ಭವಿಷ್ಯದ ನಾಯಕತ್ವಕ್ಕೆ ಉಪಚಿಂತನೆ

ನವದೆಹಲಿ:ಆ-25: ನೂತನ ಸಚಿವರಿಗೆ ಖಾತೆ ಹಂಚಿಕೆ ಕಗ್ಗಂಟಾಗಿರುವ ಮಧ್ಯೆ 2-3 ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ಬಗ್ಗೆ ಹೈಕಮಾಂಡ್ ಗಂಭೀರ ಆಲೋಚನೆ ನಡೆಸಿದೆ. ಈ ಬಗ್ಗೆ ರಾಜ್ಯ ಬಿಜೆಪಿ ನಾಯಕರಿಂದ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಪ್ರತ್ಯೇಕವಾಗಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಕೂಡ ಕೆಲವು ದಿನಗಳಿಂದ ಬೇರೆ ಬೇರೆ ನಾಯಕರನ್ನು ಸಂರ್ಪಸಿದ್ದಾರೆ ಎಂದು ತಿಳಿದುಬಂದಿದೆ.

ಯಡಿಯೂರಪ್ಪ ನಾಯಕತ್ವದ ಬಗ್ಗೆ ಅಸ್ಪಷ್ಟತೆ ಇಲ್ಲ. ಭವಿಷ್ಯದ ದೃಷ್ಟಿಯಿಂದ ಎರಡನೇ ತಲೆಮಾರಿನ ನಾಯಕರನ್ನು ಈಗಿನಿಂದಲೇ ಸಜ್ಜುಗೊಳಿಸಬೇಕು ಎನ್ನುವುದು ವರಿಷ್ಠರ ಚಿಂತನೆ. ಈ ನಿಟ್ಟಿನಲ್ಲಿ ದಲಿತ, ಇತರ ಹಿಂದುಳಿದ, ಒಕ್ಕಲಿಗ ಹಾಗೂ ಲಿಂಗಾಯತ ಮುಖಂಡರಿಗೆ ಮಹತ್ತರ ಸ್ಥಾನಗಳನ್ನು ನೀಡಿ ಪಕ್ಷ ಸಂಘಟನೆಗೆ ಒತ್ತು ನೀಡಬೇಕೆಂಬ ಚರ್ಚೆ ವರಿಷ್ಠರ ವಲಯದಲ್ಲಿ ನಡೆದಿದೆ.

ದಲಿತ ಸಮುದಾಯದ ಗೋವಿಂದ ಕಾರಜೋಳ, ಒಕ್ಕಲಿಗ ಡಾ.ಅಶ್ವತ್ಥ ನಾರಾಯಣ, ಒಬಿಸಿ ಕೋಟಾದಲ್ಲಿ ಶ್ರೀರಾಮುಲು ಮತ್ತು ಕೆ.ಎಸ್.ಈಶ್ವರಪ್ಪ ಹೆಸರು ಬಲವಾಗಿ ಕೇಳಿಬಂದಿದೆ. ಬಿಎಸ್​ವೈ ಜತೆಗೆ ಈ ನಾಯಕರನ್ನೂ ಸರ್ಕಾರದ ಮುಖ್ಯವೇದಿಕೆಗೆ ತಂದಲ್ಲಿ ಭವಿಷ್ಯದಲ್ಲಿ ನಾಯಕತ್ವದ ಕುರಿತು ಸ್ಪಷ್ಟ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲದಿದ್ದಲ್ಲಿ ನಾಯಕತ್ವವೇ ಸಮಸ್ಯೆಯಾಗಿ ಕಾಡೀತು ಎನ್ನುವುದು ಹೈಕಮಾಂಡ್ ಅಭಿಪ್ರಾಯ ಎನ್ನಲಾಗಿದೆ.

