳುತ್ತಿದೆ. ಆದ್ರೆ, ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದ್ದು, ಕರ್ನಾಟಕದ ಜಲಾಶಯಗಳಲ್ಲಿ 42% ಕಡಿಮೆ ನೀರು ಸಂಗ್ರಹವಾಗಿದೆ. ಕಾವೇರಿ ಜಲಾನಯನದಲ್ಲಿರುವ ನೀರು ಕರ್ನಾಟಕಕ್ಕೆ ಸಾಕಾಗುವುದಿಲ್ಲ. ಬೆಳೆ ಮತ್ತು ಕುಡಿಯುವ ನೀರಿಗೆ ಕೊರತೆಯಾಗಲಿದೆ. ಬೆಂಗಳೂರಿನಂತಹ ಮಹಾ ನಗರಕ್ಕೂ ನೀರಿನ ಕೊರತೆಯಾಗಲಿದೆ. ಅದಾಗ್ಯೂ ಕರ್ನಾಟಕ ತಮಿಳುನಾಡಿಗೆ ನೀರು ಹರಿಸಿ ಸಿಡಬ್ಯುಎಂಎ ಆದೇಶವನ್ನು ಕರ್ನಾಟಕ ಪಾಲಿಸಿದೆ. ಆದರೆ ತಮಿಳುನಾಡು ಕಾವೇರಿ ನೀರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕರ್ನಾಟಕ ತನ್ನ ಅಫಿಡೆವಿಟ್ ನಲ್ಲಿ ಆರೋಪಿಸಿದೆ.

ನಾಳೇ ಕಾವೇರಿ ವಿವಾದ ಕುರಿತು ಸುಪ್ರೀಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದ್ದು, ಕರ್ನಾಟಕ ಪರ ತೀರ್ಪು ಬರಲಿದೆಯಾ ಕಾದು ನೋಡಬೇಕಿದೆ.

Key words: Cauvery -water- dispute- Karnataka-submits -affidavit – Supreme Court