ಸಂಪುಟ ವಿಸ್ತರಣೆ ವಿಚಾರ:  ಸರಣಿ ಟ್ವೀಟ್ ಮಾಡಿ ತನ್ನ ಅಸಮಾಧಾನ ಹೊರ ಹಾಕಿದ ಬಿಜೆಪಿ ಶಾಸಕ…

ಬೆಂಗಳೂರು,ಫೆ,4,2020(www.justkannada.in):  ಸಚಿವ ಸಂಪುಟ ವಿಸ್ತರಣೆಗೆ ಇನ್ನು ಎರಡು ದಿನ ಬಾಕಿ ಇದ್ದು, ಇದಕ್ಕೂ ಮುನ್ನವೇ ರಾಜ್ಯಬಿಜೆಪಿಯಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಸವದತ್ತಿ ಬಿಜೆಪಿ ಶಾಸಕ ಆನಂದ್ ಮಾಮನಿ ಟ್ವಿಟ್ಟರ್ ನಲ್ಲಿ  ಸರಣಿ ಟ್ವೀಟ್ ಮಾಡಿ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.

ಸಚಿವ ಸ್ಥಾನ ಸಿಗದಿರುವ ಬಗ್ಗೆ ಟ್ವಿಟ್ಟರ್ ನಲ್ಲಿ ತಮ್ಮ ಅಸಮಾಧಾನ ಹೊರಹಾಕಿರುವ ಶಾಸಕ ಆನಂದ್ ಮಾಮನಿ, “ಹೊಸತಾಗಿ ಪಕ್ಷ ಸೇರಿ ಮಂತ್ರಿಯಾಗುವವರೆದುರಿಗೆ, ಪಕ್ಷಕ್ಕೆ ಅಡಿಪಾಯ ಹಾಕಿ, ಕಟ್ಟಿ, ನಿಷ್ಠಾವಂತರಾಗಿ ದುಡಿದು ಸಾಕಷ್ಟು ಬಾರಿ ಶಾಸಕರಾದರೂ ಲೆಕ್ಕಕ್ಕಿಲ್ಲ. ಪಕ್ಷದ ಮೇಲಿಟ್ಟಿರುವ ಕ್ಷೇತ್ರದ ಜನತೆಯ ಅಮೂಲ್ಯ ಪ್ರೀತಿ-ಅಭಿಮಾನಕ್ಕೂ, ಪಕ್ಷದಲ್ಲಿ ಬೆಲೆಯಿಲ್ಲದಾಯಿತೆ.?? !! ಎಂದು ಚಾಟಿ ಬೀಸಿದ್ದಾರೆ.

ಇನ್ನೊಂದು ಟ್ವೀಟ್ ಮಾಡಿರುವ ಆನಂದ್ ಮಾಮನಿ, ಇನ್ನಾದರೂ ನನ್ನ ಕ್ಷೇತ್ರವನ್ನು ಹಾಗೂ ನಮ್ಮಂಥವರನ್ನು ಬೆಳೆಸಲು, ಈಗಾಗಲೇ ಸಾಕಷ್ಟು ಬಾರಿ ಇಲ್ಲಿವರೆಗೆ ಸರ್ಕಾರದಲ್ಲಿ ಅಧಿಕಾರ ಅನುಭವಿಸಿದವರು ಯಾವತ್ತೂ ತಾವು ಪಡೆದ ಸ್ಥಾನಮಾನ ಕಿಂಚಿತ್ತೂ ತ್ಯಜಿಸಲು ಹಿಂದೆಟು ಹಾಕುತ್ತಿರುವುದು ಒಂದೆಡೆಗಾದರೆ, ಪಕ್ಷದ ಮುಖಂಡರೂ ಸಹ ನನ್ನ ಕ್ಷೇತ್ರವನ್ನು ಹಾಗೂ ನಮ್ಮಂಥವರನ್ನು ಬೆಳೆಸಲು ಯಾವುದೇ ಆಸಕ್ತಿ ತೋರಿಸದಿರುವುದು ಇನ್ನೊಂದೆಡೆ. ಇನ್ಮೇಲೆ ಪಕ್ಷ ನಿಷ್ಠರಿಗೆ ಕಾಲವಿಲ್ಲವೇ, ಎಂಬುದು ಯಕ್ಷಪ್ರಶ್ನೆ. ಇದು ಪಕ್ಷ ನಿಷ್ಠರಿಗೆ ಹಾಗೂ ಮತದಾರರಿಗೆ ಆದ ಘೋರ ಅಪಮಾನ ಅಲ್ಲದೇ ಇನ್ನೇನು ಎಂದು ಪ್ರಶ್ನಿಸಿದ್ದಾರೆ.

ಹಾಗೆಯೇ “ಆಟಕ್ಕುಂಟು, ಲೆಕ್ಕಕ್ಕಿಲ್ಲ. ಇದೇನು ವಿಪರ್ಯಾಸವೇ, ಕಟು ಸತ್ಯವೇ? ಈಗ ಸ್ಪಷ್ಟ ಹೇಳುವುದಿಷ್ಟೇ, ಕಾಲಾಯ ತಸ್ಮೈ ನಮಃ” ಎಂದು ಮತ್ತೊಂದು ಟ್ವೀಟ್‌ ಮಾಡಿರುವ ಆನಂದ್ ಮಾಮನಿ,  ಈವರೆಗೆ ಸಾಕಷ್ಟು ಜನ ಅಧಿಕಾರ ಅನುಭವಿಸಿದ್ದಾರೆ. ಅವರು ತಮ್ಮ ಸ್ಥಾನ ತ್ಯೆಜಿಸಲು ಹಿಂದೇಟು ಹಾಕುತ್ತಿರುವುದು ಸರಿಯಲ್ಲ. ಅಧಿಕಾರ ಅನುಭವಿಸಿದವರು ಇನ್ನಾದರೂ ಅಧಿಕಾರ ತ್ಯಜಿಸಲಿ ಎಂದು ಆಗ್ರಹಿಸಿದ್ದಾರೆ.

Key words: cabinet expansion- BJP MLA – tweeted -his outrage.