ವಾಹನ ಸಂಚಾರಕ್ಕೆ ಭಾಗಶಃ ಮುಕ್ತಗೊಂಡ ಬೆಂಗಳೂರು-ಮೈಸೂರು ರಸ್ತೆ.

ಬೆಂಗಳೂರು, ಆಗಸ್ಟ್ 25, 2022 (www.justkannada.in): ಮೈಸೂರು-ಬೆಂಗಳೂರು ನಡುವಿನ ಹೆದ್ದಾರಿಯಲ್ಲಿ ಒಂದು ಕಡೆಯಿಂದ ವಾಹನ ಸಂಚಾರಕ್ಕೆ ಭಾಗಶಃ ಮುಕ್ತಗೊಳಿಸಲಾಗಿದೆ. ಕಳೆದ ಎರಡು ದಿನಗಳಿಂದ, ಬಸವನಪುರದಿಂದ (ರಾಮನಗರದ ಬಳಿ) ಹೆಜ್ಜಾಲ ನಡುವಿನ ಹೆದ್ದಾರಿಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

ಈ ಭಾಗದ ಹೆದ್ದಾರಿಯನ್ನು ವಾಹನ ಸಂಚಾರಕ್ಕೆ ಆಗಸ್ಟ್ 15ರಂದು ಮುಕ್ತಗೊಳಿಸಬೇಕಾಗಿತ್ತು. ಆದರೆ ಕಾಮಾಗಾರಿಗಳು ನಡೆಯುತ್ತಿದ್ದುದರಿಂದ ಪ್ರಾಯೋಗಿಕ ವಾಹನ ಸಂಚಾರ ಮುಕ್ತಗೊಳಿಸುವ ದಿನಾಂಕ ವಿಳಂಬವಾಯಿತು. ಮತ್ತೊಂದೆಡೆ, ಹೆಜ್ಜಾಲದಿಂದ ರಾಮನಗರದ ಕಡೆಗಿನ ವಾಹನ ಸಂಚಾರ ಆಗಸ್ಟ್ ಅಂತ್ಯದಿಂದ ಆರಂಭಗೊಳ್ಳುವ ಸಾಧ್ಯತೆಗಳಿವೆ.

ಹೋಟೆಲ್ ಮಾಲೀಕರು ಅಸುಂತಷ್ಟ.

ಬೆಂಗಳೂರು-ಮೈಸೂರು ನಡುವೆ ಓಡಾಡುವ ವಾಹನ ಚಾಲಕರು ಹೊಸ ಹೆದ್ದಾರಿ ಭಾಗಶಃ ಸಂಚಾರಕ್ಕೆ ಮುಕ್ತಗೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದರೆ, ಈ ರಸ್ತೆಯ ಇಕ್ಕೆಲಗಳಲ್ಲಿರುವ ಹೋಟೆಲ್ ಮಾಲೀಕರು ಅಸಂತುಷ್ಟರಾಗಿದ್ದಾರೆ.

ಪ್ರಸ್ತುತ, ಬೆಂಗಳೂರು-ಮೈಸೂರು ಹೆದ್ದಾರಿಯ ಎರಡೂ ಕಡೆಗಳಲ್ಲಿ ಅನೇಕ ಪ್ರಸಿದ್ಧ ಹೋಟೆಲ್‌ ಗಳಿದ್ದು, ಆಹಾರ ಪ್ರಿಯರ ಸ್ವರ್ಗದಂತಾಗಿದೆ. ಈ ರಸ್ತೆಯಲ್ಲಿ ವಿವಿಧ ಖಾದ್ಯಗಳನ್ನು ಒದಗಿಸುವ ಅನೇಕ ಹೋಟೆಲ್‌ಗಳಿವೆ. ಈ ಹೋಟೆಲ್‌ ಗಳು ಬಿಡದಿಯ ತಟ್ಟೆ-ಇಡ್ಲಿ ಹೋಟೆಲ್‌ ಗಳಿಂದ ಆರಂಭವಾಗಿ, ಉದ್ದಕ್ಕೂ ಸಾಂಪ್ರದಾಯಿಕ ಆಹಾರ, ಖಾದ್ಯಗಳು ಹಾಗೂ ಮದ್ದೂರು ಬಳಿ ಪ್ರಸಿದ್ಧ ಮದ್ದೂರು ವಡೆ ಹೋಟೆಲ್‌ ಗಳು, ಇತ್ಯಾದಿಗಳಿಂದ ಕೂಡಿವೆ. ನೂತನ ಆರು-ಪಥಗಳ ಹೆದ್ದಾರಿ ಬೆಂಗಳೂರು-ಮೈಸೂರು ನಡುವಿನ ಪ್ರಯಾಣವನ್ನು ೭೫ ನಿಮಿಷಗಳ್ಟು ಕಡಿತಗೊಳಿಸಲಿದೆ. ಆದರೆ ಈ ರಸ್ತೆಯಲ್ಲಿ ಓಡಾಡುವ ವಾಹನಗಳಿಗೆ ನಡುವೆ ಸರ್ವೀಸ್ ರಸ್ತೆಗೆ ಪಥ ಬದಲಾಯಿಸಲು ಆಯ್ಕೆಗಳು ಬಹಳ ಸೀಮಿತವಾಗಿವೆ. ಇದರಿಂದಾಗಿ ಹೋಟೆಲ್ ವ್ಯಾಪಾರಸ್ಥರಿಗೆ ಹೊಡೆತ ಬೀಳಲಿದೆ.

