ಮೈಸೂರು ಪೇಂಟ್ಸ್ ಕಾರ್ಖಾನೆಗೆ ಸದ್ಯದಲ್ಲೇ ಬ್ರ್ಯಾಂಡ್ ವರ್ಚಸ್ಸು- ಸಚಿವ ಎಂ.ಬಿ ಪಾಟೀಲ್.

ಬೆಂಗಳೂರು,ಮಾರ್ಚ್,12,2024(www.justkannada.in): ಮೈಸೂರು ಮಹಾರಾಜರ ಕಾಲದ ಪ್ರತಿಷ್ಠಿತ ಕಾರ್ಖಾನೆಗಳಲ್ಲಿ ಒಂದಾಗಿರುವ `ಮೈಸೂರು ಬಣ್ಣ ಮತ್ತು ಅರಗಿನ ಕಾರ್ಖಾನೆಯ ಉತ್ಪಾದನೆ ಮತ್ತು ಆರ್ಥಿಕ ವಹಿವಾಟನ್ನು ಹೆಚ್ಚಿಸಿ, ಈ ಉದ್ದಿಮೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಕಾರ್ಖಾನೆಯ ಆಡಳಿತ ಮಂಡಲಿಯ ಸಭೆ ನಡೆಸಿದರು.

ಬಳಿಕ ಮಾತನಾಡಿದ  ಸಚಿವ ಎಂ.ಬಿ ಪಾಟೀಲ್ ಅವರು, `ವಿಶ್ವೇಶ್ವರಯ್ಯನವರ ದಿವಾನಗಿರಿಯ ಕಾಲದಲ್ಲಿ ಆರಂಭವಾದ ಬಣ್ಣ ಮತ್ತು ಅರಗಿನ ಕಾರ್ಖಾನೆಯು ಸದ್ಯಕ್ಕೆ ವಾರ್ಷಿಕ 34-35 ಕೋಟಿ ರೂ. ವಹಿವಾಟು ನಡೆಸುತ್ತಿದೆ. ಈಗ ಲೋಕಸಭಾ ಚುನಾವಣೆ ಬಂದಿರುವುದರಿಂದ ಶಾಯಿ ತಯಾರಿಕೆಗೆ ಬೇಡಿಕೆ ಬಂದಿದ್ದು, ಈ ವರ್ಷ ವಹಿವಾಟು 77 ಕೋಟಿ ರೂ. ತಲುಪಲಿದೆ. ಆದರೆ, ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಒಂದು ಉದ್ದಿಮೆ ಹೀಗಿದ್ದರೆ ಸಾಲುವುದಿಲ್ಲ. ಆದ್ದರಿಂದ, ಈ ಕಾರ್ಖಾನೆಗೆ ಮತ್ತಷ್ಟು ಕಸುವು ತುಂಬಲಾಗುವುದು’ ಎಂದರು.

ಮನೆ ಗೋಡೆ ಬಣ್ಣಗಳನ್ನು ತಯಾರಿಸಲು ಸೂಚಿಸಲಾಗಿದೆ. ಮುಕ್ತ ಮಾರುಕಟ್ಟೆ ಅಲ್ಲದೆ, ಸರಕಾರಿ ಕಟ್ಟಡಗಳು, ಶಾಲಾ- ಕಾಲೇಜು, ಹಾಸ್ಟೆಲ್ ಗಳಿಗೆ  ಕಾಲಕಾಲಕ್ಕೆ ಬೇಕಾಗುವ ಬಣ್ಣ, ಎಮಲ್ಶನ್ ಇತ್ಯಾದಿಗಳನ್ನು ಈ ಕಾರ್ಖಾನೆಯಲ್ಲೇ ತಯಾರಿಸುವ ಚಿಂತನೆ ನಡೆದಿದೆ ಎಂದು ಅವರು ತಿಳಿಸಿದರು.

ಇದಕ್ಕಾಗಿ, ಬಣ್ಣಗಳ ಉದ್ಯಮದಲ್ಲಿ ಪಳಗಿರುವ ಪರಿಣತರೊಬ್ಬರನ್ನು ಸಲಹೆಗಾರರನ್ನಾಗಿ ನೇಮಿಸಿಕೊಳ್ಳಲು ಸಭೆಯಲ್ಲಿ ಅನುಮತಿ ನೀಡಲಾಗಿದೆ. ಈ ಮೂಲಕ `ಮೈಸೂರು ಪೇಂಟ್ಸ್ ಅನ್ನು ಬ್ರ್ಯಾಂಡ್ ಆಗಿ ಬೆಳೆಸಿ, ಖಾಸಗಿ ಕಂಪನಿಗಳಿಗೆ ಸಡ್ಡು ಹೊಡೆಯಲಾಗುವುದು. ಇದಕ್ಕಾಗಿ ವೈಜ್ಞಾನಿಕವಾಗಿ ಮಾರುಕಟ್ಟೆಯನ್ನೂ ವಿಸ್ತರಿಸಿ, ಸ್ಪರ್ಧಾತ್ಮಕ ಬೆಲೆಯಲ್ಲಿ ಪೇಂಟ್ ಸಿಗುವಂತೆ ಮಾಡಲಾಗುವುದು. ಈಗ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತದ ಉತ್ಪನ್ನಗಳು ಮತ್ತು ವಹಿವಾಟನ್ನು ವಿಸ್ತರಿಸಿರುವಂತೆ ಮೈಸೂರು ಬಣ್ಣ ಮತ್ತು ಅರಗಿನ ಕಾರ್ಖಾನೆಯನ್ನೂ ಹೊಸ ಸ್ತರಕ್ಕೆ ಕೊಂಡೊಯ್ಯಲಾಗುವುದು. ಇದಕ್ಕೆ ಬೇಕಾದ  ಸಿದ್ಧತೆಗಳನ್ನು ಈಗಾಗಲೇ ಆರಂಭಿಸಲಾಗಿದೆ ಎಂದು ಎಂ ಬಿ ಪಾಟೀಲ್ ಮಾಹಿತಿ ನೀಡಿದರು.

ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್ ಸೆಲ್ವಕುಮಾರ್, ಮೈಸೂರು ಬಣ್ಣ ಮತ್ತು ಅರಗಿನ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಮಹಮದ್ ಇರ್ಫಾನ್ ಉಪಸ್ಥಿತರಿದ್ದರು.

Key words: Brand – Mysore –Paints- Factory – Minister- MB Patil