2020-25ನೇ ಸಾಲಿಗೆ ರಾಜ್ಯದ ನೂತನ ಕೈಗಾರಿಕಾ ನೀತಿಗೆ ಸಚಿವ ಸಂಪುಟದ ಅಸ್ತು:  ಸಿಎಂ ಹಾಗೂ ಸಚಿವರಿಗೆ  ಎಫ್.ಕೆ.ಸಿ.ಸಿಐ ಅಭಿನಂದನೆ…

ಬೆಂಗಳೂರು,ಜು,23,2020(www.justkannada.in): ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ 2020-25ನೇ ಸಾಲಿಗೆ ನೂತನ ಕೈಗಾರಿಕಾ ನೀತಿಯನ್ನು ಅನುಮೋದಿಸಿರುವ ವಿಷಯವು ಮಾಧ್ಯಮದ ಮುಖಾಂತರ ತಿಳಿದು ಬಂದಿದೆ. ಸಚಿವ ಸಂಪುಟದ ಈ ನಿರ್ಧಾರವನ್ನ ಸ್ವಾಗತಿಸುತ್ತೇವೆ ಎಂದು ಎಫ್.ಕೆ.ಸಿ.ಸಿ.ಐ ಅಧ್ಯಕ್ಷ ಸಿ ಆರ್ ಜನಾರ್ಧನ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಿ ಆರ್ ಜನಾರ್ಧನ್,  ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಅವರು ರಾಜ್ಯಕ್ಕೆ ಬಂಡವಾಳ ಹೂಡಿಕೆಯ ಆಕರ್ಷಣೆಗೆ ಪೂರಕವಾಗುವಂತಹ ಕೈಗಾರಿಕಾ ನೀತಿ ಎಂದು ಘೋಷಿಸಿದ್ದಾರೆ. ದೇಶದ ಬೇರೆ ರಾಜ್ಯಗಳ ಕೈಗಾರಿಕಾ ನೀತಿಗಳಿಗೆ ಹೋಲಿಸಿದಲ್ಲಿ ಕರ್ನಾಟಕದ ಕೈಗಾರಿಕಾ ನೀತಿ ವಿಭಿನ್ನವಾಗಿದ್ದು, ಬಂಡವಾಳ ಹೂಡಿಕೆ ಸಹಾಯಧನವನ್ನು ವಹಿವಾಟಿನ ಆಧಾರದ ಮೇಲೆ ಎಲ್ಲಾ ರೀತಿಯ ಕೈಗಾರಿಕೆಗಳಿಗೆ ಲಭ್ಯವಾಗುವುದೆಂದು ಸಚಿವರು ತಿಳಿಸಿದರು. ಎಫ್.ಕೆ.ಸಿ.ಸಿ.ಐ. ಮಹಾಸಂಸ್ಥೆಗೆ ಈ ವಿಷಯವನ್ನು ತಿಳಿದು ಸಂತಸವಾಗಿದೆ ಮತ್ತು ಸಚಿವ ಸಂಪುಟದ ಈ ನಿರ್ಧಾರವನ್ನು ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.cabinet-new-industrial-policy-year-2020-25-fkcci-congratulates-cm-minister

ಇಂಥಹ ಕಠಿಣ ಸಂದರ್ಭದಲ್ಲಿ ರಾಜ್ಯವು ನೂತನ ಕೈಗಾರಿಕಾ ನೀತಿಯನ್ನು ಜಾರಿಗೊಳಿಸಿರುವುದರಿಂದ ದೇಶ ವಿದೇಶಗಳಿಂದ ಬಂಡವಾಳ ಆಕರ್ಷಣೆ ಮಾಡಲು ಹಾಗೂ ಮುಂದಿನ ಸಾಲಿನಲ್ಲಿ ಆಯೋಜಿಸಲು ಉದ್ದೇಶಿಸಿರುವ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಭದ್ರ ಅಡಿಪಾಯವಾಗಲಿದೆ. ಇದಕ್ಕಾಗಿ ಮುಖ್ಯಮಂತ್ರಿಗಳಿಗೆ ಹಾಗೂ ಕೈಗಾರಿಕಾ ಸಚಿವರಿಗೆ ಎಫ್.ಕೆ.ಸಿ.ಸಿ.ಐ. ವತಿಯಿಂದ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ಸಿ.ಆರ್ ಜನಾರ್ಧನ್ ತಿಳಿಸಿದ್ದಾರೆ.

Key words: Cabinet – -New Industrial Policy – year 2020-25-FKCCI- congratulates -CM – Minister.