ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರಿಗೆ ‘ಜೀವಮಾನ ಸಾಧನೆ ಪ್ರಶಸ್ತಿ….

ಮೈಸೂರು,ಆ,24,2019(www.justkannada.in): ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರಿಗೆ ಈ ಸಾಲಿನ ‘ಜೀವಮಾನ ಸಾಧನೆ ‘ ಪ್ರಶಸ್ತಿ ಲಭಿಸಿದೆ. ಶಿಕ್ಷಣ ಕ್ಷೇತ್ರದಲ್ಲಿ ಪ್ರೊ.ಕೆ.ಎಸ್.ರಂಗಪ್ಪ ಅವರ  ಸಾಧನೆ ಪರಿಗಣಿಸಿ ಅವರಿಗೆ ಈ ಪ್ರಶಸ್ತಿ ಪ್ರಧಾನ ಮಾಡಲಾಗಿದೆ.

ಇಂಡಿಯಾ ಅಸೋಸಿಯೇಷನ್ ಕಾಂಗ್ರೆಸ್ -2019 (IAC) ವತಿಯಿಂದ ದಿಲ್ಲಿಯಲ್ಲಿ ಆ.23 ರಂದು  ಆಯೋಜಿಸಿದ್ದ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಸಿಂಗಾಪುರ, ಚೀನಾ, ಜರ್ಮನಿ, ಅಮೇರಿಕಾ, ಕೊರಿಯಾ, ಜಪಾನ್ ಸೇರಿದಂತೆ ವಿಶ್ವದ 19 ರಾಷ್ಟ್ರಗಳ 150 ಪ್ರತಿನಿಧಿಗಳು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.

ಇಂಡಿಯಾ ಅಸೋಸಿಯೇಷನ್ ಕಾಂಗ್ರೆಸ್ ಸಂಸ್ಥೆಯು, ಇಂಡಿಯನ್  ಪ್ರೊಫೆಷನಲ್ ಅಂಡ್  ಟ್ರೇಡ್ ಅಸೋಸಿಯೇಷನ್ಸ್ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಜತೆಗೆ ವಿಜ್ಞಾನ ಕ್ಷೇತ್ರದಲ್ಲಿನ ನೂತನ ಆವಿಷ್ಕಾರಗಳ ಬಗೆಗೆ ಬೆಳಕು ಚೆಲ್ಲುವ ವೇದಿಕೆಯನ್ನು ಒದಗಿಸುತ್ತದೆ. ಆಮೂಲಕ  ಸಂಶೋಧಕರಿಗೆ ಅಧ್ಯಾಯನ ನಡೆಸಲು ಪೂರಕವಾಗುವ ವಾತಾವರಣ ನಿರ್ಮಾಣ ಮಾಡುವ ಗುರಿ ಹೊಂದಿದೆ. ಇಂಥ ಐಎಸಿ ಸಂಸ್ಥೆ ಸರ್ವೆ ಮೂಲಕ ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಗುರುತಿಸಿ ಅವರನ್ನು ಜೀವಮಾನ ಸಾಧನೆ ( Life Time Achivement Award for 2018-19 ) ಪ್ರಶಸ್ತಿಗೆ ಆಯ್ಕೆ ಮಾಡುತ್ತದೆ.  ಈ  ಪೈಕಿ ಈ ಸಾಲಿನ ಪ್ರಶಸ್ತಿಗೆ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ಪ್ರೊ.ಕೆ.ಎಸ್.ರಂಗಪ್ಪ ಅವರನ್ನು ಆಯ್ಕೆ ಮಾಡಿ ಗೌರವಿಸಲಾಯಿತು.

Key words: ‘Lifetime Achievement Award’ – Prof. KS Rangappa-mysore