ಮೂಲಗಳ ಪ್ರಕಾರ ಬಿಡದಿ ಬಳಿ ಇರುವ ಜನಪ್ರಿಯ ತಟ್ಟೆ ಇಡ್ಲಿ ಹೋಟೆಲ್‌ ಗಳು ಕಳೆದ ಕೆಲವು ದಿನಗಳಿಂದ ವ್ಯಾಪಾರದಲ್ಲಿ ನಷ್ಟವನ್ನು ಅನುಭವಿಸುತ್ತಿವೆ. ಏಕೆಂದರೆ ಬಹುಪಾಲು ಗ್ರಾಹಕರು ಬೈಪಾಸ್‌ನಲ್ಲಿ ನೇರವಾಗಿ ಸಾಗುತ್ತಾರೆ, ಬಿಡದಿಗೆ ಪ್ರವೇಶಿಸುವುದೇ ಇಲ್ಲ.

ಶೀಘ್ರದಲ್ಲೇ ಮೊದಲ ಹಂತದ ಕಾಮಗಾರಿಗಳು ಪೂರ್ಣ

ಮೊದಲ ಹಂತದ ಕಾಮಗಾರಿಗಳ ಪೈಕಿ ನೈಸ್ ರಸ್ತೆ ಜಂಕ್ಷನ್‌ನಿಂದ (ಕೆಂಗೇರಿ ಬಳಿ) ನಿಡಘಟ್ಟ ನಡುವಿನ ಆರು ಪಥಗಳ ರಸ್ತೆ ಕಾಮಗಾರಿ ಸೇರಿದೆ. ಈ ಭಾಗದ ಹೆದ್ದಾರಿ ಕಾಮಗಾರಿ ಬಹುಪಾಲು ಪೂರ್ಣಗೊಂಡಿದ್ದು, ಯಾವುದೇ ಸಮಯದಲ್ಲಾದರೂ ವಾಹನ ಸಂಚಾರಕ್ಕೆ ಮುಕ್ತಗೊಳ್ಳಬಹುದಾಗಿದೆ.

ಆದರೆ, ನಿಡಘಟದಿಂದ ಮೈಸೂರು ವರ್ತುಲ ರಸ್ತೆ ನಡುವಿನ ಎರಡನೇ ಹಂತದ ಕಾಮಗಾರಿಗಳು ಇನ್ನೂ ಪೂರ್ಣಗೊಳ್ಳಬೇಕಿದೆ. ಈ ಭಾಗದ ಹೆದ್ದಾರಿ ಕಾಮಗಾರಿಗಲು ಸೆಪ್ಟೆಂಬರ್ ವೇಳೆಗೆ ಪೂರ್ಣಗೊಳ್ಳಬೇಕಿತ್ತು. ಆದರೆ ಇನ್ನೂ ವಿಳಂಬವಾಗುವ ಸಾಧ್ಯತೆ ಇದೆ.

ಸಂಬಂಧಪಟ್ಟ ಅಧಿಕಾರಿಗಳ ಪ್ರಕಾರ ಈ ವರ್ಷ ದಸರಾ ವೇಳೆಗೆ ಮುಖ್ಯ ರಸ್ತೆ ಮಾರ್ಗದ ಕಾಮಗಾರಿಗಳೂ ಪೂರ್ಣಗೊಳ್ಳಲಿದೆ. ಆದರೆ ಸರ್ವೀಸ್ ರಸ್ತೆಗಳು ಹಾಗೂ ಇತರೆ ಬೈಪಾಸ್ ರಸ್ತೆಗಳ ಕಾಮಗಾರಿಗಳು ಮುಂದಿನ ವರ್ಷ ಫೆಬ್ರವರಿ ವೇಳೆಗೆ ಪೂರ್ಣಗೊಳ್ಳಬಹುದು ಎನ್ನುತ್ತಾರೆ.