ರಾಜ್ಯ ಬಿಜೆಪಿಯ ಕೆಲವು ಹಿರಿಯ ನಾಯಕರಲ್ಲಿ ಡಿಸಿಎಂ ಹುದ್ದೆಗೆ ಯಾರನ್ನು ಆಯ್ಕೆ ಮಾಡಬಹುದೆಂದು ವರಿಷ್ಠರು ಕೇಳಿದ್ದ ವೇಳೆ ಅಶ್ವತ್ಥ ನಾರಾಯಣ, ಕಾರಜೋಳ, ಶ್ರೀರಾಮುಲು, ಈಶ್ವರಪ್ಪ ಹೆಸರು ಪ್ರಸ್ತಾಪವಾಗಿದೆ. ಈ ಮಧ್ಯೆ, ಡಿಸಿಎಂ ಸ್ಥಾನಗಳ ಕುರಿತು ಯಡಿಯೂರಪ್ಪ ಸಹಮತ ವ್ಯಕ್ತಪಡಿಸಿಲ್ಲ ಎಂದೂ ಹೇಳಲಾಗುತ್ತಿದೆ. ಮಹತ್ವದ ಖಾತೆಗಳನ್ನು ಬಿಜೆಪಿ ಮುಖಂಡರಿಗೆ ನೀಡೋಣ. ಸದ್ಯಕ್ಕೆ ಡಿಸಿಎಂ ಹುದ್ದೆ ಸೃಷ್ಟಿಸುವ ಅಗತ್ಯವಿಲ್ಲ ಎಂದಿರುವ ಬಿಎಸ್​ವೈ, ಪ್ರತ್ಯೇಕ ಅಧಿಕಾರ ಕೇಂದ್ರಗಳ ಅನಿವಾರ್ಯತೆಯನ್ನು ಪ್ರಶ್ನಿಸಿದ್ದಾರೆ. ಈ ಧೋರಣೆ ಹೈಕಮಾಂಡ್​ಗೆ ಪಥ್ಯವೆನಿಸಿಲ್ಲ. ಖಾತೆ ಹಂಚಿಕೆ ಸಂಬಂಧ ದೆಹಲಿಯಲ್ಲಿ ಅಮಿತ್ ಷಾ ಭೇಟಿಗೆ ಬಿಎಸ್​ವೈ ಅವಕಾಶ ಕೇಳಿದಾಗಲೂ ಅವರು ನಿರಾಕರಿಸಿರುವುದು ಈ ಅಸಮಾಧಾನದ ಸೂಚನೆ ಎಂಬುದು ರಾಜ್ಯ ಬಿಜೆಪಿ ಪಡಸಾಲೆಯಲ್ಲಿ ಕೇಳಿಬರುತ್ತಿರುವ ಮಾತು.

ಈಶ್ವರಪ್ಪ ಶಿವಮೊಗ್ಗದವರೇ ಆಗಿರುವುದರಿಂದ ಅವರಿಗೆ ಡಿಸಿಎಂ ಸ್ಥಾನ ನೀಡಿದಲ್ಲಿ ಈ ಭಾಗದ ಇಬ್ಬರಿಗೆ ಸಿಎಂ, ಡಿಸಿಎಂ ಹುದ್ದೆ ಕೊಟ್ಟಂತಾಗುವುದು. ಪ್ರದೇಶವಾರು ಆದ್ಯತೆ ಪರಿಗಣಿಸಿ ಶ್ರೀರಾಮುಲು ಡಿಸಿಎಂ ಮಾಡಿದಲ್ಲಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬಿಜೆಪಿ ಬೆಂಬಲಿಸುವ ಹಿಂದುಳಿದ ಸಮುದಾಯಗಳನ್ನು ಮತ್ತಷ್ಟು ವಿಶ್ವಾಸಕ್ಕೆ ತೆಗೆದುಕೊಂಡಂತಾಗುತ್ತದೆ. ಇದರಿಂದ ಹಿಂದುಳಿದ ಮತಬ್ಯಾಂಕ್ ಅನ್ನು ಮತ್ತಷ್ಟು ಬಿಗಿಯಾಗಿಟ್ಟುಕೊಳ್ಳಬಹುದು ಎಂಬ ಚರ್ಚೆಗಳೂ ನಡೆದಿವೆ.

