ಕಾವೇರಿ ವಿವಾದ : CWMA ಆವೈಜ್ಞಾನಿಕ ಆದೇಶ ತಡೆಯುವಂತೆ ಕೇಂದ್ರ ಜಲಶಕ್ತಿ ಸಚಿವರಿಗೆ  ಜಲ ಸಂರಕ್ಷಣಾ ಸಮಿತಿ ನಿಯೋಗ ಮನವಿ.

ನವದೆಹಲಿ,ಅಕ್ಟೋಬರ್,9,2023(www.justkannada.in):  ಬರಗಾಲದ ಸಂಕಷ್ಟದಲ್ಲಿರುವ ರೈತರಿಗೆ ಜನಸಾಮಾನ್ಯರಿಗೆ ನೀರು ಉಳಿಸದೆ ,ಕಾವೇರಿ ನೀರನ್ನ ತಮಿಳುನಾಡಿಗೆ ಹರಿಸಿ, ರಾಜ್ಯದ ರೈತರಿಗೆ ಕುಡಿಯುವ ನೀರಿಗೆ ಸಂಕಷ್ಟ ತಂದಿರುವ  ನೀತಿಯನ್ನು ಸರಿಪಡಿಸುವಂತೆ , ಕಾವೇರಿ ನೀರು ನಿರ್ವಹಣಾ ಮಂಡಳಿಯ ಆವೈಜ್ಞಾನಿಕ ಆದೇಶಕ್ಕೆ ತಡೆ ನೀಡುವಂತೆ ಕೋರಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ನಿಯೋಗ ಮನವಿ ಮಾಡಿತು.

ಇಂದು ದೆಹಲಿಯ ಅಕ್ಬರಸ್ತೆಯಲ್ಲಿರುವ ಸಚಿವರ ಗೃಹ ಕಚೇರಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನ ರೈತಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಭೇಟಿಯಾಗಿ ಸುಮಾರು 20 ನಿಮಿಷಗಳ ಕಾಲ ವಿಸ್ತಾರವಾದ ಚರ್ಚೆ ನಡೆಸಿ ಕರ್ನಾಟಕದ ಸಂಕಷ್ಟದ ಪರಿಸ್ಥಿತಿಯನ್ನು ವಿವರಿಸಿದರು.

ಈ ಕುರಿತು ಮಾತನಾಡಿದ ನಿಯೋಗದ ಮುಖಂಡ  ಕುರುಬೂರು ಶಾಂತಕುಮಾರ್, ಕರ್ನಾಟಕದ ಜನರು 25 ಜನ ಬಿಜೆಪಿ ಎಂಪಿಗಳನ್ನ ಆಯ್ಕೆ ಮಾಡಿದ್ದರೂ ನಮಗೆ ಅನ್ಯಾಯವಾಗುತ್ತಿದೆ. ರಾಜ್ಯದ ರೈತರ ಬಲಿಕೊಡುವಂತಾಗಿದೆ. ರೈತರು ವಲಸೆ ಹೋಗುತ್ತಿದ್ದಾರೆ.  ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಬೆಂಗಳೂರಿನಲ್ಲಿ ಎರಡು ದಿನಕ್ಕೊಮ್ಮೆ ಕುಡಿಯವ ನೀರು ಸರಬರಾಜು ಮಾಡುತ್ತಿದ್ದಾರೆ. ಹೀಗಾಗಿ  ಕಾವೇರಿ ನೀರು ನಿರ್ವಹಣಾ ಮಂಡಳಿ ನೀಡಿರುವ ಅವೈಜ್ಞಾನಿಕ ಆದೇಶ ತಡೆಯಾಗಬೇಕು ಎಂದು ಒತ್ತಾಯಿಸಲಾಯಿತು.  ಕುಡಿಯುವ ನೀರಿಗಾಗಿ ಬೆಂಗಳೂರು ಬಂದ್ ಹಾಗೂ ಕರ್ನಾಟಕ ಬಂದ್ ಆಚರಿಸಿ ಜನಸಾಮಾನ್ಯರು ಬೀದಿಗೆ ಬಂದಿದ್ದಾರೆ ಇದನ್ನು ಗಮನಿಸಬೇಕು ಎಂದರು.

ಸಚಿವರು ನಿಯೋಗದ ಮನವಿಯನ್ನು ಆಲಿಸಿ,  ನನಗೆ ಕಾವೇರಿ ಅಚ್ಚುಕಟ್ಟು ಭಾಗದ ಎಲ್ಲ ಸಮಸ್ಯೆಗಳು ಅರಿವಾಗಿದೆ.  ಕೇಂದ್ರ ಸರ್ಕಾರ ನ್ಯಾಯಾಲಯದ ಆದೇಶದ ವಿಚಾರದಲ್ಲಿ ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ.  ಆದರೂ ಸಹ ಮುಂದಿನ ಎರಡು ದಿನಗಳಲ್ಲಿ ಕಾವೇರಿ ನೀರಿನ ನಿರ್ವಹಣಾ ಸಮಿತಿ ಸಭೆ ನಡೆಯಲಿದೆ. ಆ ಸಭೆಯಲ್ಲಿ ನಿಮ್ಮ ನಿಯೋಗದ ಒತ್ತಾಯಗಳ ಬಗ್ಗೆ ಮಂಡಿಸಿ ಗಮನ ಸೆಳೆಯಲಾಗುವುದು. ಸಕಾರಾತ್ಮಕವಾದ ನಿರ್ಧಾರ ಕೈಗೊಳ್ಳಲು ತಿಳಿಸಲಾಗುವುದು. ಕೇಂದ್ರ ಸರ್ಕಾರ ಕರ್ನಾಟಕದ ಹಿತಾಸಕ್ತಿಗೆ ಪೂರಕವಾಗಿ ಕಾರ್ಯನಿರ್ವಹಿಸಲಾಗುವುದು ಎಂದು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭರವಸೆ ನೀಡಿದರು.

Key words: Cauvery dispute- Water karnataka- delegation –appeals-central Minister