ಶೀಘ್ರದಲ್ಲೇ ಟೋಲ್ ಸಂಗ್ರಹ ಆರಂಭ

ಬೆಂಗಳೂರು-ಮೈಸೂರು ನಡುವಿನ ನೂತನ ಹೆದ್ದಾರಿ ಕಾಮಗಾರಿಗಳ ಮೊದಲ ಹಂತದ ವೆಚ್ಚ ಒಟ್ಟು ರೂ.೩,೫೦೧ ಕೋಟಿ ಆಗಿದ್ದು, ಎರಡನೇ ಹಂತದ ಕಾಮಗಾರಿಗಳ ವೆಚ್ಚ ರೂ.೨,೯೨೦ ಕೋಟಿ ಎಂದು ಅಂದಾಜಿಸಲಾಗಿದೆ. ಈ ಯೋಜನೆಯಡಿ, ಬೆಂಗಳೂರು-ಮೈಸೂರು ನಡುವೆ ಬರುವ ಪಟ್ಟಣಗಳಲ್ಲಿ ಸಂಚಾರ ದಟ್ಟಣೆಯನ್ನು ತಪ್ಪಿಸುವ ಸಲುವಾಗಿ ಐದು ಬೈಪಾಸ್ ರಸ್ತೆಗಳನ್ನು ಸೇರ್ಪಡೆಗೊಳಿಸಲಾಗಿದೆ.

ಬಿಡದಿ ಬೈಪಾಸ್ ರಸ್ತೆ ೬.೯ ಕಿ.ಮೀ. ಉದ್ದವಿದ್ದು, ರಾಮನಗರ-ಚನ್ನಪಟ್ಟಣ ನಡುವಿನ ಬೈಪಾಸ್ ರಸ್ತೆ ಉದ್ದ ೨೨.೩೫ ಕಿ.ಮೀ., ಮದ್ದೂರು ೪.೫ ಕಿ.ಮೀ., ಮಂಡ್ಯ ೧೦ ಕಿಮೀ ಹಾಗೂ ಶ್ರೀರಂಗಪಟ್ಟಣ ೮ ಕಿ.ಮೀ. ಉದ್ದವಿದೆ. ಇದರ ಜೊತೆಗೆ, ಎಂಟು ಕಿ.ಮೀ. ಉದ್ದ ಕಾರಿಡಾರ್ ಒಳಗೊಂಡಿದ್ದು, ಇದರಡಿ ಒಂಬತ್ತು ಮುಖ್ಯ ಸೇತುವೆಗಳು, ೪೪ ಕಿರು ಸೇತುವೆಗಳು ಹಾಗೂ ನಾಲ್ಕು ರೈಲ್ವೆ ಮೇಲ್ಸೇತುವೆಗಳು ಸೇರಿವೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಹೆಚ್‌ಎಐ) ಪ್ರಕಾರ, ರಾಮನಗರದ ಬಳಿ ಬರುವ ಬೈಪಾಸ್ ರಸ್ತೆಯಲ್ಲಿ ವಿವಿಧ ಮೂಲಸೌಕರ್ಯಗಳೊಂದಿಗೆ ಹೊಸ ಲೇಬೈ ಇರಲಿದೆ. ಕುಂಬಳಗೋಡು ಹಾಗೂ ಶ್ರೀರಂಗಪಟ್ಟಣದ ಬಳಿ ಟೋಲ್ ಬೂತ್‌ ಗಳಿರಲಿವೆ. ಮೊದಲ ಹಂತದ ಕಾಮಗಾರಿಗಳು ಪೂರ್ಣಗೊಂಡು, ವಾಹನಗಳ ಸಂಚಾರಕ್ಕೆ ಮುಕ್ತೊಗೊಳಿಸುತ್ತಲೇ ಟೋಲ್ ಸಂಗ್ರಹ ಆರಂಭಿಸಲು ಪ್ರಸ್ತಾಪಿಸಲಾಗಿದೆ.

ಶ್ರೀರಂಗಪಟ್ಟಣದ ಬಳಿ ಇರುವ ಎರಡನೇ ಟೋಲ್ ಬೂತ್ ಅನ್ನು ಸಂಪೂರ್ಣ ಹೆದ್ದಾರಿ ಕಾಮಗಾರಿಗಳು ಪೂರ್ಣಗೊಂಡ ನಂತರ ಆರಂಭಿಸಲಾಗುವುದು.

ಸುದ್ದಿ ಮೂಲ: ಬೆಂಗಳೂರು ಮಿರರ್

Key words: Bangalore-Mysore -road p- opened – vehicular- traffic.