ಅತಿರೇಕದ ವರ್ತನೆ ಬಿಡಿ ; ಒಬ್ಬ ಸ್ವಾಮೀಜಿ ಯಾವುದೇ ಮುಖ್ಯಮಂತ್ರಿಗಿಂತ ದೊಡ್ಡವರಾಗಲಾರರು.

 

ಬೆಂಗಳೂರು, ಫೆ.07, 2021 : (www.justkannada.in news ) ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಪಾದಯಾತ್ರೆ ನಡೆಸುತ್ತಿರುವ ಕೂಡಲಸಂಗಮ ಪೀಠದ ಜಗದ್ಗುರು ಬಸವ ಮೃತ್ಯುಂಜಯ ಸ್ವಾಮೀಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರನ್ನು ವೈಯಕ್ತಿಕವಾಗಿ ನಿಂದಿಸಿದ್ದಾರೆ.

“ಅವರಿಗೆ ಬುದ್ದಿ ಭ್ರಮಣೆಯಾಗಿದೆ.ಆದ್ದರಿಂದ ಅವರನ್ನು ಪದಚ್ಯುತಿಗೊಳಿಸಬೇಕು”ಎಂದು ಭಿನ್ನಮತೀಯ ರಾಜಕೀಯ ನಾಯಕರ ರೀತಿಯಲ್ಲಿ ಮಾತನಾಡಿದ್ದಾರೆ. ಇದು ಅತಿರೇಕದ ನಡವಳಿಕೆ ಮತ್ತು ಆಘಾತಕಾರಿ ಬೆಳವಣಿಗೆ. ಬಸವ ಮೃತ್ಯುಂಜಯ ಸ್ವಾಮೀಜಿಗಳಂತಹ ಮೂರು ಸಾವಿರಕ್ಕೂ ಹೆಚ್ಚು ಸ್ವಾಮೀಜಿಗಳು,ಜಗದ್ಗುರುಗಳು ಮತ್ತು ಧರ್ಮ ಗುರುಗಳು ಕರ್ನಾಟಕದಲ್ಲಿದ್ದಾರೆ.ಅವರು ಕೆಲವು ಜಾತಿ ,ಧರ್ಮ ಮತ್ತುಪ್ರದೇಶಗಳಿಗೆ ಸೀಮಿತವಾಗಿದ್ದರೆ .

jk

ಆದರೆ ಸರ್ವ ಧರ್ಮಗಳ ಸಾರವನ್ನು ಹೊಂದಿರುವ ಸಂವಿಧಾನವನ್ನು ಪ್ರತಿನಿಧಿಸುವ ಮುಖ್ಯಮಂತ್ರಿ ಇಡೀ ರಾಜ್ಯಕ್ಕೆ ಇರುವುದು ಒಬ್ಬರೇ.ಕೆಲವು ತಿಂಗಳ ಹಿಂದೆ ಇದೇ ಪಂಚಮಸಾಲಿ ಸಮಾಜದ ವಚನಾನಂದ ಸ್ವಾಮೀಜಿ ಸಮಾರಂಭವೊಂದರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಬೆದರಿಸುವ ರೀತಿಯಲ್ಲಿ ಮಾತನಾಡಿದ್ದರು.

ಈ ಹಿಂದೆ ಕೂಡ ಕೆಲವು ಸ್ವಾಮೀಜಿಗಳು ಇದೇ ರೀತಿ ಬೆದರಿಕೆ ತಂತ್ರ ಅನುಸರಿಸಿದ್ದರು.ದೇಶಕ್ಕೆ ಮಾದರಿ ಆಗುವಂತಹ ಸಿ ಇ ಟಿ ವ್ಯವಸ್ಥೆಯನ್ನು ಜಾರಿಗೆ ತಂದು ತಳ ಸಮುದಾಯದ ಮಕ್ಕಳೂ ಡಾಕ್ಟರು ಮತ್ತು ಇಂಜಿನಿಯರ್ ಆಗುವ ಕನಸು ಕಾಣುವಂತೆ ಮಾಡಿದ್ದ ಆಗಿನ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರಿಗೆ “ಸುಟ್ಟು ಬೂದಿಯಾಗು” ಎಂದು ಸಿರಿಗೆರೆ ಸ್ವಾಮೀಜಿ ಶಾಪ ಹಾಕಿದ್ದರು.ಎರಡು ವರ್ಷಗಳ ಹಿಂದೆ ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದ ಸ್ವಾಮೀಜಿ ಮೀಸಲಾತಿ ಬೇಡಿಕೆಗೆ ಸಂಬಂಧಿಸಿದಂತೆ ಆಗಿನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಪದಚ್ಯುತಗೊಳಿಸುವುದಾಗಿ ಬೆದರಿಕೆ ಹಾಕಿದ್ದರು.

bangalore-karnataka-politics-bsy-swamiji-panchamasali

ಸ್ವಾಮೀಜಿಗಳ ಮಿತಿಮೀರಿದ ವರ್ತನೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿದೆ.ಅವರು ತಮ್ಮ ಮಿತಿಯನ್ನು ಅರಿತುಕೊಂಡರೆ ಒಳ್ಳೆಯದು.ಹೇಗೆ ನೋಡಿದರೂ ಒಬ್ಬ ಸ್ವಾಮೀಜಿ ಯಾವುದೇ ಮುಖ್ಯಮಂತ್ರಿಗಿಂತ ದೊಡ್ಡವರಾಗಲಾರರು.ಆದ್ದರಿಂದ ಇಂತಹ ನಡವಳಿಕೆಯನ್ನು ಖಂಡಿಸಿ ಮುಖ್ಯಮಂತ್ರಿ ಸ್ಥಾನದ ಘನತೆ ಮತ್ತು ಗೌರವವನ್ನು ಕಾಪಾಡುವುದು ಎಲ್ಲರ ಕರ್ತವ್ಯ ವಾಗಿದೆ.

ಕೃಪೆ : Rudrappa Channabasappa/ facebook

key words : bangalore-karnataka-politics-bsy-swamiji-panchamasali