ಲಿಂಗಾಯತ ಸಮುದಾಯದ ಲಕ್ಷ್ಮಣ ಸವದಿ ಬಗ್ಗೆ ಹೈಕಮಾಂಡ್​ನಲ್ಲಿ ಸದಭಿಪ್ರಾಯವಿದೆ. ಅಲ್ಲದೆ, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಶಿಫಾರಸಿನ ಮೇರೆಗೆ ಸಚಿವ ಸ್ಥಾನವೂ ಲಭಿಸಿದೆ. ಆರಂಭದಲ್ಲಿ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ ನೀಡುವ ಚರ್ಚೆ ಆಗಿತ್ತಾದರೂ, ಲಿಂಗಾಯತ ಸಮುದಾಯದ ಇಬ್ಬರಿಗೆ ಆಯಕಟ್ಟಿನ ಹುದ್ದೆ ನೀಡುವುದು ಸರಿಯಲ್ಲ ಎಂದು ಆ ಚರ್ಚೆಯನ್ನು ಅಲ್ಲಿಗೇ ಬಿಡಲಾಗಿತ್ತು. ಒಕ್ಕಲಿಗ ಸಮುದಾಯದ ಡಾ.ಅಶ್ವತ್ಥ ನಾರಾಯಣರನ್ನು ಡಿಸಿಎಂ ಮಾಡಿದಲ್ಲಿ ಅದೇ ಸಮುದಾಯದ ಆರ್.ಅಶೋಕ್ ಸುಮ್ಮನಿರುತ್ತಾರೆಯೇ ಎಂಬ ಪ್ರಶ್ನೆಗಳೂ ಇವೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಡಿಸಿಎಂ ಆಗಿದ್ದ ಅಶೋಕ್ ಈ ಬಾರಿಯೂ ಅದೇ ಹುದ್ದೆ ನಿರೀಕ್ಷೆಯಲ್ಲಿದ್ದಾರೆ. ಆದರೆ ಹೈಕಮಾಂಡ್ ಆಲೋಚನೆ ಬೇರೆಯೇ ಆಗಿರುವುದರಿಂದ ಏನೂ ಬೇಕಾದರೂ ಆಗಬಹುದು ಎಂದು ಮೂಲಗಳು ತಿಳಿಸಿವೆ.

ರಾಜ್ಯಾಧ್ಯಕ್ಷರಾಗಿ ದಕ್ಷಿಣ ಕನ್ನಡ ಸಂಸದ ನಳಿನ್​ಕುಮಾರ್ ಕಟೀಲ್ ನೇಮಕದಲ್ಲೂ ರಾಜ್ಯ ಬಿಜೆಪಿ ನಾಯಕರಿಗಿಂತ ಹೆಚ್ಚು ಆರ್​ಎಸ್​ಎಸ್ ಮತ್ತು ಬಿ.ಎಲ್.ಸಂತೋಷ್ ಪಾತ್ರವೇ ಹೆಚ್ಚಿತ್ತು. ರಾಜ್ಯ ಸರ್ಕಾರ ಹಾಗೂ ಬಿಜೆಪಿ ಮೇಲೆ ಹೈಕಮಾಂಡ್ ತನ್ನ ನಿಯಂತ್ರಣ ಸಾಧಿಸುವ ಉದ್ದೇಶದಿಂದಲೇ ಸಂಘ-ಪಕ್ಷ ನಿಷ್ಠ ಕಟೀಲ್ ಹೆಗಲಿಗೆ ಅಧ್ಯಕ್ಷ ಹುದ್ದೆಯ ಜವಾಬ್ದಾರಿ ಏರಿಸಿತು. ಪಕ್ಷ ಮತ್ತು ಸರ್ಕಾರದಲ್ಲಿ ರಾಜ್ಯ ನಾಯಕತ್ವ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವುದು ಬೇಡ ಎಂದೇ ವರಿಷ್ಠರು ಈ ತೀರ್ಮಾನ ಪ್ರಕಟಿಸಿದ್ದರು.
ಕೃಪೆ:ವಿಜಯವಾಣಿ

ಭವಿಷ್ಯದ ನಾಯಕತ್ವಕ್ಕೆ ಉಪಚಿಂತನೆ
bjp-thinking-to-create-2-3-vice-chief-minister-post